ನವದೆಹಲಿ: ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ಇಂದು ಸಂಸತ್ತಿನಲ್ಲಿ 2025-26 ರ ಕೇಂದ್ರ ಬಜೆಟ್ ಮಂಡಿಸಲು ಅಣಿಯಾಗಿದ್ದಾರೆ. ಈ ಹಿಂದಿನ ಸರ್ಕಾರದ ನೀತಿಗಳನ್ನೇ ಮುಂದುವರಿಸುವ ನಿರೀಕ್ಷೆ ಇದೆ. ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
2024-25 ರ ಆರ್ಥಿಕ ಸಮೀಕ್ಷೆಯ ಪ್ರಕಾರ ಸಮಾನ ಮತ್ತು ಅಂತರ್ಗತ ಅಭಿವೃದ್ಧಿ ಖಚಿತಪಡಿಸಿಕೊಳ್ಳಲು ಗ್ರಾಮೀಣ ಪ್ರದೇಶಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಸರ್ಕಾರವು ಆದ್ಯತೆ ನೀಡಿದೆ. ಇದೇ ನೀತಿಯನ್ನು ಇಂದಿನ ಬಜೆಟ್ ನಲ್ಲಿ ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ.
ಕಿರುಬಂಡವಾಳ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು ಮತ್ತು ಇತರ ಮಧ್ಯವರ್ತಿಗಳ ಮೂಲಕ ಗ್ರಾಮೀಣ ಕುಟುಂಬಗಳು ಮತ್ತು ಸಣ್ಣ ವ್ಯಾಪಾರಿಗಳು ಸುಲಭವಾಗಿ ಸಾಲ ಪಡೆಯುವುದರೊಂದಿಗೆ ಹಣಕಾಸಿನ ಸಬಲತೆಯನ್ನು ಪಡೆಯಲು ವೇದಿಕೆ ಒದಗಿಸಲಾಗಿದೆ ಎಂಬುದನ್ನು ಈ ಆರ್ಥಿಕ ಸಮೀಕ್ಷೆ ಎತ್ತಿ ತೋರಿಸಿದೆ.
ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ಸಾಧ್ಯತೆ: ಮೂಲಸೌಕರ್ಯ, ಗ್ರಾಮೀಣ ವಸತಿ, ನೈರ್ಮಲ್ಯ, ಶುದ್ಧ ಇಂಧನ, ಸಾಮಾಜಿಕ ರಕ್ಷಣೆ ಮತ್ತು ಸಂಪರ್ಕಗಳ ಬಗ್ಗೆ ಮುಖ್ಯವಾಗಿ ವಿವರಿಸುತ್ತದೆ, ಜೊತೆಗೆ ಗ್ರಾಮೀಣ ಜೀವನೋಪಾಯ ಉತ್ತೇಜಿಸುವ ಪ್ರಯತ್ನಗಳನ್ನು ಮಾಡಿರುವ ಬಗ್ಗೆ ಹೆಚ್ಚಿನ ಒತ್ತು ನೀಡಿರುವುದನ್ನು ತೋರಿಸುತ್ತಿದೆ.
ಕೃಷಿ ಗ್ರಾಮೀಣಾಭಿವೃದ್ಧಿಗೂ ಬೆಳಕು ಚೆಲ್ಲುವ ಪ್ರಯತ್ನ: ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಹೆಚ್ಚಿನ ನೀರಿಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಬಡತನ ಹೋಗಲಾಡಿಸಲು ಇನ್ನಷ್ಟು ಜನ ಕಲ್ಯಾಣ ನೀತಿಗಳನ್ನು ಜಾರಿಗೆ ತರುವ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ.
2025-26ರ ಬಜೆಟ್‌ನಲ್ಲಿ ಬೆಳವಣಿಗೆ ಉತ್ತೇಜಿಸಲು ಮತ್ತು ಆರ್ಥಿಕತೆಯಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ದೊಡ್ಡ- ಟಿಕೆಟ್ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಸರ್ಕಾರದ ನೀತಿಯನ್ನು ಹಣಕಾಸು ಸಚಿವರು ಮುಂದುವರಿಸುವ ನಿರೀಕ್ಷೆಯಿದೆ.
ಆದಾಯ ತೆರಿಗೆ ಕಡಿತದ ನಿರೀಕ್ಷೆ: ಆದಾಯ ತೆರಿಗೆ ದರಗಳಲ್ಲಿನ ಕಡಿತ ಮಾಡುವ ಭರವಸೆಯನ್ನು ಭಾರತದ ಮಧ್ಯಮ ವರ್ಗ ಇಟ್ಟುಕೊಂಡಿದೆ. ಆದಾಯ ತೆರಿಗೆ ಹೊರೆಯನ್ನು ಕಡಿಮೆ ಮಾಡಿದರೆ, ಜನರ ಕೈಯಲ್ಲಿ ಹೆಚ್ಚಿನ ಆದಾಯ ಶೇಖರಣೆ ಆಗುವುದರಿಂದ ಹಣದ ಹರಿವನ್ನು ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆ ವೇಗವನ್ನು ಹೆಚ್ಚಿಸಲು ಅನುಕೂಲ ಆಗಲಿದೆ ಎಂದು ಹೇಳಲಾಗುತ್ತಿದೆ.
ಜಾಗತಿಕ ಅನಿಶ್ಚಿತತೆಗಳ ನಡುವೆ ಭಾರತದ ದೇಶೀಯ ಆರ್ಥಿಕತೆಯು ಸ್ಥಿರವಾಗಿ ಮುಂದುವರೆಯಲು ಖಾಸಗಿ ಬಳಕೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.