ಬೆಂಗಳೂರು: 2024-25ನೇ ಸಾಲಿನ ಕರ್ನಾಟಕ ವಿಧಾನಮಂಡಲo ವಿವಿಧ ಸ್ಥಾಯಿ ಸಮಿತಿಗಳಿಗೆ ನೂತನ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಿ ಸ್ಪೀಕರ್ ಯು.ಟಿ.ಖಾದರ್ ಭಾನುವಾರ ಆದೇಶ ಹೊರಡಿಸಿದ್ದಾರೆ. ಒಂಬತ್ತು ಜಂಟಿ ಸ್ಥಾಯಿ ಸಮಿತಿ ಹಾಗೂ ಆರು ವಿಧಾನಸಭೆ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ.
ಸಾರ್ವಜನಿಕ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಿ.ಸಿ.ಪಾಟೀಲ್, ಸಾರ್ವಜನಿಕ ಉದ್ದಿಮೆ ಸಮಿತಿಗಳ ಅಧ್ಯಕ್ಷರಾಗಿ ಬಸವರಾಜ್ ಶಿವಣ್ಣನವರ್, ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ನರೇಂದ್ರ ಸ್ವಾಮಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಕೃಷ್ಣಮೂರ್ತಿ, ಅಧೀನ ಶಾಸನ ರಚನಾ ಸಮಿತಿ ಅಧ್ಯಕ್ಷರಾಗಿ ಬಿ.ಶಿವಣ್ಣ, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಹೆಚ್.ಡಿ.ರೇವಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಎನ್.ಹೆಚ್.ಕೋನರೆಡ್ಡಿ, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಅಧ್ಯಕ್ಷರಾಗಿ ರಿಜ್ವಾನ್ ಅರ್ಷದ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಗ್ರಂಥಾಲಯ ಸಮಿತಿಗೆ ಸಭಾಪತಿ ಅಧ್ಯಕ್ಷರಾಗಿರುತ್ತಾರೆ.
ಅಂದಾಜುಗಳ ಸಮಿತಿಗೆ ಹಂಪನಗೌಡ ಬಾದರ್ಲಿ, ಸರ್ಕಾರಿ ಭರವಸೆಗಳ ಸಮಿತಿಗೆ ಕೆ.ವೈ.ನಂಜೇಗೌಡ, ಹಕ್ಕು ಬಾಧ್ಯತೆಗಳ ಸಮಿತಿಗೆ ಕೌಜಲಗಿ ಶಿವಾನಂದ ಮಹಾಂತೇಶ, ಖಾಸಗಿ ಸದಸ್ಯರ ವಿಧೇಯಕ ಮತ್ತು ನಿರ್ಣಯಗಳ ಸಮಿತಿ, ಅರ್ಜಿಗಳ ಸಮಿತಿ ಮತ್ತು ವಸತಿ ಸೌಕರ್ಯ ಸಮಿತಿಗೆ ರುದ್ರಪ್ಪ ಮಾನಪ್ಪ ಲಮಾಣಿ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ.