ಮೈಸೂರು: ಕಾಡುಪ್ರಾಣಿಗಳು ಹಾಗೂ ಮಾನವನ ಸಂಘರ್ಷ ಇವತ್ತಿನದ್ದಲ್ಲ. ಚರಿತ್ರೆ ಹಾಗೂ ಇತಿಹಾಸ ತೆರೆದು ನೋಡಿದರೆ ಇದು ಗೊತ್ತಾಗುತ್ತದೆ. ಆದರೆ, ಇತ್ತೀಚೆಗೆ ಕಾಡುಪ್ರಾಣಿಗಳು ನಾಡಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸುದ್ದಿಗಳು ನಮಗೆ ಬಹುಬೇಗ ತಿಳಿಯುತ್ತದೆ. ಅದಕ್ಕೆ ಬಲವಾದ ಕಾರಣವೂ ಇದೆ ಎನ್ನುತ್ತಾರೆ ಖ್ಯಾತ ವನ್ಯಜೀವಿ ಕೃಪಾಕರ್.
ಕಾಡುಪ್ರದೇಶ ನಗರವಾಗಿ ಪರಿವರ್ತನೆಯಾಗುತ್ತಿದೆ. ಈ ಹಿಂದೆ ಕಾಡು ಎಷ್ಟಿತ್ತು, ಈಗ ಎಷ್ಟಿದೆ ಎಂಬುದು ಗೊತ್ತಿರುವುದೇ. ಕಾಡುಪ್ರಾಣಿಗಳು ತಮ್ಮ ಜಾಗದಲ್ಲಿ ಆಹಾರ ಹುಡುಕಿಕೊಂಡು ಬಂದಾಗ ಈ ರೀತಿಯ ಸಂಘರ್ಷಗಳು ನಡೆಯುತ್ತವೆ. ಇದಕ್ಕೆ ಪರಿಹಾರ ಕಷ್ಟ. ಗ್ರಾಮಕ್ಕೆ ಆನೆ ಬಂತು, ಚಿರತೆ ಬಂತು ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹೆಚ್ಚು ಬರುತ್ತಿರುವುದರಿಂದ ಹಾಗೂ ಕಾಡುಪ್ರಾಣಿ ಹಾಗೂ ಮಾನವನ ಸಂಘರ್ಷ ಕುರಿತು ಮಾಧ್ಯಮಗಳು ಹೆಚ್ಚು ಕೇಂದ್ರೀಕರಿಸುತ್ತಿರುವುದರಿಂದ ಇದು ಹೆಚ್ಚಾಗಿಯೇ ಕೇಳಿಬರುತ್ತಿದೆ. ಅದು ಸತ್ಯ ಕೂಡ ಹೌದು ಎಂದರು.
ಮತ್ತೋರ್ವ ವನ್ಯಜೀವಿ ತಜ್ಞ ಸೇನಾನಿ ಮಾತನಾಡಿ, ಯಾವುದೇ ವನ್ಯಜೀವಿಯ ಸಂಕುಲ ವಿಸ್ತರಿಸಬೇಕು. ಇದು ಪ್ರಾಣಿಗಳ ಸಹಜ ಸ್ವಭಾವ. ಆದರೆ, ಮನುಷ್ಯ ಅರಣ್ಯಕ್ಕೆ ಗಡಿ ನಿರ್ಮಿಸಿ ಇಷ್ಟೇ ನಿಮ್ಮ ಸ್ಥಳವೆಂದು ಪ್ರಾಣಿಗಳಿಗೆ ಕಾಡಿನ ಅಳತೆಯನ್ನು ಕಡಿಮೆ ಮಾಡುತ್ತಿದ್ದಾನೆ. ನಗರಾಭಿವೃದ್ಧಿ ಹೆಸರಿನಲ್ಲಿ ದಿನದಿಂದ ದಿನಕ್ಕೆ ನಾಡು ಕಾಡಿನತ್ತ ಸಾಗುತ್ತಿದೆ. ಕಾಡುಪ್ರಾಣಿಗಳ ಸಂತತಿ ಬೆಳೆಯಲು ಕಾಡಿನಲ್ಲಿ ಬೇರೆ ಜಾಗಗಳು ಬೇಕು. ಆದರೆ, ಈಗ ಅದು ಇಲ್ಲ. ಹೀಗಾಗಿ ಅವುಗಳು ನಾಡಿಗೆ ಬರುತ್ತವೆ ಎಂದು ಹೇಳಿದರು.
ಅದೇ ರೀತಿ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಇದೆ ಎಂಬ ಸುದ್ದಿ ಬಂದಿದೆ. ಆದರೆ, ಆ ಪ್ರದೇಶ ಈ ಹಿಂದೆ ಹೆಚ್ಚಾಗಿ ಚಿರತೆಗಳ ಸಂತತಿ ಇದ್ದ ತಾಣವಾಗಿತ್ತು. ಇನ್ಫೋಸಿಸ್ ಪ್ರದೇಶ ಆಗ ಕುರುಚಲು ಕಾಡು ಆಗಿದ್ದರಿಂದ ಅಲ್ಲಿ ಹೆಚ್ಚು ಚಿರತೆಗಳಿದ್ದವು. ಈಗ ನಾವು ಬೇಲಿ ಹಾಕಿಕೊಂಡಿದ್ದೇವೆ. ಆದರೆ, ಚಿರತೆಗಳಿಗೆ ಯಾವುದೇ ಬೇಲಿ ಹಾಕಲು ಸಾಧ್ಯವಿಲ್ಲ. ನಾವು ನಗರೀಕರಣದಿಂದ ಕಾಡುಗಳನ್ನು ನಾಶ ಮಾಡುತ್ತಾ ಹೋಗುತ್ತಿರುವುದರಿಂದ ಕಾಡುಪ್ರಾಣಿ ಮತ್ತು ಮನುಷ್ಯನ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ವಿವರಿಸಿದರು.
ಇದರ ಜೊತೆಗೆ, ಕಾಡಿನಲ್ಲಿ ಅನೇಕ ಅನಾವಶ್ಯಕ ಸಸ್ಯಗಳು ಸಿಕ್ಕಾಪಟ್ಟೆ ಪ್ರಮಾಣದಲ್ಲಿ ಆವರಿಸಿಕೊಂಡಿವೆ. ಅದು ವನ್ಯಜೀವಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಗಮನಿಸಬೇಕು. ಕಾಡುಪ್ರಾಣಿಗಳು ಮತ್ತು ಮಾನವನ ಸಂಘರ್ಷಕ್ಕೆ ಯಾವುದೇ ಪರಿಹಾರವಿಲ್ಲ. ಆದರೆ, ಅದನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಕಾಡುಪ್ರಾಣಿಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬಿಟ್ಟರೆ ಅವುಗಳು ಮತ್ತೆ ಅದೇ ಪ್ರದೇಶಕ್ಕೆ ಬರುತ್ತವೆ. ಈ ವಿಧಾನವನ್ನು ಕಳೆದ 30 ವರ್ಷದ ಹಿಂದೆಯೇ ತಜ್ಞರೊಬ್ಬರು ಅಧ್ಯಯನ ಮಾಡಿ ತಿಳಿಹೇಳಿದ್ದಾರೆ. ಆದರೆ, ಈಗಲೂ ಕೂಡ ನಮ್ಮಲ್ಲಿ ಕಾಲರ್ ಅಳವಡಿಸಿ ಪ್ರಾಣಿಗಳನ್ನು ಬೇರೆ ಬೇರೆ ಕಡೆಗಳಿಗೆ ಬಿಡುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ಪ್ರಾಣಿಗಳು ಮತ್ತು ಮಾನವ ನಡುವಿನ ಸಂಘರ್ಷ ಆಗುತ್ತಲೇ ಇರುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ತಜ್ಞರಾದ ಸೇನಾನಿ ತಿಳಿಸಿದರು.
ಇದನ್ನೂ ಓದಿ: ಮಾನವ-ಪ್ರಾಣಿ ಸಂಘರ್ಷ: ಕೇರಳದಲ್ಲಿ ಸಾವಿನ ಸಂಖ್ಯೆ ಗಮನಾರ್ಹ ಇಳಿಕೆ- ಅರಣ್ಯ ಇಲಾಖೆ ಮಾಹಿತಿ - ಕಾಡು ಪ್ರಾಣಿಗಳ ದಾಳಿ
ಅಲ್ಲದೇ ಮನುಷ್ಯ ಭೂಮಿಯ ಆಕಾರವನ್ನು ಕಾಲಕ್ರಮೇಣ ಬದಲಾವಣೆ ಮಾಡುತ್ತಾ ಬಂದಿದ್ದಾನೆ. ಇದು ಕೆಲವು ಕಾಡುಪ್ರಾಣಿಗಳಿಗೆ ಅನುಕೂಲವಾದರೆ ಇನ್ನು ಕೆಲವು ಪ್ರಾಣಿಗಳಿಗೆ ಅನಾನುಕೂಲ. ಅಲ್ಲದೇ ಕಾಡಿನ ಭೂಮಿಯೂ ವ್ಯವಸಾಯಕ್ಕೆ ಬಳಕೆ ಅಗುತ್ತಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಕಬ್ಬಿನ ಗದ್ದೆಗಳಲ್ಲಿ ಚಿರತೆಗಳು ಕಾಣುವುದು ಸರ್ವೇಸಾಮಾನ್ಯ. ಒಂದು ವೇಳೆ ಚಿರತೆ ಮರಿಗಳು ಕಬ್ಬಿನ ಗದ್ದೆಯಲ್ಲೇ ಮರಿ ಹಾಕಿದರೆ ಆ ಮರಿಗಳಿಗೆ ಕಾಡಿನ ಬಗ್ಗೆ ತಿಳಿಯಲು ಹೇಗೆ ಸಾಧ್ಯ? ಕಾಡಿನಲ್ಲಿ 80 ಲಕ್ಷ ಪ್ರಭೇದದ ಪ್ರಾಣಿಗಳಿವೆ. ಅವುಗಳಿಗೆ ಕಾಡಿನ ಅವಶ್ಯಕತೆ ಇದ್ದೇ ಇರುತ್ತದೆ. ಮನುಷ್ಯರಾದ ನಾವು ಅದರ ಬಗ್ಗೆ ಯೋಚನೆ ಮಾಡಬೇಕು. ಪ್ರತೀ ಕಾಡಿನ ಪ್ರಾಣಿಯೂ ಅದರದ್ದೇ ಆದ ಸ್ಥಾನವನ್ನು ಕಾಡಿನಲ್ಲಿ ಗುರುತು ಮಾಡಿಕೊಂಡಿರುತ್ತದೆ. ಆದರೆ, ನಾವು ಅವುಗಳನ್ನು ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಬಿಡುತ್ತೇವೆ. ಮತ್ತೊಂದು ಪ್ರದೇಶಕ್ಕೆ ಬಿಟ್ಟಾಗ ಅವುಗಳು ಗಾಬರಿಗೊಂಡು ಬೇರೆಡೆ ಚಲಿಸಿ ಮಾನವ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದು ಒಂದು ಅಧ್ಯಯನದ ವರದಿಯಲ್ಲೇ ತಿಳಿದು ಬಂದಿದೆ ಎಂದು ಸೇನಾನಿ ಮಾಹಿತಿ ನೀಡಿದರು.
ಚಿರತೆ ಮತ್ತು ಹುಲಿ ಮರಿಗಳು ಬೆಳೆದ ಎರಡು ವರ್ಷಗಳ ನಂತರ ತಾಯಿ ಜೊತೆಗಿರಲು ಸಾಧ್ಯವಾಗುವುದಿಲ್ಲ. ಅವುಗಳು ಕೂಡ ಹೊಸ ಜಾಗ ಹುಡುಕಿಕೊಂಡು ಹೋಗಲೇಬೇಕು. ಹೀಗಾಗಿ ಪ್ರಾಣಿ ಮತ್ತು ಮಾನವ ನಡುವಿನ ಸಂಘರ್ಷ ತಡೆಯಲು ಸಾಧ್ಯವಿಲ್ಲ. ಮನುಷ್ಯ ಕಾಡಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದರೆ ಮಾತ್ರ ಪ್ರಾಣಿ ಮತ್ತು ಮಾನವ ನಡುವಿನ ಸಂಘರ್ಷ ಕಡಿಮೆ ಮಾಡಬಹುದು ಎಂದರು.