ಬೆಂಗಳೂರು:ಗೆಳತಿಯನ್ನು ಪಾರ್ಟಿಗೆ ಎಂದು ಕರೆದು ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರವೆಸಗಿದ ಆರೋಪದಡಿ ಇಬ್ಬರು ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹರೀಶ್ ಹಾಗೂ ಹೇಮಂತ್ ಬಂಧಿತ ಆರೋಪಿಗಳು. ಇವರಿಬ್ಬರೂ ಪರಸ್ಪರ ಗರ್ಲ್ ಫ್ರೆಂಡ್ಸ್ ಅದಲು ಬದಲು ಮಾಡಿಕೊಂಡು ಸಹಕರಿಸುವಂತೆ ಒತ್ತಾಯಿಸಿದ್ದು, ಸಹಕರಿಸದಿದ್ದಾಗ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿಯೊಬ್ಬಳು ನೀಡಿದ್ದ ದೂರಿನ ಅನ್ವಯ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಹರೀಶ್, ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಬೆಂಗಳೂರು ಹೊರವಲಯದಲ್ಲಿ ಪಾರ್ಟಿಗೆಂದು ಕರೆದೊಯ್ದು ಸ್ನೇಹಿತನೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದ. ಆಕೆ ಒಪ್ಪದಿದ್ದಾಗ ಆರೋಪಿಗಳು ಅತ್ಯಾಚಾರವೆಸಗಿದ್ದಾರೆಂದು ದೂರು ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿಯರ ಫೋಟೋಗಳು ಪತ್ತೆ: 'ಸ್ವಿಂಗರ್ಸ್' ಎನ್ನುವ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿದ್ದ ಆರೋಪಿಗಳು, 'ಪಾರ್ಟಿ ಆಯೋಜಿಸಿ ಗೆಳತಿಯರೊಂದಿಗೆ ತೆರಳುತ್ತಿದ್ದರು. ಬಳಿಕ ಪಾರ್ಟಿಯಲ್ಲಿ ಪರಸ್ಪರ ಗೆಳತಿಯರನ್ನು ಬದಲಿಸಿಕೊಂಡು, ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದರು. ಆರೋಪಿಗಳ ಮೊಬೈಲ್ ಫೋನ್‌ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೋಗಳು, ಏಕಾಂತದ ವಿಡಿಯೋಗಳು ಪತ್ತೆಯಾಗಿವೆ. ಅದೇ ವಿಡಿಯೋ, ಫೋಟೋಗಳನ್ನ ತೋರಿಸಿ ಆರೋಪಿಗಳು ಯುವತಿಯರಿಗೆ ಬೆದರಿಸುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.
ಘಟನೆಯಿಂದ ಬೇಸತ್ತ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು, ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪ್ರತಿಷ್ಠಿತ ಐಐಎಂಬಿ ಪ್ರಾಧ್ಯಾಪಕರಿಗೆ ಜಾತಿ ನಿಂದನೆ ಆರೋಪ: 8 ಮಂದಿ ವಿರುದ್ಧ ಎಫ್ಐಆರ್