ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಪುನಾರಚನೆ ಮಾಡಲಾಗಿದ್ದ, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ಪಂಜಾಬ್‌ನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಮಧ್ಯಪ್ರದೇಶಕ್ಕೆ ವರ್ಗಾವಣೆಗೊಂಡಿರುವ ಹರೀಶ್ ಚೌಧರಿ ಬದಲಿಗೆ ಬಾಘೇಲ್ ಅವರನ್ನು ನೇಮಕ ಮಾಡಲಾಗಿದೆ. ಅದೇ ರೀತಿ, ಕರ್ನಾಟಕದ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನಾಸೀರ್ ಹುಸೇನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷರ ಕಚೇರಿ ಜವಾಬ್ದಾರಿಯಿಂದ ಮುಕ್ತಿಗೊಳಿಸಿ, ಜಮ್ಮು ಮತ್ತು ಕಾಶ್ಮೀರದ ಎಐಸಿಸಿ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಈವರೆಗೆ ಇಲ್ಲಿ ಭರತ್‌ಸಿಂಗ್ ಸೋಲಂಕಿ ಉಸ್ತುವಾರಿ ಆಗಿದ್ದರು.
ಪಕ್ಷ ಬಲ ಪಡಿಸುವ ಹೊಣೆ: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಸೋಲಿನ ನಂತರ, ಅದರ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ರಚಿಸಲಾದ ಸಮಿತಿಯು ಸೋಲಂಕಿ ವಿರುದ್ಧ ವರದಿ ನೀಡಿತ್ತು. ಈಗ ಮತ್ತೆ ಪಕ್ಷವನ್ನು ಪುನರುಜ್ಜೀವನಗೊಳಿಸಲು ಹುಸೇನ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಅವರ ಮೇಲೆ ಈಗ ಪಕ್ಷದ ಸಂಘಟನೆ ಬಲಗೊಳಿಸುವ ಕಠಿಣ ಸವಾಲು ಇದೆ. ಲಡಾಖ್‌ನಲ್ಲಿ, ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಎನ್‌ಸಿಗಿಂತ ಹಿಂದೆ ಉಳಿದಿದೆ ಮತ್ತು ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಅವರು ಸ್ಥಳೀಯ ನಾಯಕತ್ವದೊಂದಿಗೆ ಕೆಲಸ ಮಾಡಬೇಕಾಗುತ್ತದೆ.
Hon'ble Congress President Shri @kharge has appointed the following party functionaries as AICC General Secretaries/In-charges of the respective States/UTs, with immediate effect. pic.twitter.com/zl8Y0eP5ZM
— Congress (@INCIndia) February 14, 2025
ಹಿಮಾಚಲಕ್ಕೆ ರಜಿನಿ ಉಸ್ತುವಾರಿ: ಇನ್ನು ಎಐಸಿಸಿ ಅಧ್ಯಕ್ಷರು ರಾಜ್ಯಸಭಾ ಸದಸ್ಯೆ ರಜನಿ ಪಾಟೀಲ್ ಅವರನ್ನು ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೆ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ. ಇಲ್ಲಿ ಈ ಹಿಂದೆ ಹಿರಿಯ ನಾಯಕ ರಾಜೀವ್ ಶುಕ್ಲಾ ಅವರು ಉಸ್ತುವಾರಿಯಾಗಿದ್ದರು. ರಜನಿ ಪಟೇಲ್ ಅವರು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ.
ಮೀನಾಕ್ಷಿ ನಟರಾಜನ್ ಗೆ ತೆಲಂಗಾಣದ ಹೊಣೆ: ಮಧ್ಯಪ್ರದೇಶದ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ತೆಲಂಗಾಣದ ನೂತನ ಉಸ್ತುವಾರಿಯಾಗಿದ್ದಾರೆ. ಈ ರಾಜ್ಯದ ಉಸ್ತುವಾರಿಯಾಗಿ ಮೊದಲು ದೀಪಾ ದಾಸ್ ಮುನ್ಶಿ ಅವರು ಡಿಸೆಂಬರ್ 2023 ರಿಂದ ಹೊಣೆ ಹೊತ್ತಿದ್ದರು. ಈ ಬದಲಾವಣೆ ಬಳಿಕ ದೀಪಾ ದಾಸ್ ಮುನ್ಶಿ ಅವರು ಕೇರಳ ಮತ್ತು ಲಕ್ಷದ್ವೀಪಗಳಿಗೆ ಎಐಸಿಸಿ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ.
ಹರಿಯಾಣ ಪಕ್ಷ ಬಲವರ್ಧನೆ ಹೊಣೆ ಬಿ ಕೆ ಹರಿಪ್ರಸಾದ್ ಹೆಗಲಿಗೆ: ಇನ್ನು ದೀಪಕ್ ಬಬಾರಿಯಾ ಬದಲಿಗೆ ಬಿ.ಕೆ. ಹರಿಪ್ರಸಾದ್ ಅವರನ್ನು ಹರಿಯಾಣದ ಉಸ್ತುವಾರಿಯನ್ನಾಗಿ ಖರ್ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಗಿರೀಶ್ ಚೋಡಂಕರ್ ಅವರನ್ನು ತಮಿಳುನಾಡು ಮತ್ತು ಪುದುಚೇರಿಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ. ಅಜಯ್ ಕುಮಾರ್ ಲಲ್ಲು ಒಡಿಶಾಗೆ ಮತ್ತು ಕೆ.ರಾಜು ಜಾರ್ಖಂಡ್‌ಗೆ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
ಮಣಿಪುರ, ತ್ರಿಪುರ, ಸಿಕ್ಕಿಂ ಮತ್ತು ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ವ್ಯವಹಾರಗಳನ್ನು ಸಪ್ತಗಿರಿ ಶಂಕರ್ ಉಲಕ ನೋಡಿಕೊಳ್ಳುತ್ತಾರೆ. ಕೃಷ್ಣ ಅಳ್ಳವರು ಬಿಹಾರದ ನೂತನ ಉಸ್ತುವಾರಿಯಾಗಿ ಹೊಣೆ ಹೊರಿಸಲಾಗಿದೆ.
ಹಾಗೇ ನಿರ್ಗಮಿಸುವ ಪ್ರಧಾನ ಕಾರ್ಯದರ್ಶಿಗಳು/ಪ್ರಭಾರಿಗಳಾಗಿದ್ದ ದೀಪಕ್ ಬಾಬ್ರಿಯಾ, ಮೋಹನ್ ಪ್ರಕಾಶ್, ಭರತ್ ಸಿಂಗ್ ಸೋಲಂಕಿ, ರಾಜೀವ್ ಶುಕ್ಲಾ, ಅಜೋಯ್ ಕುಮಾರ್ ಮತ್ತು ದೇವೇಂದ್ರ ಯಾದವ್ ಕೊಡುಗೆಗಳನ್ನು ಪಕ್ಷವು ಶ್ಲಾಘಿಸಿದೆ.
ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ನೇಮಕ; ಪ್ರಧಾನಿ ನೇತೃತ್ವದ ಸಮಿತಿ ಸಭೆ ಮುಂದಿನ ವಾರ