ನವದೆಹಲಿ: 2024 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹತರಾದ ಭಯೋತ್ಪಾದಕರಲ್ಲಿ ಶೇಕಡಾ 60 ರಷ್ಟು ಪಾಕಿಸ್ತಾನಿ ಮೂಲದವರು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸೋಮವಾರ ಬಹಿರಂಗಪಡಿಸಿದ್ದಾರೆ. ನವದೆಹಲಿಯ ಮಾಣೆಕ್ ಷಾ ಕೇಂದ್ರದಲ್ಲಿ ನಡೆದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನರಲ್ ದ್ವಿವೇದಿ, ದೇಶದ ಸೂಕ್ಷ್ಮ ಗಡಿಗಳಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಭಾರತೀಯ ಸೇನೆಯ ನಿರಂತರ ಪ್ರಯತ್ನಗಳನ್ನು ಶ್ಲಾಘಿಸಿದರು.
ರಾಷ್ಟ್ರದ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭವಾಗಲು ಭಾರತೀಯ ಸೇನೆಯನ್ನು ಸ್ವಾವಲಂಬಿ, ಭವಿಷ್ಯಕ್ಕೆ ಸಿದ್ಧವಾದ ಶಕ್ತಿಯಾಗಿ ಏಕಕಾಲದಲ್ಲಿ ಪರಿವರ್ತಿಸುವ ಮಧ್ಯೆ ಎಲ್ಲ ರೀತಿಯ ಸನ್ನದ್ಧತೆ ಖಚಿತಪಡಿಸಿಕೊಳ್ಳುವ ಸೇನೆಯ ಧ್ಯೇಯವನ್ನು ಅವರು ಒತ್ತಿ ಹೇಳಿದರು. ಭಾರತೀಯ ಸೇನೆಯ ಯೋಜನೆಗಳು ವಿಕಸಿತ ಭಾರತ 2047 ರ ಗುರಿಗೆ ಅನುಗುಣವಾಗಿವೆ ಎಂದು ಅವರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಕೊಲ್ಲಲ್ಪಟ್ಟ ಬಹುತೇಕ ಭಯೋತ್ಪಾದಕರು ಪಾಕಿಸ್ತಾನ ಮೂಲದವರು ಎಂದು ಹೇಳಿದರು. ಕಳೆದ ವರ್ಷ ಹತ್ಯೆಗೀಡಾದ ಉಗ್ರರ ಪೈಕಿ ಶೇ 60ರಷ್ಟು ಮಂದಿ ಪಾಕಿಸ್ತಾನ ಮೂಲದವರು. ಅಲ್ಲದೇ ಪ್ರಸ್ತುತ ಕಣಿವೆ ಮತ್ತು ಜಮ್ಮು ಪ್ರದೇಶದಲ್ಲಿ ಇನ್ನೂ ಸಕ್ರಿಯವಾಗಿರುವ ಶೇಕಡಾ 80 ಕ್ಕೂ ಹೆಚ್ಚು ಭಯೋತ್ಪಾದಕರು ಪಾಕಿಸ್ತಾನ ಮೂಲದವರೇ ಆಗಿದ್ದಾರೆ ಎಂದು ಅವರು ಹೇಳಿದರು.
ಕಾಶ್ಮೀರಕ್ಕೆ ಐದು ಲಕ್ಷ ಯಾತ್ರಾರ್ಥಿಗಳು ಭೇಟಿ: ಈ ಪ್ರದೇಶದಲ್ಲಿ ಉಂಟಾದ ಸಕಾರಾತ್ಮಕ ಬೆಳವಣಿಗೆಗಳನ್ನು ಎತ್ತಿ ತೋರಿಸಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯುತವಾಗಿ ಚುನಾವಣೆಗಳು ನಡೆದಿರುವುದು ಮತ್ತು ದಾಖಲೆಯ ಐದು ಲಕ್ಷ ಯಾತ್ರಾರ್ಥಿಗಳು ಕಾಶ್ಮೀರಕ್ಕೆ ಭೇಟಿ ನೀಡಿರುವುದು ಸಕಾರಾತ್ಮಕ ಬದಲಾವಣೆಯ ಸೂಚಕಗಳಾಗಿವೆ. 'ಭಯೋತ್ಪಾದನೆಯ ಬದಲು ಪ್ರವಾಸೋದ್ಯಮ' ಎಂಬ ಥೀಮ್ ಕ್ರಮೇಣ ರೂಪುಗೊಳ್ಳುತ್ತಿದೆ ಎಂದು ಅವರು ನುಡಿದರು.
ಲಡಾಖ್ನಲ್ಲಿ ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯ ಕುರಿತು ಮಾತನಾಡಿದ ಜನರಲ್ ದ್ವಿವೇದಿ, ಪರಿಸ್ಥಿತಿಯು ಸೂಕ್ಷ್ಮವಾಗಿದ್ದರೂ ಸ್ಥಿರವಾಗಿದೆ ಎಂದು ಬಣ್ಣಿಸಿದರು. ಜೊತೆಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಈಗಲೂ ಪ್ರಯತ್ನಗಳು ನಡೆಯುತ್ತಿರುವುದಾಗಿ ಅವರು ಒಪ್ಪಿಕೊಂಡರು. ಚೀನಾದೊಂದಿಗಿನ ಗಡಿ ಸಮಸ್ಯೆ ಪರಿಹರಿಸಲು ಬಲವಾದ ಕಾರ್ಯತಂತ್ರದ ತಾಳ್ಮೆಯ ಅಗತ್ಯವಿದೆ ಎಂದು ಅವರು ತಿಳಿಸಿದರು.
ಡೆಪ್ಸಾಂಗ್ ಮತ್ತು ಡೆಮ್ ಚೋಕ್ನಲ್ಲಿ ಸೇನೆಗಳ ಹಿಂತೆಗೆತದ ಬಗ್ಗೆ ಮಾತನಾಡಿದ ಅವರು, "ಏಪ್ರಿಲ್ 2020 ರಿಂದ, ಎರಡೂ ಕಡೆಯ ಸೇನಾಪಡೆಗಳು ಮುಂದೆ ಸಾಗಿವೆ ಮತ್ತು ಈ ಹಿಂದೆ ಅರೆಸೈನಿಕ ನಿಯಂತ್ರಣದಲ್ಲಿದ್ದ ಸಾಂಪ್ರದಾಯಿಕ ಪ್ರದೇಶಗಳನ್ನು ಪ್ರವೇಶಿಸದಂತೆ ಆ ಕಡೆಯ ಸೈನಿಕರನ್ನು ತಡೆಯಲಾಗಿದೆ" ಎಂದು ಹೇಳಿದರು.
"ಸೇನಾ ಹಿಂತೆಗೆತದ ಈ ಪ್ರಕ್ರಿಯೆಯಲ್ಲಿ ಎರಡೂ ಕಡೆಯವರು ತಮ್ಮ ಮೂಲ ಸ್ಥಾನಗಳಿಗೆ ಮರಳಲು ಒಪ್ಪಿಕೊಂಡಿದ್ದಾರೆ. ಸಾಂಪ್ರದಾಯಿಕ ಗಸ್ತು ಪ್ರದೇಶಗಳಿಗೆ ಪುನಃ ಪ್ರವೇಶ ನೀಡಲಾಗಿದೆ. ಕಾಲಾನಂತರದಲ್ಲಿ ಎರಡೂ ಕಡೆಯವರು ಎರಡು ಬಾರಿ ಪರಿಶೀಲನಾ ಗಸ್ತುಗಳನ್ನು ನಡೆಸಿದ್ದಾರೆ ಮತ್ತು ಇಬ್ಬರೂ ಪ್ರಗತಿಯಿಂದ ತೃಪ್ತರಾಗಿದ್ದಾರೆ. ಮೇವು ಬೆಳೆಯುವ ಪ್ರದೇಶಗಳ ಬಗ್ಗೆಯೂ ಪರಸ್ಪರ ಒಪ್ಪಿಗೆ ನೀಡಲಾಗಿದೆ." ಎಂದು ದ್ವಿವೇದಿ ತಿಳಿಸಿದರು.
ಇದನ್ನೂ ಓದಿ : ಸ್ವಂತ ಬಲದ ಮೇಲೆ ಗೆಲ್ಲಲಾಗದ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸದಿರಲಿ: ಉದ್ಧವ್ ಶಿವಸೇನಾ - SHIV SENA AND CONGRESS