2024 ಕೊನೆಗೊಳ್ಳುತ್ತಿದ್ದು, ಇಡೀ ವರ್ಷವನ್ನು ಮೆಲುಕು ಹಾಕುವ ಸಮಯ ಬಂದಿದೆ. ಪ್ರೀತಿ ಮತ್ತು ನವಾರಂಭಗಳಿಂದ ಗುರುತಿಸಲ್ಪಟ್ಟ ವರ್ಷವನ್ನು ಸಂಭ್ರಮಿಸುವ ಕ್ಷಣ. ಬಾಕ್ಸ್ ಆಫೀಸ್ ಸಕ್ಸಸ್ ಮತ್ತು ವೃತ್ತಿಜೀವನದ ಮೈಲಿಗಲ್ಲಿಂದಾಚೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿರುವ ಹಲವು ಸೆಲೆಬ್ರಿಟಿಗಳಿಗೆ ಈ ವರ್ಷ ವಿಶೇಷ ಅಂತಲೇ ಹೇಳಬಹುದು. ಅದ್ಧೂರಿ ಮದುವೆಯಿಂದ ಹಿಡಿದು ಆತ್ಮೀಯ ಸಮಾರಂಭಗಳವರೆಗೆ, ಈ ವರ್ಷ ಸಖತ್ ಸದ್ದು ಮಾಡಿದ ಸೆಲೆಬ್ರಿಟಿ ವಿವಾಹಗಳ ಬಗ್ಗೆ ಮಾಹಿತಿ ಇಲ್ಲಿದೆ.
ತರುಣ್ ಸುಧೀರ್-ಸೋನಾಲ್ ಮೊಂತೆರೋ: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಹಾಗೂ ಖ್ಯಾತ ನಟಿ ಸೋನಾಲ್ ಮೊಂತೆರೋ ಆಗಸ್ಟ್ 11ರಂದು ಹಸೆಮಣೆಯೇರಿದರು. ಇದಾದ ಕೆಲವೇ ದಿನಗಳ ನಂತರ ಕ್ರಿಶ್ಚಿಯನ್ ಸಂಪ್ರದಾಯದಲ್ಲೂ ಮದುವೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. 2021ರ ಮಾರ್ಚ್ 11ರಂದು ತೆರೆಕಂಡ ರಾಬರ್ಟ್ ಚಿತ್ರದಲ್ಲಿ ಸೋನಾಲ್ ಕಾಣಿಸಿಕೊಂಡಿದ್ದರು. ತರುಣ್ ಸುಧೀರ್ ನಿರ್ದೇಶನದಲ್ಲಿ ಬಂದ ಸಿನಿಮಾ ಯಶಸ್ವಿಯಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಸದ್ಯ ಖುಷಿ ಸಂಸಾರದಲ್ಲಿ ಬ್ಯುಸಿಯಾಗಿದ್ದಾರೆ.
ನಾಗಭೂಷಣ್-ಪೂಜಾ: ಹಲವು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಮತ್ತು ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಚಂದನವನದಲ್ಲಿ ಗುರುತಿಸಿಕೊಂಡಿರುವ ನಾಗಭೂಷಣ್ ಅವರು ತಮ್ಮ ಬಹುಕಾಲದ ಗೆಳತಿ ಪೂಜಾ ಅವರನ್ನು ಜನವರಿಯಲ್ಲಿ ಮದುವೆಯಾದರು. ಡಾಲಿ ಸ್ನೇಹಿತ ನಾಗಭೂಷಣ್ ಟಗರು ಪಲ್ಯ ಸಿನಿಮಾ ಮೂಲಕ ನಾಯಕನಟನಾಗಿಯೂ ಹೊರಹೊಮ್ಮಿದ್ದಾರೆ.
ಡಾಲಿ ಧನಂಜಯ್ ಮದುವೆ ಘೋಷಣೆ: ನಟರಾಕ್ಷಸ ಡಾಲಿ ಧನಂಜಯ್ 2025ರ ಆರಂಭದಲ್ಲಿ ಹಸೆಮಣೆ ಏರುತ್ತಿದ್ದಾರೆ. ದೀಪಾವಳಿ ಹಬ್ಬದಂದು ಈ ಶುಭ ಸುದ್ದಿ ಹಂಚಿಕೊಂಡಿದ್ದರು. ಬಹುಕಾಲದ ಗೆಳತಿ ಗೈನಕಾಲಜಿಸ್ಟ್ ಆಗಿರುವ ಧನ್ಯತಾ ಅವರನ್ನು 2025ರ ಫೆಬ್ರವರಿಗೆ ಡಾಲಿ ವರಿಸಲಿದ್ದಾರೆ.
ಪುಲ್ಕಿತ್ ಸಾಮ್ರಾಟ್ ಕೃತಿ ಕರಬಂದ: ಮಾರ್ಚ್‌ನಲ್ಲಿ ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಮತ್ತು ಗೂಗ್ಲಿ ಬೆಡಗಿ ಕೃತಿ ಕರಬಂದ ದಾಂಪತ್ಯ ಜೀವನ ಆರಂಭಿಸಿದರು. ಐದು ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ದೆಹಲಿಯಲ್ಲಿ ಸಪ್ತಪದಿ ತುಳಿದರು. ಅವರ ವಿವಾಹದ ಕ್ಷಣಗಳು ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡಿತ್ತು.
ನಾಗ ಚೈತನ್ಯ-ಶೋಭಿತಾ ಧೂಳಿಪಾಲ: ದಕ್ಷಿಣ ಭಾರತ ಚಿತ್ರರಂಗದ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಡಿಸೆಂಬರ್ 4ರಂದು ಹಾರ ಬದಲಾಯಿಸಿಕೊಂಡರು. ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಾಂಪ್ರದಾಯಿಕ ವಿವಾಹವು ಹೆಚ್ಚಿನವರ ಗಮನ ಸೆಳೆಯಿತು. ಸಾಂಪ್ರದಾಯಿಕ ಲುಂಗಿ ಕುರ್ತಾ ಔಟ್ಫಿಟ್ನಲ್ಲಿ ನಾಗ ಚೈತನ್ಯ ಕಾಣಿಸಿಕೊಂಡಿದ್ದರೆ, ಶೋಭಿತಾ ಅವರ ಅಲೌಕಿಕ ವಧುವಿನ ನೋಟ ನೆಟ್ಟಿಗರ ಮನ ಗೆದ್ದಿತ್ತು.
ಕೀರ್ತಿ ಸುರೇಶ್-ಆಂಟೋನಿ ಥಟ್ಟಿಲ್: ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮತ್ತು ಆಂಟೋನಿ ಥಟ್ಟಿಲ್ ಜೋಡಿಯ ಮದುವೆ ನಡೆದಿದೆ. 15 ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ಡಿಸೆಂಬರ್ 12ರಂದು ಗೋವಾದಲ್ಲಿ ನಡೆದ ಖಾಸಗಿ ಈವೆಂಟ್ನಲ್ಲಿ ಒಂದಾದರು. ದಕ್ಷಿಣ ಭಾರತದ ಶೈಲಿಯ ವಿವಾಹ ಕಾರ್ಯಕ್ರಮ ನಡೆಯಿತು. ಮರುದಿನ ಅದೇ ಸ್ಥಳದಲ್ಲಿ ಕ್ರಿಶ್ಚಿಯನ್ ಶೈಲಿಯ ಸಮಾರಂಭವನ್ನೂ ಆಯೋಜಿಸಿದ್ದರು.
ಇರಾ ಖಾನ್-ನೂಪುರ್ ಶಿಖರೆ: ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಬಹುಕಾಲದ ಗೆಳೆಯ, ಫಿಟ್ನೆಸ್ ತರಬೇತುದಾರ ನೂಪುರ್ ಶಿಖರೆ ಅವರನ್ನು ಜನವರಿ 3ರಂದು ಮದುವೆಯಾದರು. ರಿಜಿಸ್ಟರ್ ನಂತರ ಜನವರಿ 10ರಂದು ಉದಯಪುರದಲ್ಲಿ ಡ್ರೀಮಿ ಡೆಸ್ಟಿನೇಶನ್ ವೆಡ್ಡಿಂಗ್ ಇಟ್ಟುಕೊಂಡಿದ್ದರು. ಮುಂಬೈನಲ್ಲಿ ಆರತಕ್ಷತೆ ನಡೆಯಿತು. ಮದುವೆ ಪ್ರಮಾಣಪತ್ರಕ್ಕೆ ಸಹಿ ಹಾಕಲು ನೂಪುರ್ ಜಾಗಿಂಗ್ ಮಾಡುತ್ತಾ ಬಂದ ಕ್ಷಣ ಆನ್ಲೈನ್ನಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ: ಪ್ರೀತಿಗೆ ಸಂಕೇತದಂತಿರುವ ಫೆಬ್ರವರಿ ತಿಂಗಳಲ್ಲಿ ಬಾಲಿವುಡ್ ತಾರೆಯರಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ದಾಂಪತ್ಯ ಜೀವನ ಆರಂಭಿಸಿದರು. ಫೆಬ್ರವರಿ 21ರಂದು ಗೋವಾದಲ್ಲಿ ಹಸೆಮಣೆಯೇರಿದರು. ಹಲವು ವರ್ಷಗಳ ಡೇಟಿಂಗ್ ನಂತರ, ಪ್ರೇಮಪಕ್ಷಿಗಳು ತಮ್ಮ ಮದುವೆಗೆ ಬೀಚ್‌ಸೈಡ್ ಲೊಕೇಶನ್ನನ್ನು ಆಯ್ದುಕೊಂಡರು. ಸಮಾರಂಭಕ್ಕೆ ಕುಟುಂಬ, ಸ್ನೇಹಿತರು ಮತ್ತು ಇಂಡಸ್ಟ್ರಿ ಗೆಳೆಯರು ಸಾಕ್ಷಿಯಾಗಿದ್ದರು.
ತಾಪ್ಸಿ ಪನ್ನು-ಮಥಿಯಾಸ್ ಬೋ: ಮಾರ್ಚ್‌ನಲ್ಲಿ ತಾಪ್ಸಿ ಪನ್ನು ಮತ್ತು ಬಹುಕಾಲದ ಗೆಳೆಯ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರ ಮದವೆ ಕಾರ್ಯಕ್ರಮ ಜನರ ಗಮನ ಸೆಳೆದಿತ್ತು. ಪ್ರೇಮಪಕ್ಷಿಗಳು 2023ರ ಡಿಸೆಂಬರ್ನಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದರು. ಆದರೆ ಅವರ ಸಾಂಪ್ರದಾಯಿಕ ಆಚರಣೆ ಮಾರ್ಚ್ 23ರಂದು ಉದಯಪುರದಲ್ಲಿ ಜರುಗಿತು. ಈ ಪ್ರೋಗ್ರಾಮ್ ಕುಟುಂಬ ಮತ್ತು ಆಪ್ತರಿಗಷ್ಟೇ ಸೀಮಿತವಾಗಿತ್ತು. ಪ್ರೈವೇಟ್ ಲೈಫ್ಸ್ಟೈಲ್ಗೆ ಹೆಸರುವಾಸಿಯಾಗಿರುವ ನಟಿ ತಾಪ್ಸಿ ಪನ್ನು ಮದುವೆ ಬಗ್ಗೆ ಹೆಚ್ಚೇನು ಸದ್ದಾಗಲು ಅವಕಾಶ ಕೊಡಲಿಲ್ಲ.
ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್: ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ದಾಂಪತ್ಯ ಜೀವನ ಜೂನ್ನಲ್ಲಿ ಪ್ರಾರಂಭವಾಯಿತು. 4 ವರ್ಷಗಳಿಂದ ರಿಲೇಶನ್ಶಿಪ್ನಲ್ಲಿದ್ದ ಜೋಡಿ ಜೂನ್ 23ರಂದು ತಮ್ಮ ಮದುವೆಯನ್ನು ನೋಂದಾಯಿಸಿಕೊಂಡರು. ನಂತರ, ಮುಂಬೈನ ಬಾಸ್ಟಿಯನ್‌ನಲ್ಲಿ ಸ್ಟಾರ್-ಸ್ಟಡ್ ಆರತಕ್ಷತಾ ಕಾರ್ಯಕ್ರಮ ಆಯೋಜಿಸಿದ್ದರು. ಬಾಲಿವುಡ್‌ನ ಸಲ್ಮಾನ್ ಖಾನ್, ಕಾಜೋಲ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮಿಲನಾ, ಹರ್ಷಿಕಾ, ಪ್ರಣಿತಾ TO ಅನುಷ್ಕಾ ಕೊಹ್ಲಿ, ದೀಪಿಕಾ ಪಡುಕೋಣೆ: 2024ರಲ್ಲಿ ಪೋಷಕರಾದ ಸೆಲೆಬ್ರಿಟಿ ಕಪಲ್ಸ್
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್: ಭಾರತದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿ ಪುತ್ರ ಅನಂತ್ ಅಂಬಾನಿ ಅವರು ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ಜುಲೈ 13ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ವಿವಾಹವಾದರು. "ವರ್ಷದ ಅದ್ಧೂರಿ ಮದುವೆ" ಎಂದು ವ್ಯಾಪಕವಾಗಿ ಸದ್ದು ಮಾಡಿದ ಈ ಸಮಾರಂಭಕ್ಕೆ ಬಾಲಿವುಡ್ ತಾರೆಯರು ಸೇರಿ ವಿಶ್ವದ ವಿವಿಧ ಕ್ಷೇತ್ರದ ಗಣ್ಯರು ಸಾಕ್ಷಿಯಾಗಿದ್ದರು.
ಇದನ್ನೂ ಓದಿ: ಮಾರ್ಟಿನ್ TO ಕಂಗುವ: 2024ರಲ್ಲಿ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ ಬಿಗ್ ಬಜೆಟ್ ಸಿನಿಮಾಗಳು
ಅದಿತಿ ರಾವ್ ಹೈದರಿ-ಸಿದ್ಧಾರ್ಥ್: ಸೆಪ್ಟೆಂಬರ್ನಲ್ಲಿ ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ್ ವೈವಾಹಿಕ ಜೀವನ ಆರಂಭಿಸಿದರು. ದಕ್ಷಿಣ ಭಾರತ ಶೈಲಿಯ ವಿವಾಹವು ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ನಂತರ, ಉತ್ತರ ಭಾರತದ ಹಿಂದೂ ಪ್ರಕಾರದ ಸಮಾರಂಭವು ಉದಯಪುರದಲ್ಲಿ ನಡೆಯಿತು. ಅವರ ವಿವಾಹದ ಫೋಟೋಗಳು ವ್ಯಾಪಕ ಮೆಚ್ಚುಗೆ ಸ್ವೀಕರಿಸಿತು.
ಹಿಮಾಂಶ್ ಕೊಹ್ಲಿ-ವಿನ್ನಿ ಕೊಹ್ಲಿ: ಯಾರಿಯಾನ್ ನಟ ಹಿಮಾಂಶ್ ಕೊಹ್ಲಿ ನವೆಂಬರ್ 12ರಂದು ತಮ್ಮ ಸಂಗಾತಿ ವಿನಿ ಕೊಹ್ಲಿಯನ್ನು ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದರು. ಆತ್ಮೀಯ ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗವಹಿಸಿದ್ದ ಈ ಸಮಾರಂಭ ಫ್ಯಾನ್ಸ್ ಗಮನ ಸೆಳೆದಿತ್ತು.
ಇದನ್ನೂ ಓದಿ: ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್ವುಡ್ ಸೂಪರ್ಸ್ಟಾರ್ಗಳಿವರು