ಚಂಡೀಗಢ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಹೊತ್ತ ಯುದ್ದ ವಿಮಾನದ ಎರಡನೇ ತಂಡ ನಾಳೆ ಅಮೃತ್ಸರ್ಗೆ ಬಂದಿಳಿಯಲಿದೆ. 119 ಪ್ರಯಾಣಿಕರಿರುವ ಸಿ-17 ಗ್ಲೋಬ್‌ಮಾಸ್ಟರ್ 3 ಯುದ್ಧ ವಿಮಾನ ಫೆ. 16ರಂದು ಅಮೃತ್ಸರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.
ಫೆ. 5ರಂದು ಕೂಡ 104 ಅಕ್ರಮ ವಲಸಿಗರಿದ್ದ ಯುದ್ಧ ವಿಮಾನ ಇದೇ ಅಮೃತ್ಸರದ ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಇದೀಗ ಎರಡನೇ ವಿಮಾನ ಕೂಡ ಅಮೃತ್ಸರ್ಗೆ ಬಂದಿಳಿಯುತ್ತಿರುವ ಹಿನ್ನೆಲೆ ಅಮೃತ್ಸರ್ ಮುಖ್ಯಮಂತ್ರಿ ಭಗವಂತ್ ಮಾನ್ ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ.
ಭಗವಂತ್ ಮಾನ್ ಪ್ರಶ್ನೆ ಏನು?: ಗಡೀಪಾರಾಗಿರುವ ಅಕ್ರಮ ವಲಸಿಗರನ್ನು ಅಮೃತ್ ಸರದಲ್ಲಿಯೇ ಇಳಿಸುವ ಮೂಲಕ ಪಂಜಾಬ್ ಸರ್ಕಾರಕ್ಕೆ ಮುಜುಗರ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಅಮೆರಿಕದ ಯುದ್ಧ ವಿಮಾನಗಳು ಪಂಜಾಬ್ನಲ್ಲಿ ಇಳಿಯುತ್ತಿರುವುದೇಕೆ? ಇದರಿಂದ ಯಾವ ಸಂದೇಶವನ್ನು ನೀವು ಕೊಡುತ್ತಿದ್ದೀರಿ. ಪಂಜಾಬ್ನಿಂದ ಮಾತ್ರವೇ ಅಮೆರಿಕಕ್ಕೆ ವಲಸಿಗರು ಇದ್ದಾರೆ ಎಂಬ ಸಂದೇಶವನ್ನು ನೀವು ನೀಡುತ್ತಿದ್ದೀರಾ? ವಲಸಿಗರಲ್ಲಿ ಗುಜರಾತ್, ಹರಿಯಾಣದವರು ಇದ್ದಾರೆ. ಈ ವಿಮಾನವನ್ನು ದೆಹಲಿ ಅಥವಾ ಇನ್ನಿತರ ಕಡೆ ಇಳಿಸಬಹುದು. ಅಮೃತ್ಸರವನ್ನು ಮಾತ್ರ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಕೇಂದ್ರಕ್ಕೆ ಮಾನ್ ಪ್ರಶ್ನಿಸಿದ್ದಾರೆ.
ಲಘುವಾಗಿ ಪರಿಗಣಿಸಬೇಡಿ, ಬೆಲೆ ತೆರಬೇಕಾದೀತು: ಮಾನ್ ಅವರ ಈ ವಾದಕ್ಕೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೂಡ ಬೆಂಬಲ ವ್ಯಕ್ತ ಪಡಿದಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪಂಜಾಬ್ ಅನ್ನು ಹಗುರವಾಗಿ ತೆಗೆದುಕೊಂಡು ಮುಜುಗರ ಉಂಟುಮಾಡುವ ಕುರಿತು ಲಘುವಾಗಿ ಪರಿಗಣಿಸಬೇಡಿ. ಇದಕ್ಕೆ ಬೆಲೆ ತೆರಬೇಕಾಗುತ್ತದೆ ಇದು ದೆಹಲಿಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಶಿರೋಮಣಿ ಅಕಾಲಿ ದಳ ನಾಯಕ ಹಾಗೂ ಪಂಜಾಬ್ ಮಾಜಿ ಸಚಿವ ಗುಲ್ಜಾರ್ ಸಿಂಗ್ ರಣಿಕೆ ಕೂಡ ಕೇಂದ್ರ ಪಂಜಾಬ್ ಅನ್ನು ಗುರಿಯಾಗಿಸುತ್ತಿದ್ದು, ಗಡೀಪಾರಾಗಿರುವ ಭಾರತೀಯರನ್ನು ಅಮೃತ್ಸರ ವಿಮಾನ ನಿಲ್ದಾಣದಲ್ಲಿ ಇಳಿಸುವುದರ ಹಿಂದೆ ಪಿತೂರಿ ಇದೆ ಎಂದಿದ್ದಾರೆ.
ಪಂಜಾಬ್ ಅನ್ನು ಯಾವಾಗಲೂ ಅವಮಾನ ಮಾಡುತ್ತಿರುವುದು ದುರಾದೃಷ್ಟಕರ. ಪಂಜಾಬ್ ಗಡಿ ರಾಜ್ಯವಾಗಿದೆ. ವಿಶೇಷವಾಗಿ ಅಮೃತ್ಸರ ಗಡಿ ಸಮೀಪದಲ್ಲೇ ಇದೆ. ಇಲ್ಲಿ ಅಕ್ರಮ ವಲಸಿಗರಿರುವ ವಿಮಾನವನ್ನು ಇಳಿಸುವ ಮೂಲಕ ಪಂಜಾಬ್ ಅನ್ನು ಅವಮಾನ ಮಾಡುವ ಮತ್ತು ಪಂಜಾಬಿಗರು ಮಾತ್ರ ಅಕ್ರಮ ವಲಸಿಗರು ಎಂದು ಬಿಂಬಸುವ ಪಿತೂರಿಯಾಗಿದೆ. ಈ ವಿಮಾನಗಳು ಬೇರೆ ಎಲ್ಲಾದರೂ ಇಳಿಯಬಹುದು. ನಾವು ಅಮೃತ್ಸರದಿಂದ ಅಂತಾರಾಷ್ಟ್ರೀಯ ವಿಮಾನಗಳ ಆರಂಭಕ್ಕೆ ಬೇಡಿಕೆ ಇಟ್ಟಿದ್ದೇವೆ. ಆದರೆ, ಇದಕ್ಕೆ ಕೇಂದ್ರ ಒಪ್ಪಿಗೆ ನೀಡಿಲ್ಲ. ಆದರೆ, ಇದೀಗ ವಿದೇಶಿ ವಿಮಾನಗಳು ಅಮೃತ್ಸರಕ್ಕೆ ಬಂದಿಳಿಯುತ್ತಿವೆ. ಇದು ನಮ್ಮನ್ನು ಅವಮಾನ ಮಾಡುವ ಉದ್ದೇಶ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನಾನಿರತ ರೈತರು - ಕೇಂದ್ರದ ನಡುವೆ ಸೌಹಾರ್ದಯುತ ಸಭೆ: ಫೆ.22ಕ್ಕೆ ಮುಂದಿನ ಸುತ್ತಿನ ಮಾತುಕತೆ
ಇದನ್ನೂ ಓದಿ: ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ 2 ದಿನಗಳ ಭಾರತ ಭೇಟಿ: ತಾಜ್ ಮಹಲ್ ವೀಕ್ಷಿಸಲಿರುವ ಬ್ರಿಟನ್ ಜೋಡಿ