ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ವಾಕ್ಸಮರಗಳ ಮೂಲಕ ಮತ್ತು ನೇರ ಚುನಾವಣೆಗಳ ಮೂಲಕ ಗೆಲುವಿನ ದಡ ಸೇರಲು ದೇಶಾದ್ಯಂತ ನಾಯಕರು ಟೀಕೆ ಮತ್ತು ಪ್ರತಿಟೀಕೆಗಳನ್ನು ತೀಕ್ಷ್ಣಗೊಳಿಸುತ್ತಿದ್ದಾರೆ. ಪಕ್ಷಗಳು ಮತ್ತು ನಾಯಕರು ಗೆಲುವಿಗಾಗಿ ತಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿರುವ ಈ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎಐ), ಡೀಪ್‌ಫೇಕ್ ಮತ್ತು ಧ್ವನಿ ಕ್ಲೋನಿಂಗ್ ತಂತ್ರಜ್ಞಾನಗಳ ಬಳಕೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮುಂದುವರಿದ ತಂತ್ರಜ್ಞಾನವು ಅನುಕೂಲ ಮತ್ತು ಅಪಾಯ ಎರಡನ್ನೂ ತರುತ್ತದೆ ಎಂಬುದು ಸತ್ಯ.
ಚುನಾವಣಾ ವ್ಯವಸ್ಥೆಗೆ ಅಪಾಯ ಹೇಗೆ?: ಈ ಸಾಧನಗಳನ್ನು ಬಳಸಿ ಸೈಬರ್ ಅಪರಾಧಿಗಳು ವ್ಯಕ್ತಿಯ ಚಿತ್ರವನ್ನು ಬದಲಾಯಿಸುವುದು ಮತ್ತು ಅವರ ಮಾತುಗಳನ್ನು ತಿರುಚುವುದು ಮುಂತಾದ ಕ್ರಿಯೆಗಳೊಂದಿಗೆ ವಿನಾಶಕಾರಿ ಆಟಕ್ಕೆ ಮುಂದಾಗಿದ್ದಾರೆ. ಮತದಾರರ ಮೇಲೆ ಪ್ರಭಾವ ಬೀರಲು ಚುನಾವಣೆಯಲ್ಲಿ ಇಂತಹ ತಾಂತ್ರಿಕ ಗಿಮಿಕ್‌ಗಳನ್ನು ಬಳಸುವ ಸಾಧ್ಯತೆಯಿದೆ. ಇದು ಒಂದು ಪಕ್ಷದ ಪರ/ವಿರುದ್ಧವಾಗಿ ಪಕ್ಷಪಾತದಿಂದ ಕೂಡಿರಬಹುದು. ಆದರೆ ಇಂಥ ತಿರುಚಿದ ತಂತ್ರಜ್ಞಾನದ ಕಂಟೆಂಟ್‌ಗಳು ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಪಡಿಸುತ್ತವೆ ಮತ್ತು ಜನರಲ್ಲಿ ವ್ಯಾಪಕ ಗೊಂದಲ ಮೂಡಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ಉದಾಹರಣೆಗಳು: ಈ ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಎಐ ತಂತ್ರಜ್ಞಾನದ ಸಾಧನಗಳು ಈಗ ಸುಲಭವಾಗಿ ಮತ್ತು ಅಗ್ಗವಾಗಿ ಸಿಗುತ್ತಿವೆ. ಜನರನ್ನು ಮೂರ್ಖರನ್ನಾಗಿಸುವ ಡೀಪ್ ಫೇಕ್ಗಳನ್ನು ತಯಾರಿಸಲು ಈಗ ದೊಡ್ಡ ಕಂಪನಿಗಳೇ ಆಗಬೇಕಿಲ್ಲ. ಸ್ವಲ್ಪ ಮಟ್ಟಿನ ಜ್ಞಾನ ಹೊಂದಿರುವ ಜನರು ಲ್ಯಾಪ್‌ಟಾಪ್ ಸಹಾಯದಿಂದ ನಕಲಿ ಚಿತ್ರ ಹಾಗೂ ವೀಡಿಯೊಗಳನ್ನು ತಯಾರಿಸಿ ಶೇರ್ ಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕಮಲ್ ನಾಥ್ ಅವರ ನಕಲಿ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವುದು ಇದಕ್ಕೆ ಉದಾಹರಣೆಯಾಗಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಚುನಾವಣೆಗಳಲ್ಲಿ, ಸೈಬರ್ ಅಪರಾಧಿಗಳು ಮತದಾರರನ್ನು ದಿಕ್ಕು ತಪ್ಪಿಸುವಂಥ ಡೀಪ್ ಫೇಕ್ ಚಿತ್ರ ಮತ್ತು ವೀಡಿಯೊಗಳನ್ನು ತಯಾರಿಸಿ ಅವನ್ನು ವೈರಲ್ ಮಾಡಿದ್ದರು. "ನಮ್ಮ ವಿರುದ್ಧ ಭಾರಿ ಮೋಸ ನಡೆದಿರುವುದರಿಂದ ಯಾರೂ ಮತದಾನಕ್ಕೆ ಬರಬೇಡಿ." ಎಂದು ರಾಜಕೀಯ ನಾಯಕರು ಹೇಳಿದಂತೆ ನಕಲಿ ವೀಡಿಯೊಗಳನ್ನು ತಯಾರಿಸಿ ಹರಿಬಿಡಲಾಗಿತ್ತು. ಈ ವೀಡಿಯೊ ಸುಳ್ಳು ಎಂದು ರಾಜಕೀಯ ನಾಯಕರು ಮತದಾರರಿಗೆ ತಿಳಿಸಲು ಪ್ರಯತ್ನಿಸಿದರಾದರೂ ಅದು ಕೆಲಸ ಮಾಡಲಿಲ್ಲ. ಹೀಗೆ ಡೀಪ್ ಫೇಕ್ ತನ್ನ ಅಪಾಯಕಾರಿ ಆಟ ಆಡಿತ್ತು.
ತಜ್ಞರ ಎಚ್ಚರಿಕೆ!: ಮೊಬೈಲ್ ಡೇಟಾ ಈಗ ಭಾರತದಲ್ಲಿ ಅಗ್ಗವಾಗಿ ಲಭ್ಯವಿರುವುದರಿಂದ, ಸ್ಮಾರ್ಟ್ ಫೋನ್ಗಳ ಬಳಕೆ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿನ ಡೀಪ್ ಫೇಕ್‌ಗಳು ಕಾಡ್ಗಿಚ್ಚಿನಂತೆ ಹರಡಬಹುದು ಮತ್ತು ಅಭ್ಯರ್ಥಿಗಳ ವಿರುದ್ಧ ಮತದಾರರ ಕೋಪವನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ನೀವು ಮತ ಚಲಾಯಿಸಿದರೂ ಅದು ವ್ಯರ್ಥ ಎಂದು ಜನರನ್ನು ನಂಬಿಸುವ ಅಪಾಯವಿದೆ. ಎಐ ಸೃಷ್ಟಿಸಿದ ನಕಲಿ ಸುದ್ದಿಗಳು ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಸಾರ್ವಜನಿಕರ ವಿಶ್ವಾಸವನ್ನು ನಾಶಪಡಿಸುವ ಅಪಾಯವನ್ನು ಸೃಷ್ಟಿಸುತ್ತದೆ.