ಸೆಪ್ಟೆಂಬರ್ 30 ಅನ್ನು ವಿಶ್ವ ಪಾಡ್‌ಕಾಸ್ಟ್ ದಿನ ಎಂದು ಆಚರಸಲಾಗುತ್ತದೆ. ಪಾಡ್‌ಕಾಸ್ಟ್ ಪ್ರೇಮಿಗಳು ಮತ್ತು ಪಾಡ್‌ಕಾಸ್ಟ್ ನಡೆಸುವವರು ಒಟ್ಟಾಗಿ ಸೇರಿ ಈ ದಿನವನ್ನು ಸಂಭ್ರಮಿಸುತ್ತಾರೆ. ದಿನದಿಂದ ದಿನಕ್ಕೆ ಪಾಡ್‌ಕಾಸ್ಟ್ ಬಗ್ಗೆ ಹೆಚ್ಚು ಜನರು ಒಲವು ತೋರಿಸುತ್ತಿದ್ದಾರೆ. ಸ್ಪಾಟಿಫೈ , ಆ್ಯಪಲ್ ಸೇರಿದಂತೆ ಅನೇಕ ಪಾಡ್‌ಕಾಸ್ಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ಪಾಡ್‌ಕಾಸ್ಟ್‌ಗಳು ಲಭ್ಯವಿದ್ದು, ಪ್ರತಿ ದಿನ ಲಕ್ಷಾಂತರ ಜನರು ಶ್ರದ್ಧೆಯಿಂದ ಪಾಡ್‌ಕಾಸ್ಟಿಂಗ್ ಕೇಳುತ್ತಿದ್ದಾರೆ.
ಪಾಡ್‌ಕಾಸ್ಟ್‌ಗಳು ಜಾಗತಿಕವಾಗಿ ಪ್ರಖ್ಯಾತಿ ಪಡೆದಿದೆ. ಕೇಳುಗರು ವಿಶ್ವದ ಮೂಲೆ ಮೂಲೆಗಳಿಂದ ಟ್ಯೂನ್ ಮಾಡುತ್ತಿದ್ದಾರೆ. 2000ರ ದಶಕದ ಆರಂಭದಲ್ಲಿ ಆಡಿಯೋ ರೂಪದಲ್ಲಿ ಪ್ರಾರಂಭವಾದ ಇದು ಈಗ ಪ್ರತಿಯೊಂದು ಆಸಕ್ತಿಯನ್ನು ಪೂರೈಸುವ ಶಕ್ತಿಯುತ ಮಾಧ್ಯಮವಾಗಿ ಹೊರಹೊಮ್ಮಿದೆ. ರಾಜಕೀಯದಿಂದ ಕ್ರೈಂ ವರೆಗೆ, ಕಥೆ ಹೇಳುವಿಕೆಯಿಂದ ಮಾನಸಿಕ ಆರೋಗ್ಯದವರೆಗೆ, ಪ್ರತಿಯೊಬ್ಬರಿಗೂ ಪಾಡ್‌ಕಾಸ್ಟ್ ಇದೆ.
ವಿಶ್ವ ಪಾಡ್‌ಕಾಸ್ಟ್ ದಿನವನ್ನು ಪಾಡ್‌ಕಾಸ್ಟ್ ಚಾನಲ್ ನಡೆಸುವವರು ಮಾತ್ರವಲ್ಲದೆ ಪಾಡ್‌ಕ್ಯಾಸ್ಟಿಂಗ್ ಅನ್ನು ಆಧುನಿಕ ಸಂಸ್ಕೃತಿಯ ಅಗತ್ಯ ಭಾಗವನ್ನಾಗಿ ಮಾಡಿದ ಕೇಳುಗರೂ ಸಹ ಆಚರಿಸುತ್ತಾರೆ. ಪ್ರಯಾಣ ಮಾಡುವಾಗ, ವ್ಯಾಯಾಮ ಮಾಡುವಾಗ ಅಥವಾ ಮನೆ ಕೆಲಸಗಳನ್ನು ಮಾಡುವಾಗ ಹೊಸ ವಿಷಯ ತಿಳಿದುಕೊಂಡು ಜ್ಞಾನ ಹೆಚ್ಚಿಸಿಕೊಳ್ಳಲು ಮತ್ತು ಮನರಂಜನೆ ಪಾಡ್‌ಕಾಸ್ಟ್‌ಗಳು ಉತ್ತಮ ವೇದಿಕೆಯಾಗಿದೆ.
ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಈ ಯುಗದಲ್ಲಿ, ಪಾಡ್‌ಕಾಸ್ಟ್‌ಗಳು ನಿಕಟ ಮತ್ತು ವೈಯಕ್ತಿಕ ಅನುಭವವನ್ನು ನೀಡುತ್ತವೆ. ಕೇಳುಗರನ್ನು ಅವರಿಗೆ ಇಷ್ಟ ಆಗುವ ಧ್ವನಿಗಳೊಂದಿಗೆ ಸಂಪರ್ಕಿಸುತ್ತವೆ.
ಪಾಡ್‌ಕಾಸ್ಟಿಂಗ್‌ನ ವಿಕಾಸ: ಐಪಾಡ್‌ಗಳಂತಹ ಪೋರ್ಟಬಲ್ ಆಡಿಯೊ ಸಾಧನಗಳು ಡಿಜಿಟಲ್ ಆಡಿಯೊ ಬಳಕೆಯನ್ನು ಹೆಚ್ಚು ಅನುಕೂಲಕರವಾಗಿಸಿದಾಗ ಪಾಡ್‌ಕಾಸ್ಟಿಂಗ್ 2000ರ ದಶಕದ ಮಧ್ಯಭಾಗದಲ್ಲಿ ಅಸ್ತಿತ್ವಕ್ಕೆ ಬಂದಿತು. 2010 ವೇಳೆ ಪಾಡ್‌ಕಾಸ್ಟಿಂಗ್ ಜನಪ್ರಿಯತೆ ಗಳಿಸಿತು. ಸ್ಮಾರ್ಟ್‌ಫೋನ್‌ಗಳು ಮತ್ತು Spotify, Google Podcasts ಮತ್ತು Amazon Music ನಂತಹ ಆಡಿಯೊ ಪ್ಲಾಟ್‌ಫಾರ್ಮ್‌ಗಳು ಪಾಡ್‌ಕಾಸ್ಟ್‌ಗಳನ್ನು ಬೆಂಬಲಿಸುವುದರೊಂದಿಗೆ, ಇದು ಮತ್ತಷ್ಟು ಯಶಸ್ವಿಯಾಯಿತು.
ಇತ್ತೀಚಿನ ಅಧ್ಯಯನಗಳ ಪ್ರಕಾರ, ಈಗ ಜಾಗತಿಕವಾಗಿ 5 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಪಾಡ್‌ಕಾಸ್ಟ್‌ಗಳು ಮತ್ತು 70 ಮಿಲಿಯನ್‌ಗಿಂತಲೂ ಹೆಚ್ಚು ಸಂಚಿಕೆಗಳು ಈ ಡಿಜಿಟಲ್ ಕ್ರಾಂತಿಯ ವ್ಯಾಪ್ತಿಯನ್ನು ವಿಸ್ತಾರವನ್ನು ತೋರಿಸುತ್ತಿದೆ.