ನವದೆಹಲಿ: ನಿಧಾನವಾಗಿ ಚಲಿಸುವಂತೆ ಹೇಳಿದ ಪೊಲೀಸ್ ಕಾನ್ಸ್ಟೇಬಲ್ಗೆ ಕಾರು ಗುದ್ದಿಸಿ ಕೊಲೆ ಮಾಡಿದ ಘಟನೆ ದೆಹಲಿಯ ನಾಂಗಲೋಯಿ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ. ಸಂದೀಪ್ (30) ಮೃತ ಕಾನ್ಸ್ಟೇಬಲ್. ಶನಿವಾರ ರಾತ್ರಿ ಡ್ಯೂಟಿಯಲ್ಲಿದ್ದು ಬೈಕ್ನಲ್ಲಿ ಠಾಣೆಗೆ ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಗುದ್ದಿಸಿ 10 ಮೀಟರ್ ಎಳೆದೊಯ್ದ: ದೆಹಲಿಯ ನಾಂಗಲೋಯಿ ಠಾಣೆಯ ರಸ್ತೆಯಲ್ಲಿ ಕಾರು ಚಾಲಕನೋರ್ವ ಅಜಾಗರೂಕ ಮತ್ತು ವೇಗವಾಗಿ ಸಂಚರಿಸುತ್ತಿದ್ದ. ಇದನ್ನು ಗಮನಿಸಿದ ಕಾನ್ಸ್ಟೇಬಲ್ ಸಂದೀಪ್, ನಿಧಾನವಾಗಿ ಚಲಿಸುವಂತೆ ಸೂಚಿಸಿದ್ದರು. ಇದರಿಂದ ಕುಪಿತಗೊಂಡ ಆತ ಬೈಕ್ನಲ್ಲಿ ತೆರಳುತ್ತಿದ್ದ ಕಾನ್ಸ್ಟೇಬಲ್ಗೆ ಹಿಂದಿನಿಂದ ಕಾರು ಗುದ್ದಿಸಿ, 10 ಮೀಟರ್ವರೆಗೆ ಎಳೆದೊಯ್ದು ನಂತರ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೀವ್ರವಾಗಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಲಾಜಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸಂದೀಪ್ಗೆ ತಲೆಗೆ ಗಂಭೀರ ಗಾಯವಾಗಿದ್ದರಿಂದ ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಬಳಿಕ ಕಾರು ಬಿಟ್ಟು ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದೇವೆ. ಈ ಕುರಿತು ಬಿಎನ್ಎಸ್ 103 ಸೆಕ್ಷನ್ (ಕೊಲೆ) ಅಡಿ ದೂರು ದಾಖಲಿಸಿಕೊಂಡಿದ್ದೇವೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರು ಗುದ್ದಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾನ್ಸ್ಟೇಬಲ್ ಬೈಕ್ನಲ್ಲಿ ನಿಧಾನವಾಗಿ ಚಲಿಸುತ್ತಿದ್ದು, ಹಿಂದಿನಿಂದ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದು ಎಳೆದೊಯ್ದಿರುವುದು ವಿಡಿಯೋದಲ್ಲಿದೆ. ಕಾರಿನಲ್ಲಿ ಇಬ್ಬರಿದ್ದರು ಎಂದು ತಿಳಿದು ಬಂದಿದೆ.
ಸಂದೀಪ್ 2018ರಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಇವರಿಗೆ ಪತ್ನಿ, 5 ವರ್ಷದ ಗಂಡು ಮಗು ಮತ್ತು ತಾಯಿ ಇದ್ದಾರೆ. ಕಾನ್ಸ್ಟೇಬಲ್ ನಿಧನಕ್ಕೆ ದೆಹಲಿ ಪೊಲೀಸರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ತಾಯಿ, ಎರಡು ಮಕ್ಕಳ ಮೃತದೇಹ ಬಾವಿಯಲ್ಲಿ ಪತ್ತೆ, ಕೊಲೆ ಶಂಕೆ - Chikkodi Mother And Children Death