ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿ (1000 ಹುದ್ದೆ) ಹಾಗೂ ಜಿಟಿಟಿಸಿ (98 ಹುದ್ದೆ)ಯ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೆ.29 ರಂದು ಕನ್ನಡ ಕಡ್ಡಾಯ ಪರೀಕ್ಷೆ ನಡೆಸುತ್ತಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ 5.75 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ರಾಜ್ಯದ 1,410 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಸಂಜೆವರೆಗೆ 4.8 ಲಕ್ಷ ಮಂದಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಭಾನುವಾರ ನಡೆಯುವ 150 ಅಂಕಗಳ ಕನ್ನಡ ಕಡ್ಡಾಯ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್ 27ರಂದು ನಡೆಯುವ ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ. ಈ ಪರೀಕ್ಷೆಗೆ ಗೈರಾದವರು ಕೂಡ ಅರ್ಹರಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಿಟಿಟಿಸಿಯ ವಿವಿಧ ಹುದ್ದೆಗಳ ಕನ್ನಡ ಕಡ್ಡಾಯ ಪರೀಕ್ಷೆಗೆ 4000 ಮಂದಿ ಇದ್ದು ಅಷ್ಟೂ ಮಂದಿಗೆ ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಅಂದು ಬೆಂಗಳೂರಿನ 115 ಕೇಂದ್ರಗಳಲ್ಲಿ 56 ಸಾವಿರ ಮಂದಿ ಪರೀಕ್ಷೆ ಬರೆಯಲಿದ್ದಾರೆ. ವಯೋಮಿತಿ ಸಡಿಲಿಕೆಯ ಅನುಕೂಲ ಪಡೆಯುವವರ ಸಲುವಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ.26 ರಂದು ಕನ್ನಡ ಕಡ್ಡಾಯ ಪರೀಕ್ಷೆ ಇರುತ್ತದೆ. ಅದರ ನಂತರ ಅವರು ಅ.27 ರಂದು ನಡೆಯುವ ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅ.3ಕ್ಕೆ ಪಿಎಸ್ಐ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ: ಅಕ್ಟೋಬರ್ 3ರಂದು ನಡೆಯುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕೆಇಎ ವೆಬ್ಸೈಟ್ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದೆ ಎಂದು ಪ್ರಸನ್ನ ತಿಳಿಸಿದರು.
ಇದನ್ನೂ ಓದಿ: ಮೈಸೂರಿನಲ್ಲಿ 412, ಕೊಪ್ಪಳದಲ್ಲಿ 461 ಅಂಗನವಾಡಿ ಉದ್ಯೋಗ; ಅಧಿಸೂಚನೆ ಪ್ರಕಟ - Anganwadi Jobs