ನವದೆಹಲಿ: ಮುಂಬರುವ ಹಬ್ಬದ ಋತುವಿನಲ್ಲಿ, ವಿಶೇಷವಾಗಿ ಛತ್ ಪೂಜೆ ಮತ್ತು ದೀಪಾವಳಿಯ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು ಭಾರತೀಯ ರೈಲ್ವೆ 5,975 ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ 12,500 ವಿಶೇಷ ರೈಲುಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 5,975 ರೈಲುಗಳು 2024-25ರ ಅವಧಿಯಲ್ಲಿ ಸಂಚರಿಸಲು ಆರಂಭಿಸಲಿವೆ ಎಂದು ಅವರು ತಿಳಿಸಿದರು.
ವಿಶೇಷವೆಂದರೆ, ಸಾಮಾನ್ಯ ಬೋಗಿಗಳನ್ನು 108 ಸಾಮಾನ್ಯ ರೈಲುಗಳಿಗೆ ಸೇರಿಸಲಾಗುವುದು. ಇದು ರಜಾದಿನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ.
ಸಾಮಾನ್ಯ ಬೋಗಿಗಳ ಸೇರ್ಪಡೆ ಮತ್ತು ವಿಶೇಷ ರೈಲುಗಳ ಸಂಚಾರದಿಂದ ಒಂದು ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. 2023-24 ರ ಹಬ್ಬದ ಋತುವಿನಲ್ಲಿ ಒಟ್ಟು 4,429 ವಿಶೇಷ ರೈಲುಗಳನ್ನು ಓಡಿಸಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಈ ವರ್ಷ ಅದಕ್ಕಿಂತಲೂ ಹೆಚ್ಚು ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ವಂದೇ ಭಾರತ್ ರೈಲು ಬೋಗಿಗಳ ಪೂರೈಕೆ ವಿಳಂಬ: ಭಾರತೀಯ ರೈಲ್ವೆಯ 200 ಸ್ಲೀಪರ್ ರೂಪಾಂತರದ ವಂದೇ ಭಾರತ್ ರೈಲುಗಳ ಪೂರೈಕೆಯು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ತಡವಾಗಲಿದೆ ಎಂದು ವರದಿಗಳು ತಿಳಿಸಿವೆ. ಸುಮಾರು 60,000 ಕೋಟಿ ರೂ.ಗಳ ಪೂರೈಕೆ ಮತ್ತು ನಿರ್ವಹಣಾ ಒಪ್ಪಂದಕ್ಕಾಗಿ ಬಗ್ಗೆ ಮಾತುಕತೆಗಳು ಇನ್ನೂ ನಡೆಯುತ್ತಿವೆ. ಈ ಚರ್ಚೆಗಳ ಕಾರಣದಿಂದ ಈ ಟೆಂಡರ್ ಅಡಿಯಲ್ಲಿ ನೀಡಲಾದ ವಂದೇ ಭಾರತ್ ಸ್ಲೀಪರ್ ರೈಲಿನ ಮೂಲಮಾದರಿಯ ನಿರ್ಮಾಣ ಪ್ರಕ್ರಿಯೆಯು ನಿಧಾನವಾಗಿದೆ.
ಒಪ್ಪಂದದಲ್ಲಿ ನಿಗದಿಪಡಿಸಲಾಗಿದ್ದ 24 ಬೋಗಿಗಳ ರೈಲುಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಒಪ್ಪಂದದ ನಿಯಮಗಳ ಪ್ರಕಾರ ಪ್ರತಿ ರೇಕ್ಗೆ ಕೋಚ್ ಸಂಯೋಜನೆಯನ್ನು ಬದಲಾಯಿಸಬಹುದು. ರೈಲ್ವೆಯು 12-, 16-, ಅಥವಾ 24-ಬೋಗಿಗಳ ರೈಲುಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಯಾರಿಸಿ ಕೊಡುವಂತೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2023 ರ ಮಧ್ಯದಲ್ಲಿ, ಕಿನೆಟ್ ರೈಲ್ವೆ ಸೊಲ್ಯೂಷನ್ಸ್ ಮತ್ತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಮತ್ತು ತಿತಾಘರ್ ರೈಲ್ ಸಿಸ್ಟಮ್ಸ್ (ಟಿಆರ್ ಎಸ್) ಒಕ್ಕೂಟಕ್ಕೆ 200 ವಂದೇ ಭಾರತ್ ಸ್ಲೀಪರ್ ರೈಲುಗಳ ಸರಬರಾಜು ಮತ್ತು ನಿರ್ವಹಣಾ ಗುತ್ತಿಗೆಯನ್ನು ನೀಡಲಾಗಿದೆ. ಮೂಲಮಾದರಿ ರೈಲುಗಳನ್ನು ಒಂದು ವರ್ಷದೊಳಗೆ ತಯಾರಿಸಿ ಕೊಡಬೇಕಿತ್ತು. ಆದರೆ ಎರಡೂ ಕಂಪನಿಗಳು ಇನ್ನೂ ಅವುಗಳ ಕೆಲಸವನ್ನು ಪ್ರಾರಂಭಿಸಿಲ್ಲ.
ಇದನ್ನೂ ಓದಿ : ಕಚ್ಚಾ ತೈಲ ಬೆಲೆ ಇಳಿಕೆ: ಕೇಂದ್ರ ಸರ್ಕಾರಕ್ಕೆ ಈ ವರ್ಷ ₹60 ಸಾವಿರ ಕೋಟಿ ಉಳಿತಾಯ - Crude Oil Prices Fall