Indian Astronaut Kalpana Chawla: ಇಂದು ನಮ್ಮನ್ನೆಲ್ಲರನ್ನೂ ಬಿಟ್ಟು ಅಗಲಿದ ಬಾಹ್ಯಾಕಾಶದ ನಕ್ಷತ್ರದ ಬಗ್ಗೆ ನೆನಪಿಸಿಕೊಳ್ಳುವ ದಿನ.. ಬರೋಬ್ಬರಿ 22 ವರ್ಷಗಳ ಹಿಂದೆ ಎಂದೂ ಮರೆಯಲಾರದ ದುರಂತವೊಂದು ಸಂಭವಿಸಿತ್ತು. ಆ ದುರಂತದಲ್ಲಿ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಸೇರಿ ಏಳು ಗಗನಯಾತ್ರಿಗಳು ಸಾವನ್ನಪ್ಪಿದ್ದರು. ಇಂದು ಕಲ್ಪನಾ ಚಾವ್ಲಾ ಸೇರಿದಂತೆ ಏಳು ಗಗನಯಾತ್ರಿಗಳ 22ನೇ ವರ್ಷದ ಪುಣ್ಯತಿಥಿ ಆಚರಿಸಲಾಗುತ್ತಿದೆ.
ಗಗನಯಾತ್ರಿ ಕಲ್ಪನಾ ಚಾವ್ಲಾ ಅವರು ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮಹಿಳೆ ಮತ್ತು ಎರಡನೇ ಗಗನಯಾತ್ರಿ ಎಂಬುದು ಗೊತ್ತಿರುವ ಸಂಗತಿ. ಕಲ್ಪನಾ ಚಾವ್ಲಾ ಅವರ ಹೆಸರನ್ನು ಕೇಳಿದಾಗಲೆಲ್ಲಾ ನಮ್ಮ ಮನಸ್ಸು ಆಕಾಶದತ್ತ ಮುಖಮಾಡುತ್ತದೆ.
ಫೆಬ್ರವರಿ 1, 2003 ರಂದು ಮರೆಲಾಗದ ದುರಂತವೊಂದು ಸಂಭವಿಸಿತ್ತು. ಆಗ ಇಡೀ ಜಗತ್ತೇ 'ಕೊಲಂಬಿಯಾ' ಎಂಬ ಬಾಹ್ಯಾಕಾಶ ನೌಕೆಯು ಭೂಮಿಗೆ ವಾಪಾಸ್ ಬರುತ್ತಿರುವುದನ್ನು ಕಾಯುತ್ತಿತ್ತು. ಕಲ್ಪನಾ ಚಾವ್ಲಾ ಸೇರಿದಂತೆ ಏಳು ಗಗನಯಾತ್ರಿಗಳು 15 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸಿಸಿ, ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕೆಲಸ ಮಾಡಿ ಭೂಮಿಗೆ ಮರಳುತ್ತಿದ್ದರು. ಆದರೆ ಆ ಬಾಹ್ಯಾಕಾಶ ನೌಕೆ ಅಪಘಾತಕ್ಕೀಡಾಗಿ ಎಲ್ಲ ಗಗನಯಾತ್ರಿಗಳು ಬಲಿ ತೆಗೆದುಕೊಂಡಿತು. ಆಗ ಇಡೀ ಜಗತ್ತೇ ಶೋಕ ಸಾಗರದಲ್ಲಿ ಮುಳುಗಿತ್ತು.
ಕಲ್ಪನಾ ಚಾವ್ಲಾ ಆರಂಭಿಕ ಜೀವನ: ಮಾರ್ಚ್ 17, 1962 ರಂದು ಹರಿಯಾಣದ ಕರ್ನಾಲ್‌ನಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೋತಿ ಚಾವ್ಲಾ ದಂಪತಿಗಳಿಗೆ ಜನಿಸಿದ ಕಲ್ಪನಾ ಚಾವ್ಲಾ ನಾಲ್ಕು ಮಕ್ಕಳಲ್ಲಿ ಕೊನೆಯವರು. ಈ ದಂಪತಿ ತಮ್ಮ ಮಗಳಿಗೆ ಶಾಲೆಗೆ ಸೇರಿಸುವವರಿಗೂ ಕಲ್ಪನಾ ಎಂಬ ಹೆಸರೇ ಇಟ್ಟಿರಲಿಲ್ಲ. ಅವರ ಪೋಷಕರು ಆಕೆಯನ್ನು ಮಾಂಟು ಎಂದು ಕರೆಯುತ್ತಿದ್ದರು.
ಮೂರನೇ ವರ್ಷಕ್ಕೆ ಬೆಳೆದ ಆಸಕ್ತಿ: ಬಾಲ್ಯದಲ್ಲಿ ಚಾವ್ಲಾ ಅವರು ಸುಮಾರು ಮೂರನೇ ವಯಸ್ಸಿನಲ್ಲಿದ್ದಾಗ ವಿಮಾನ ನೋಡಿದ ಬಳಿಕ ವಿಮಾನ ಹಾರಾಟದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಅವರು ತಮ್ಮ ತಂದೆಯೊಂದಿಗೆ ಸ್ಥಳೀಯ ಫ್ಲೈಯಿಂಗ್ ಕ್ಲಬ್‌ಗೆ ಭೇಟಿ ನೀಡಿದರು. ಅಷ್ಟೇ ಅಲ್ಲ ಶಾಲೆಯಲ್ಲಿದ್ದಾಗ ಕಲ್ಪನಾ ಅವರು ವಿಮಾನಯಾನದಲ್ಲಿ ಆಸಕ್ತಿ ಹೊಂದಿರುವುದರ ಬಗ್ಗೆ ಆಸೆ ವ್ಯಕ್ತಪಡಿಸಿದ್ದರು.
ಕರ್ನಾಲ್‌ನ ಟ್ಯಾಗೋರ್ ಬಾಲ್ ನಿಕೇತನ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಕಲ್ಪನಾ ವ್ಯಾಸಂಗ ಮುಗಿಸಿದರು. ಮುಂದೆ ಅವರು ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಕೋರ್ಸ್ ಆಯ್ಕೆ ಮಾಡುವಾಗ ಪ್ರಾಧ್ಯಾಪಕರು ಅವರನ್ನು ತಡೆಯಲು ಪ್ರಯತ್ನಿಸಿದರು. ಏಕೆಂದರೆ ಈ ವೃತ್ತಿ ಮಾರ್ಗವನ್ನು ಅನುಸರಿಸುವ ಹುಡುಗಿಯರಿಗೆ ನಮ್ಮ ದೇಶದಲ್ಲಿ ಸೀಮಿತ ಅವಕಾಶಗಳಿದ್ದವು. ಆದರೂ ಸಹ ಚಾವ್ಲಾ ಹಿಂದೆ-ಮುಂದೆ ಆಲೋಚಿಸದೇ ಈ ಕೋರ್ಸ್ ಅನ್ನು ಮಾಡಿಕೊಂಡರು.
ಭಾರತದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ ಚಾವ್ಲಾ 1980 ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಬಂದರು. ಚಾವ್ಲಾ ತಮ್ಮ ಅಧ್ಯಯನವನ್ನು ಮುಂದುವರಿಸಲು ಅಲ್ಲಿನ ನಾಗರಿಕರಾಗಬೇಕಾಯಿತು. ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು 1988 ರಲ್ಲಿ ಕೊಲೊರಾಡೋ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪಡೆದರು.
ವೃತ್ತಿಜೀವನ: 1988 ರಲ್ಲಿ ಕಲ್ಪನಾ ಚಾವ್ಲಾ ಅವರು ನಾಸಾ ಅಮೆಸ್ ಸಂಶೋಧನಾ ಕೇಂದ್ರದಲ್ಲಿ ಪವರ್ಡ್- ಲಿಫ್ಟ್ ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಸಂಶೋಧನೆಯು "ಗ್ರೌಂಡ್-ಎಫೆಕ್ಟ್"ದಲ್ಲಿ ಹ್ಯಾರಿಯರ್‌ನಂತಹ ವಿಮಾನಗಳ ಸುತ್ತಲೂ ಎದುರಾಗುವ ಸಂಕೀರ್ಣ ಗಾಳಿಯ ಹರಿವಿನ ಸಿಮ್ಯುಲೇಶನ್ ಮೇಲೆ ಕೇಂದ್ರೀಕರಿಸಿತು. ಈ ಯೋಜನೆ ಪೂರ್ಣಗೊಂಡ ನಂತರ ಅವರು ಫ್ಲೋ ಸೊಲ್ವರ್‌ಗಳನ್ನು ಸಮಾನಾಂತರ ಕಂಪ್ಯೂಟರ್‌ಗಳಿಗೆ ಮ್ಯಾಪಿಂಗ್ ಮಾಡುವ ಸಂಶೋಧನೆ ಮತ್ತು ಪವರ್ಡ್ ಲಿಫ್ಟ್ ಕಂಪ್ಯೂಟೇಶನ್‌ಗಳನ್ನು ನಡೆಸುವ ಮೂಲಕ ಈ ಸೊಲ್ವರ್‌ಗಳ ಪರೀಕ್ಷೆಯನ್ನು ಬೆಂಬಲಿಸಿದರು.
1993 ರಲ್ಲಿ ಕಲ್ಪನಾ ಚಾವ್ಲಾ ಕ್ಯಾಲಿಫೋರ್ನಿಯಾದ ಲಾಸ್ ಆಲ್ಟೋಸ್‌ನ ಓವರ್‌ಸೆಟ್ ಮೆಥಡ್ಸ್ ಇಂಕ್ ಅನ್ನು ಉಪಾಧ್ಯಕ್ಷೆ ಮತ್ತು ಸಂಶೋಧನಾ ವಿಜ್ಞಾನಿಯಾಗಿ ಸೇರಿಕೊಂಡರು. ಈ ವಿಭಾಗದಲ್ಲಿ ಪರಿಣತಿ ಹೊಂದಿರುವ ಇತರ ಸಂಶೋಧಕರೊಂದಿಗೆ ಚಾವ್ಲಾ ತಂಡವೊಂದನ್ನು ರಚಿಸಿದರು. ವಾಯುಬಲ ವೈಜ್ಞಾನಿಕ ಆಪ್ಟಿಮೈಸೇಶನ್ ಅನ್ನು ನಿರ್ವಹಿಸಲು ಪರಿಣಾಮಕಾರಿ ತಂತ್ರಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಅವರು ಜವಾಬ್ದಾರರಾಗಿದ್ದರು. ಕಲ್ಪನಾ ಚಾವ್ಲಾ ಭಾಗವಹಿಸಿದ ವಿವಿಧ ಯೋಜನೆಗಳ ಫಲಿತಾಂಶಗಳನ್ನು ತಾಂತ್ರಿಕ ಸಮ್ಮೇಳನ ಪತ್ರಿಕೆಗಳು ಮತ್ತು ಜರ್ನಲ್‌ಗಳಲ್ಲಿ ದಾಖಲಿಸಲಾಗಿದೆ.
ಕಲ್ಪನಾ ಮದುವೆ: 1983 ರಲ್ಲಿ ಕಲ್ಪನಾ ಚಾವ್ಲಾ ಜೀನ್ - ಪಿಯರ್ ಹ್ಯಾರಿಸನ್ ಅವರನ್ನು ವಿವಾಹವಾದರು. ಫ್ರಾನ್ಸ್ ಮೂಲದ ಜೀನ್-ಪಿಯರ್, ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಮತ್ತು ವಾಯುಯಾನ ಲೇಖಕರಾಗಿದ್ದರು. ಕಲ್ಪನಾ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವರನ್ನು ಭೇಟಿಯಾದರು. ಜೀನ್-ಪಿಯರ್ ಕಲ್ಪನಾಳ ಕನಸುಗಳಿಗೆ ಜೀವ ತುಂಬಿದರು ಮತ್ತು ಅವರು ಗಗನಯಾತ್ರಿಯಾಗಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುವಾಗ ಕಲ್ಪನಾ ಪಕ್ಕದಲ್ಲಿ ನಿಂತು ಬೆಂಬಲಿಸಿದರು.
ಕಲ್ಪನಾಳ ನಾಸಾ ಅನುಭವ: ಡಿಸೆಂಬರ್ 1994 ರಲ್ಲಿ ನಾಸಾದಿಂದ ಆಯ್ಕೆಯಾದ ಕಲ್ಪನಾ ಚಾವ್ಲಾ ಅವರು ಮಾರ್ಚ್ 1995 ರಲ್ಲಿ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ 15 ನೇ ಗುಂಪಿನ ಗಗನಯಾತ್ರಿ ಅಭ್ಯರ್ಥಿಯಾದರು. ಒಂದು ವರ್ಷದ ತರಬೇತಿ ಮತ್ತು ಮೌಲ್ಯಮಾಪನವನ್ನು ಪೂರ್ಣಗೊಳಿಸಿದ ನಂತರ ಗಗನಯಾತ್ರಿ ಕಚೇರಿ EVA/ರೊಬೊಟಿಕ್ಸ್ ಮತ್ತು ಕಂಪ್ಯೂಟರ್ ಶಾಖೆಗಳಿಗೆ ತಾಂತ್ರಿಕ ಸಮಸ್ಯೆಗಳನ್ನು ಕೆಲಸ ಮಾಡಲು ಸಿಬ್ಬಂದಿ ಪ್ರತಿನಿಧಿಯಾಗಿ ಅವರನ್ನು ನಿಯೋಜಿಸಲಾಯಿತು.
ನಾಸಾ ಕಾರ್ಯಯೋಜನೆಗಳಲ್ಲಿ ಶಟಲ್ ಏವಿಯಾನಿಕ್ಸ್ ಇಂಟಿಗ್ರೇಷನ್ ಲ್ಯಾಬೋರೇಟರಿಯಲ್ಲಿ ರೋಬೋಟಿಕ್ ಸಿಚುಯೇಷನಲ್ ಅವೇರ್ನೆಸ್ ಡಿಸ್ಪ್ಲೇಗಳ ಅಭಿವೃದ್ಧಿ ಮತ್ತು ಬಾಹ್ಯಾಕಾಶ ನೌಕೆ ನಿಯಂತ್ರಣ ಸಾಫ್ಟ್‌ವೇರ್ ಅನ್ನು ಪರೀಕ್ಷಿಸುವ ಕೆಲಸ ಕಲ್ಪನಾದವರಾಗಿತ್ತು. 1996 ರ ನವೆಂಬರ್ನಲ್ಲಿ ಕಲ್ಪನಾ ಚಾವ್ಲಾ ಅವರನ್ನು STS-87 ನಲ್ಲಿ ಮಿಷನ್ ಸ್ಪೆಷಲಿಸ್ಟ್ ಮತ್ತು ಪ್ರೈಮ್ ರೋಬೋಟಿಕ್ ಆರ್ಮ್ ಆಪರೇಟರ್ ಆಗಿ ನಿಯೋಜಿಸಲಾಯಿತು. ಜನವರಿ 1998 ರಲ್ಲಿ ಕಲ್ಪನಾರನ್ನು ಶಟಲ್ ಮತ್ತು ನಿಲ್ದಾಣದ ವಿಮಾನ ಸಿಬ್ಬಂದಿ ಉಪಕರಣಗಳಿಗೆ ಸಿಬ್ಬಂದಿ ಪ್ರತಿನಿಧಿಯಾಗಿ ನೇಮಿಸಲಾಯಿತು. ನಂತರ ಕಲ್ಪನಾ ಗಗನಯಾತ್ರಿ ಕಚೇರಿಯ ಸಿಬ್ಬಂದಿ ವ್ಯವಸ್ಥೆಗಳು ಮತ್ತು ವಾಸಯೋಗ್ಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರು STS-87 (1997) ಮತ್ತು STS-107 (2003) ನಲ್ಲಿ ಹಾರಾಟ ನಡೆಸಿ 30 ದಿನಗಳು, 14 ಗಂಟೆಗಳು ಮತ್ತು 54 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದರು.
ಬಾಹ್ಯಾಕಾಶ ಹಾರಾಟ ಅನುಭವ:
STS-87 ಕೊಲಂಬಿಯಾ (ನವೆಂಬರ್ 19 ರಿಂದ ಡಿಸೆಂಬರ್ 5, 1997): STS-87 ಅಮೆರಿಕದ ನಾಲ್ಕನೇ ಮೈಕ್ರೋಗ್ರಾವಿಟಿ ಪೇಲೋಡ್ ಹಾರಾಟವಾಗಿದ್ದು, ತೂಕವಿಲ್ಲದ ಬಾಹ್ಯಾಕಾಶ ಪರಿಸರವು ವಿವಿಧ ಭೌತಿಕ ಪ್ರಕ್ರಿಯೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಸೂರ್ಯನ ಹೊರಗಿನ ವಾತಾವರಣದ ಪದರಗಳ ಅವಲೋಕನಗಳ ಮೇಲೆ ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾದ ಪ್ರಯೋಗಗಳ ಮೇಲೆ ಕೇಂದ್ರೀಕರಿಸಿದೆ.
ಸಿಬ್ಬಂದಿಯ ಇಬ್ಬರು ಸದಸ್ಯರು EVA (ಸ್ಪೇಸ್ ವಾಕ್) ನಡೆಸಿದರು. ಇದು ಭವಿಷ್ಯದ ಬಾಹ್ಯಾಕಾಶ ನಿಲ್ದಾಣ ಜೋಡಣೆಗಾಗಿ EVA ಉಪಕರಣಗಳು ಮತ್ತು ಕಾರ್ಯವಿಧಾನಗಳನ್ನು ಪರೀಕ್ಷಿಸುವುದರ ಜೊತೆಗೆ ಸ್ಪಾರ್ಟಾದ ಉಪಗ್ರಹದ ಮ್ಯಾನುವಲ್ ಕ್ಯಾಪ್ಚರ್ ಅನ್ನು ಒಳಗೊಂಡಿತ್ತು.
STS-107 ಕೊಲಂಬಿಯಾ (ಜನವರಿ 16 ರಿಂದ ಫೆಬ್ರವರಿ 1, 2003): 16 ದಿನಗಳ ಹಾರಾಟವು ಮೀಸಲಾದ ವಿಜ್ಞಾನ ಮತ್ತು ಸಂಶೋಧನಾ ಕಾರ್ಯಾಚರಣೆಯಾಗಿತ್ತು. ದಿನಕ್ಕೆ 24 ಗಂಟೆಗಳ ಕಾಲ ಎರಡು ಪರ್ಯಾಯ ಪಾಳಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸುಮಾರು 80 ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದರು. ಫೆಬ್ರವರಿ 1, 2003 ರಂದು STS-107 ಮಿಷನ್ ಹಠಾತ್ತನೆ ಕೊನೆಗೊಂಡಿತು. ಕೊಲಂಬಿಯಾ ಬಾಹ್ಯಾಕಾಶ ನೌಕೆ ಮತ್ತು ಅದರ ಸಿಬ್ಬಂದಿ ಭೂಮಿಗೆ ಬರುವ 16 ನಿಮಿಷಗಳ ಮೊದಲು ಸಾವನ್ನಪ್ಪಿದರು.
ಪ್ರಶಸ್ತಿಗಳು: ಕಲ್ಪನಾ ಅವರಿಗೆ ಮರಣೋತ್ತರವಾಗಿ ಕಾಂಗ್ರೆಷನಲ್ ಸ್ಪೇಸ್ ಮೆಡಲ್ ಆಫ್ ಆನರ್, ನಾಸಾ ಸ್ಪೇಸ್ ಫ್ಲೈಟ್ ಮೆಡಲ್ ಮತ್ತು ನಾಸಾ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಮೆಡಲ್ ಅನ್ನು ನೀಡಲಾಯಿತು.
ಕಲ್ಪನಾ ಚಾವ್ಲಾ ಸ್ಮಾರಕ: 2010 ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯವು ಆರ್ಲಿಂಗ್ಟನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಕಲ್ಪನಾ ಚಾವ್ಲಾ ಸ್ಮಾರಕವನ್ನು ಸಮರ್ಪಿಸಿತು. ಅಷ್ಟೇ ಅಲ್ಲ 2020 ರ ಅಕ್ಟೋಬರ್‌ನಲ್ಲಿ ಕಲ್ಪನಾ ಚಾವ್ಲಾ ಅವರ ಹೆಸರಿನ ವಾಣಿಜ್ಯ ಸರಕು ಬಾಹ್ಯಾಕಾಶ ನೌಕೆಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾಯಿಸಲಾಯಿತು. ನಾರ್ತ್ರೋಪ್ ಗ್ರಮ್ಮನ್‌ನ ಸಿಗ್ನಸ್ ಕ್ಯಾಪ್ಸುಲ್ಗೆ ಎಸ್.ಎಸ್. ಕಲ್ಪನಾ ಚಾವ್ಲಾ ಎಂದು ಹೆಸರಿಸಲಾಯಿತು.
ಡಾ. ಕಲ್ಪನಾ ಚಾವ್ಲಾ ಪ್ರಶಸ್ತಿ: ರಾಜ್ಯದ ಮಹಿಳಾ ವಿಜ್ಞಾನಿಗಳು / ಎಂಜಿನಿಯರ್‌ಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರವು 2003 ರಲ್ಲಿ ಡಾ. ಕಲ್ಪನಾ ಚಾವ್ಲಾ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯು ಮಹಿಳೆಯರ ಶೌರ್ಯ ಕಾರ್ಯಗಳನ್ನು ಗುರುತಿಸುತ್ತದೆ. ಶೌರ್ಯದ ಕಾರ್ಯಗಳಲ್ಲಿ ನೈಸರ್ಗಿಕ ವಿಕೋಪಗಳು ಮತ್ತು ವಿಪತ್ತುಗಳ ಸಮಯದಲ್ಲಿ ರಕ್ಷಣೆ, ಮುಳುಗುವಿಕೆಯಿಂದ ರಕ್ಷಣೆ, ಬೆಂಕಿಯ ರಕ್ಷಣೆ, ಸಂಕಷ್ಟದಲ್ಲಿರುವ ಯಾರನ್ನಾದರೂ ರಕ್ಷಿಸಲು ಒಬ್ಬರ ಜೀವವನ್ನು ಪಣಕ್ಕಿಡುವುದು ಸೇರಿವೆ.