ಬೆಂಗಳೂರು:ರಾಜ್ಯದಲ್ಲಿ ಬಿಜೆಪಿಗೆ ಅತ್ಯಂತ ಸುರಕ್ಷಿತ ಹಾಗೂ ಭದ್ರಕೋಟೆ ಎಂದರೆ ಅದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ. ಹಾಗಾಗಿ ಈ ಕ್ಷೇತ್ರವನ್ನು ಬಿಜೆಪಿ ಈ ಬಾರಿ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ಚುನಾವಣಾಪೂರ್ವ ಮೈತ್ರಿ ಕಾರಣದಿಂದಾಗಿ ಈ ಬಾರಿ ಇಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ. ಆದರೆ ಕಾಂಗ್ರೆಸ್ಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಈವರೆಗೆ ನಡೆದ ಚುನಾವಣೆಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಈ ಕ್ಷೇತ್ರ ಕಾಂಗ್ರೆಸ್ ಪಾಲಾಗಿದ್ದು ಬಿಟ್ಟರೆ ಎರಡನೇ ಬಾರಿಗೆ ಅವಕಾಶ ಸಿಕ್ಕಿಲ್ಲ. ಇದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಅಷ್ಟಾಗಿ ಇಲ್ಲ.
1977ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿ ಚುನಾವಣೆ ನಡೆಯಿತು. ಮೊದಲ ಮೂರು ಚುನಾವಣೆಯಲ್ಲಿಯೂ ಜನತಾ ಪಕ್ಷ ಗೆದ್ದರೆ 1989ರಲ್ಲಿ ಮೊದಲ ಬಾರಿ ಕಾಂಗ್ರೆಸ್ಗೆ ವಿಜಯಲಕ್ಷ್ಮಿ ಒಲಿದಿದ್ದಳು. ಆರ್.ಗುಂಡೂರಾವ್ ಗೆದ್ದಿದ್ದರು. ಅದನ್ನು ಬಿಟ್ಟರೆ ನಂತರ ನಡೆದ 1991ರ ಚುನಾವಣೆಯಲ್ಲಿ ಬಿಜೆಪಿಯಿಂದ ಕೆ.ವೆಂಕಟಗಿರಿ ಗೌಡ ಚೊಚ್ಚಲ ಗೆಲುವು ದಾಖಲಿಸಿ ಬಿಜೆಪಿಯ ಖಾತೆ ತೆರೆದರು. ನಂತರ 1996ರಿಂದ 2014ರವರೆಗೆ ಸತತವಾಗಿ ಆರು ಬಾರಿ ಬಿಜೆಪಿಯಿಂದ ಅನಂತ್ ಕುಮಾರ್ ಗೆದ್ದು ಬಂದರು. ಅವರ ನಿಧನದಿಂದಾಗಿ 2019ರಲ್ಲಿ ತೇಜಸ್ವಿ ಸೂರ್ಯಗೆ ಅವಕಾಶ ಸಿಕ್ಕಿದ್ದು ಅವರೂ ಗೆದ್ದಿದ್ದಾರೆ. ಹಾಗಾಗಿ ಸತತವಾಗಿ 8 ಬಾರಿಯಿಂದ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿಯೇ ಇದೆ.
ಬಿಜೆಪಿಯ ಭದ್ರಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್ನಿಂದ ಪ್ರಬಲ ಎದುರಾಳಿ ಕಣಕ್ಕೆ ಇಳಿಯುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ತನ್ನ ಪ್ರಯೋಗ ಶಾಲೆಯ ಭಾಗವಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ. ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವ ಸಂಪುಟ ಸದಸ್ಯರಾಗಿರುವ ಕೆಲವರನ್ನು ಲೋಕಸಭೆಗೆ ಕಳುಹಿಸಬೇಕು ಎನ್ನುವ ಚಿಂತನೆ ಇದೆ. ಅದರ ಭಾಗವಾಗಿ ಪ್ರಮುಖ ನಾಯಕರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದು ಎನ್ನಲಾಗಿದೆ.
ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಮ್ಮತಿ ಸಿಕ್ಕಿಲ್ಲ. ಹಾಲಿ ಸಂಸದರಿಗೆ ಟಿಕೆಟ್ ಕೊಡುವ ನಿರ್ಧಾರವಾದಲ್ಲಿ ತೇಜಸ್ವಿ ಸೂರ್ಯ ಸ್ಪರ್ಧೆಗೆ ಅಡ್ಡಿ ಇಲ್ಲ. ಇನ್ನು ಅಭ್ಯರ್ಥಿ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದರೂ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಇಲ್ಲ. ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಕಳೆದ ಬಾರಿ ಟಿಕೆಟ್ ಕೈತಪ್ಪಿದರೂ ಬಂಡಾಯವೇಳದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಹಾಗಾಗಿ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಹೊರತುಪಡಿಸಿ ಇನ್ನು ಬೇರೆ ಯಾವುದೇ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಇಲ್ಲ.
ಆದರೆ ವರಿಷ್ಠರು ಪ್ರಯೋಗಕ್ಕೆ ಮುಂದಾಗುವ ನಿರ್ಧಾರಕ್ಕೆ ಬಂದರೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಕೌಶಲಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಜೈಶಂಕರ್ ಬೆಂಗಳೂರಿಗೆ ಬಂದಾಗಲೆಲ್ಲಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ, ಫುಡ್ ಸ್ಟ್ರೀಟ್ಗೆ ಭೇಟಿ ನೀಡಿ ಫುಟ್ ಪಾತ್ನಲ್ಲಿ ತಿಂಡಿ ಸವಿದು ಗಮನ ಸೆಳೆಯುವ ಮೂಲಕ ಕ್ಷೇತ್ರದ ಜೊತೆ ಹೆಚ್ಚಿನ ನಂಟು ಇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು ರಾಜೀವ್ ಚಂದ್ರಶೇಖರ್ಗೆ ರಾಜ್ಯಸಭಾ ಟಿಕೆಟ್ ನೀಡಿಲ್ಲ. ಹಾಗಾಗಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಜೈಶಂಕರ್ ಸ್ಪರ್ಧೆ ಮಾಡಿದರೆ ರಾಜೀವ್ ಚಂದ್ರಶೇಖರ್ ಅವರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎನ್ನುವ ಚಿಂತನೆ ನಡೆಸಲಾಗಿದೆ. ಭದ್ರಕೋಟೆಯಾಗಿರುವ ಕಾರಣ ಇಲ್ಲಿಂದ ಕೇಂದ್ರದ ನಾಯಕರನ್ನು ಗೆಲ್ಲಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರಿದ್ದಾರೆ. ಹಾಗಾಗಿ ಬಿಜೆಪಿಯಿಂದ ಹಾಲಿ ಸಂಸದ ತೇಜಸ್ವಿಸೂರ್ಯ, ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ಪ್ರಮುಖ ಆಕಾಂಕ್ಷಿಗಳಾಗಿದ್ದರೂ ಕೇಂದ್ರ ಸಚಿವರಾದ ಜೈಶಂಕರ್ ಮತ್ತು ರಾಜೀವ್ ಚಂದ್ರಶೇಖರ್ ಸೇರಿ ನಾಲ್ವರು ಆಕಾಂಕ್ಷಿಗಳಿದ್ದಾರೆ.