ಕರ್ನಾಟಕ

karnataka

ETV Bharat / state

ಮಾಜಿ ಸಚಿವರ ಆಪ್ತೆ ಎಂದು ಚಿನ್ನ ಖರೀದಿ ನೆಪದಲ್ಲಿ ವಂಚನೆ: ಆರೋಪಿ ಮಹಿಳೆ ಬಂಧನ - WOMAN ARRESTED FOR CHEATING

ಮಹಿಳೆಯನ್ನು ಬಂಧಿಸಿರುವ ಪುಲಿಕೇಶಿ ನಗರ ಉಪವಿಭಾಗದ ಪೊಲೀಸರು ಆರೋಪಿಯಿಂದ ಚಿನ್ನ ಹಾಗೂ ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

Accused woman Shwetha Gowda
ಆರೋಪಿ ಮಹಿಳೆ ಶ್ವೇತಾ ಗೌಡ (ETV Bharat)

By ETV Bharat Karnataka Team

Published : 6 hours ago

Updated : 4 hours ago

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಪರಿಚಯಿಸಿಕೊಂಡು, ಚಿನ್ನ ಖರೀದಿ ನೆಪದಲ್ಲಿ ಜ್ಯುವೆಲ್ಲರಿ ಶಾಫ್ ಮಾಲೀಕರಿಗೆ ವಂಚಿಸಿದ ಆರೋಪದಡಿ ಮಹಿಳೆಯೊಬ್ಬರನ್ನು ಬೆಂಗಳೂರಿನ ಪುಲಿಕೇಶಿ ನಗರ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ನಿವಾಸಿ ಶ್ವೇತಾ ಗೌಡ ಬಂಧಿತ ಆರೋಪಿ. ಕಮರ್ಷಿಯಲ್‌ ಸ್ಟ್ರೀಟ್‌ನ ನವರತ್ನ ಜ್ಯುವೆಲ್ಲರ್ಸ್ ಮಾಲೀಕ ಸಂಜಯ್ ಭಾಫ್ನಾ ಅವರಿಂದ ಸುಮಾರು 2.945 ಕೆ.ಜಿ ಚಿನ್ನ ಪಡೆದು ವಂಚಿಸಿದ ಆರೋಪದಡಿ ಆರೋಪಿಯನ್ನು ಬಂಧಿಸಲಾಗಿದೆ.

ನವರತ್ನ ಜ್ಯುವೆಲ್ಲರ್ಸ್ ಮಾಲೀಕ ಸಂಜಯ್ ಭಾಫ್ನಾ ಅವರ ಮಳಿಗೆಗೆ ಬರುತ್ತಿದ್ದ ಆರೋಪಿ, ಮಾಜಿ ಸಚಿವರ ಆಪ್ತೆ ಎಂದು ಪರಿಚಯಿಸಿಕೊಂಡಿದ್ದರು. ತಾನು 'ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದು, ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ' ಎಂದಿದ್ದರು. ಸಂಜಯ್ ಸಹ ಇದಕ್ಕೆ ಒಪ್ಪಿದ್ದರು. ಆರೋಪಿ ಎರಡ್ಮೂರು ಬಾರಿ ಚಿನ್ನಾಭರಣಗಳನ್ನು ಮನೆಯವರಿಗೆ ತೋರಿಸಿಕೊಂಡು ಬರುವುದಾಗಿ ಅನುಮತಿ ಪಡೆದು ಕೊಂಡೊಯ್ದಿದ್ದರು. ಆದರೆ ಆಗಸ್ಟ್ 26ರಿಂದ ಡಿ. 8ರವರೆಗಿನ ಅವಧಿಯಲ್ಲಿ ಆರೋಪಿ ಹೇಳಿದ್ದ ವಿಳಾಸಕ್ಕೆ ಜ್ಯುವೆಲ್ಲರಿ ಶಾಫ್ ಸಿಬ್ಬಂದಿ ಸುಮಾರು 2.42 ಕೋಟಿ ರೂ. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣಗಳನ್ನು ತಲುಪಿಸಿದ್ದರು.

ಮಾಜಿ ಶಾಸಕ ವರ್ತೂರು ಪ್ರಕಾಶ್‌ ಪ್ರತಿಕ್ರಿಯೆ (ETV Bharat)

ಆರೋಪಿ ಬಂಧಿಸಿದ ಪೊಲೀಸರು;ಆದರೆ ಆರೋಪಿ ಯಾವುದೇ ಚಿನ್ನಾಭರಣವನ್ನೂ ಹಿಂದಿರುಗಿಸಿರಲಿಲ್ಲ‌. ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸಿ ಎಂದು ಕೇಳಿದಾಗ ಧಮ್ಕಿ ಹಾಕಿದ್ದಾಳೆ ಎಂದು ಜ್ಯುವೆಲರ್ಸ್‌ ಮಾಲೀಕ ಸಂಜಯ್‌ ಭಾಪ್ನಾ ಕಮರ್ಷಿಯಲ್‌ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರಿಗೆ ಸೇರಿದ ಕಾರಿನಲ್ಲೇ ಆರೋಪಿ ಶ್ವೇತಾ ಗೌಡ ಮೈಸೂರಿಗೆ ತೆರಳಿದ್ದಳು. ಇತ್ತ ಪ್ರಕರಣದ ತನಿಖೆ ಕೈಗೊಂಡ ಪುಲಿಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ನೇತೃತ್ವದ ತಂಡ ಮೈಸೂರಿಗೆ ತೆರಳಿ ಆರೋಪಿ ಶ್ವೇತಾ ಗೌಡಳನ್ನು ಬಂಧಿಸಿದೆ. ಆರೋಪಿಯಿಂದ ಚಿನ್ನ ಹಾಗೂ ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಶ್ವೇತಾ ಗೌಡ ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ಹಿಡಿದಿದ್ದರು. ಈ ಮೊದಲು ಇದೇ ರೀತಿ ಚಿನ್ನದ ವ್ಯಾಪಾರಿಗೆ ಮೋಸ ಮಾಡಿದ್ದ ಆರೋಪದಡಿ ಯಲಹಂಕ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಜಾಮೀನು ಪಡೆದು ಹೊರ ಬಂದ ಶ್ವೇತಾ ಗೌಡ ಮತ್ತೆ ತನ್ನ ಚಾಳಿ ಮುಂದುವರೆಸಿದ್ದರು ಎಂದು ತಿಳಿದು ಬಂದಿದೆ.

ವರ್ತೂರು ಪ್ರಕಾಶ್‌ ವಿಚಾರಣೆಗೆ ನೋಟಿಸ್:ಡಾಲರ್ಸ್‌ ಕಾಲೊನಿಯಲ್ಲಿರುವ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಅವರ ಮನೆ ವಿಳಾಸ ನೀಡಿ ಆರೋಪಿ 2.945 ಕೆಜಿ ಚಿನ್ನ ಪಡೆದಿದ್ದಳು. ಆದ್ದರಿಂದ ಪ್ರಕರಣದಲ್ಲಿ ವರ್ತೂರು ಪ್ರಕಾಶ್ ಅವರಿಗೂ ಸಹ ತನಿಖೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ವರ್ತೂರು ಪ್ರಕಾಶ್ ಅವರಿಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ನೋಟಿಸ್ ನೀಡಿದ್ದಾರೆ.

ವರ್ತೂರು ಪ್ರಕಾಶ್ ಸ್ಪಷ್ಟನೆ:"ಆರೋಪಿ ಮಹಿಳೆ 3-4 ತಿಂಗಳ ಮುಂಚೆ ನಮ್ಮ ಮನೆಗೆ ಬಂದು, ಸಮಾಜ ಸೇವಕಿ ಎಂದು ಪರಿಚಯಿಸಿಕೊಂಡಿದ್ದರು. ಆಕೆಯೂ ನನಗೆ ತಿಳಿಸಿ ಒಡವೆ ಖರೀದಿಸಿಲ್ಲ. ಜ್ಯುವೆಲ್ಲರಿ ಮಾಲೀಕರು ನನಗೆ ತಿಳಿಸಿಲ್ಲ. ಆಕೆಯ ಬ್ಯುಸಿನೆಸ್, ಬಂಗಾರದ ಬಗ್ಗೆ ನನ್ನ ಬಳಿ ಪ್ರಸ್ತಾಪ ಮಾಡಿಯೇ ಇಲ್ಲ. ನನಗೂ ನಿನ್ನೆಯೇ ಗೊತ್ತಾಗಿದೆ. ನಮ್ಮ ಮನೆ ಬಳಿ ಬೇರೆ ಜನ ಬಂದ ಹಾಗೆ ಆಕೆಯೂ ಬಂದಿದ್ದಾಳೆ. ದೂರು ನೀಡಿರುವ ವಿಚಾರ ಪೊಲೀಸರಿಂದ ನಿನ್ನೆ ತಿಳಿಯಿತು. ಸೋಮವಾರ ವಿಚಾರಣೆಗೆ ಹೋಗಲಿದ್ದೇನೆ" ಎಂದು ಮಾಜಿ ಶಾಕವ ವರ್ತೂರು ಪ್ರಕಾಶ್​ ತಿಳಿದ್ದಾರೆ.

ಇದನ್ನೂ ಓದಿ:ಉದ್ಯೋಗಿಗಳ ಇಪಿಎಫ್ ಹಣ ವಂಚನೆ ಆರೋಪ; ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರಂಟ್

Last Updated : 4 hours ago

ABOUT THE AUTHOR

...view details