India Smartphone Market: ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ಭಾರಿ ದೊಡ್ಡದು. ಈ ಕಾರಣಕ್ಕೆ ಪ್ರತಿಯೊಂದು ಕಂಪನಿಯೂ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶಿಸಲು ಇಷ್ಟಪಡುತ್ತವೆ.
ಹೆಚ್ಚಿತ್ತಿರುವ ಸ್ಪರ್ಧೆಯಿಂದಾಗಿ ಪ್ರತಿಯೊಂದು ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಉಳಿಯುವತ್ತ ಗಮನಹರಿಸುತ್ತದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರತಿ ವರ್ಷ ಸುಮಾರು ಶೇಕಡಾ 1 ರಷ್ಟು ಬೆಳೆಯುತ್ತಿದೆ. ಆದರೆ, ಆದಾಯವು ಪ್ರತಿ ವರ್ಷ ಶೇಕಡ 9 ರಷ್ಟು ಏರುತ್ತಿದೆ. 5G ಮತ್ತು AI ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಬಳಕೆದಾರರು ತಮ್ಮ ಫೋನ್‌ಗಳನ್ನು ಅಪ್‌ಗ್ರೇಡ್ ಮಾಡುತ್ತಿರುವುದು ಗಮನಾರ್ಹ..
ಇನ್ನು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಸಗಟು ಆದಾಯವು ವರ್ಷದಿಂದ ವರ್ಷಕ್ಕೆ ಏರುತ್ತಿದೆ. 2024ರಲ್ಲಿ ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಆದಾಯ ಶೇ. 9 ರಷ್ಟು ಏರಿಕೆಯಾಗಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಆಪಲ್ ಸತತ ಎರಡನೇ ವರ್ಷವೂ ಮಾರುಕಟ್ಟೆ ಮೌಲ್ಯದಲ್ಲಿ ಮುಂಚೂಣಿಯಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಆಪಲ್ 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಟಾಪ್ 5 ಬ್ರಾಂಡ್‌ಗಳಲ್ಲಿ ಸ್ಥಾನ ಪಡೆದಿದೆ.
ಕಸ್ಟಮರ್ ಬೇಡಿಕೆ ಕಡಿಮೆಯಾಗುವುದು ಮತ್ತು ವರ್ಷದ ಅಂತ್ಯದ ವೇಳೆಗೆ ಸ್ಥೂಲ ಆರ್ಥಿಕ ಒತ್ತಡಗಳಂತಹ ಸವಾಲುಗಳ ಹೊರತಾಗಿಯೂ ಕಳೆದ ವರ್ಷ ಸ್ಮಾರ್ಟ್‌ಫೋನ್ ಸಾಗಣೆಗಳು 153 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿತ್ತು.
ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳತ್ತ ಗ್ರಾಹಕರು ಹೆಚ್ಚಿನ ಗಮನಹರಿಸುತ್ತಿದೆ. ಹೆಚ್ಚಿನ ಬೆಲೆಯ ಸಾಧನಗಳು, ವಿಶೇಷವಾಗಿ ರೂ. 30 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯ ಒಟ್ಟಾರೆ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಏಕೆಂದರೆ ಈ ವಿಭಾಗವು ಈಗ ದೇಶದ ಐದು ಸಾಗಣೆಗಳಲ್ಲಿ ಒಂದನ್ನು ಹೊಂದಿದೆ ಎಂದು ವರದಿ ತಿಳಿಸಿದೆ.
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಪ್ರಬುದ್ಧವಾಗುತ್ತಿದೆ. ಗ್ರಾಹಕರು ಹೆಚ್ಚಾಗಿ ಪ್ರೀಮಿಯಂ ಫೋನ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇದು ಮಾರುಕಟ್ಟೆಯಲ್ಲಿ ಕಂಡುಬರುವ ಅತ್ಯಧಿಕ ಆದಾಯಕ್ಕೆ ಕೊಡುಗೆ ನೀಡುತ್ತಿದೆ ಎಂದು ಕೌಂಟರ್‌ಪಾಯಿಂಟ್‌ನ ಹಿರಿಯ ಸಂಶೋಧನಾ ವಿಶ್ಲೇಷಕಿ ಶಿಲ್ಪಿ ಜೈನ್ ಹೇಳಿದರು.
2024 ರ ವಾರ್ಷಿಕ ಮೌಲ್ಯ ಹಂಚಿಕೆ ಲಿಸ್ಟ್ನಲ್ಲಿ ಶೇಕಡಾ 22 ರಷ್ಟು ಪಾಲನ್ನು ಆಪಲ್ ಹೊಂದಿದೆ. ಇದರ ನಂತರ ಸ್ಯಾಮ್‌ಸಂಗ್ ಎರಡನೇ ಸ್ಥಾನದಲ್ಲಿದೆ. ಸ್ಯಾಮ್‌ಸಂಗ್ ನಂತರ ಶೇ. 16 ರಷ್ಟು ಪಾಲನ್ನು ವಿವೋ ಹೊಂದಿದೆ. ಶೇ. 16 ರಷ್ಟು ಒಪ್ಪೋ ಮತ್ತು ಶೇ. 9 ರಷ್ಟು ಪಾಲನ್ನು ಹೊಂದಿರುವ ಶಿಯೋಮಿ ನಂತರದ ಸ್ಥಾನದಲ್ಲಿವೆ. ಸ್ಮಾರ್ಟ್‌ಫೋನ್ ಘಟಕಗಳ ಪೂರೈಕೆಯಲ್ಲಿ ವಿವೋ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಮುನ್ನಡೆಸಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕರ ಮಾರುಕಟ್ಟೆ ಪಾಲು 2023 ರಲ್ಲಿ ಶೇ 17 ರಿಂದ 2024 ರಲ್ಲಿ ಶೇ 19 ಕ್ಕೆ ಬೆಳೆಯುವ ನಿರೀಕ್ಷೆಯಿದೆ.
ಮೊಬೈಲ್ ಚಿಪ್‌ಸೆಟ್ ಲಿಸ್ಟ್ನಲ್ಲಿ ಮೀಡಿಯಾ ಟೆಕ್ ಭಾರತೀಯ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ಮಾರುಕಟ್ಟೆಯನ್ನು ಶೇಕಡಾ 52 ರಷ್ಟು ಪಾಲನ್ನು ಹೊಂದಿದೆ. ಇನ್ನು ಕ್ವಾಲ್ಕಾಮ್ ಶೇಕಡಾ 25 ರಷ್ಟು ಪಾಲನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ಗಳಲ್ಲಿ 5G ಚಿಪ್‌ಸೆಟ್‌ಗಳ ಲಭ್ಯತೆಯಿಂದಾಗಿ 2024 ರ ವೇಳೆಗೆ ದೇಶದಲ್ಲಿ 5G ಸ್ಮಾರ್ಟ್‌ಫೋನ್ ಸಾಗಣೆಯ ಪ್ರವೇಶ ಶೇಕಡಾ 78 ರಷ್ಟು ತಲುಪುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ಓದಿ: ಡಿಜಿಟಲ್ ವಂಚನೆ, ಸೈಬರ್ ಅಪರಾಧ, ಡೀಪ್ಫೇಕ್ಗಳು ಗಂಭೀರ ಸವಾಲುಗಳಾಗಿವೆ: ರಾಷ್ಟ್ರಪತಿ ಕಳವಳ