ಕರ್ನಾಟಕ

karnataka

ETV Bharat / state

ತೂಗುಯ್ಯಾಲೆಯಲ್ಲಿ ಡಿಸೆಂಬರ್ 31ರಿಂದ ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರ - TRANSPORT STAFF STRIKE

ಡಿಸೆಂಬರ್ 31 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.

Transport staff
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಹಾಗೂ ಇತರ ಮುಖಂಡರು (ETV Bharat)

By ETV Bharat Karnataka Team

Published : Dec 22, 2024, 5:16 PM IST

ಬೆಂಗಳೂರು :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ಘೋಷಣೆ ಮಾಡಿದೆ. ಇದಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ ವಿರೋಧವನ್ನು ವ್ಯಕ್ತಪಡಿಸಿ, ಬಂದ್​ಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅನಿರ್ದಿಷ್ಟಾವಧಿ ಮುಷ್ಕರದ ಪರ, ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್‌ ಫೆಡರೇಷನ್ ಪರ ಕಾರ್ಮಿಕ ಮುಖಂಡ ಹೆಚ್. ವಿ ಅನಂತಸುಬ್ಬರಾವ್ ನಿಂತಿದ್ದರೆ, ಇನ್ನೊಂದೆಡೆ ಅಷ್ಟೇ ದೊಡ್ಡ ಸಂಘಟನೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದ ಪರವಾಗಿ ಸಾರಿಗೆ ಮುಖಂಡ ಆರ್. ಚಂದ್ರಶೇಖರ್ ಬಂದ್​ಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಜಂಟಿ ಕ್ರಿಯಾ ಸಮಿತಿಯಿಂದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನ
ಚಲೋ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿಸೆಂಬರ್ 31 ರಿಂದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ನೋಟಿಸ್​ ಕೊಟ್ಟಿದ್ದಾರೆ. ಈ ಸಂಬಂಧ ಇಂದು ಪತ್ರಿಕಾಗೋಷ್ಠಿ ನಡೆಸಿದ ಸಾರಿಗೆ ಮುಖಂಡ ಆರ್. ಚಂದ್ರಶೇಖರ್, ಯಾವುದೇ ಕಾರಣಕ್ಕೂ ಬಂದ್​ಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

''ಮುಷ್ಕರಕ್ಕೆ ಕರೆ ಕೊಡುವ ಮೊದಲು ಜಂಟಿ ಕ್ರಿಯಾ ಸಮಿತಿ ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ಯಾವುದೇ ಅಸೋಸಿಯೇಷನ್​ಗಳಿಗೆ ಮಾಹಿತಿಯನ್ನು ನೀಡಿಲ್ಲ ಹಾಗೂ ಅದರ ಬೇಡಿಕೆಯು 4 ವರ್ಷಕ್ಕೆ ಒಮ್ಮೆ ನಡೆಯುವ ಚೌಕಾಸಿ ವೇತನ ಪರಿಷ್ಕರಣೆಗೆ ಸಂಬಂಧಿಸಿದ್ದಾಗಿದೆ. 7ನೇ ವೇತನ ಆಯೋಗದ ಮಾದರಿಯ ಅನುಷ್ಠಾನದ ಬೇಡಿಕೆಗೆ ವಿರುದ್ಧವಾಗಿದೆ'' ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.

ಅನಿರ್ಧಿಷ್ಟಾವಧಿ ಮುಷ್ಕರದ ಬೇಡಿಕೆಗಳು :

2020 ರ ಜನವರಿ 1 ರಿಂದ 38 ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು.

ಜನವರಿ 2024 ರಿಂದ ಹೊಸ ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆ ಇತ್ಯರ್ಥಪಡಿಸಬೇಕು.

ನಿವೃತ್ತರಾದ ನೌಕರರಿಗೆ 2024ರ ಜೂನ್ 27ರ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.

ಒಕ್ಕೂಟದ ಬೇಡಿಕೆಗಳು :

ಚುನಾವಣಾ ಪೂರ್ವ ಸರ್ಕಾರ ನೀಡಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು.

ಜನವರಿ 2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡಬೇಕು.

ಸಾರಿಗೆ ಸಂಸ್ಥೆಗಳಲ್ಲಿ ಮಾನ್ಯತೆಗಾಗಿ ತುರ್ತಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು.

ಕೆಎಸ್​ಆರ್​ಟಿಸಿಯಲ್ಲಿ ಜಾರಿಗೆ ತರುತ್ತಿರುವ ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯನ್ನು ಏಕಕಾಲದಲ್ಲಿ 4 ನಿಗಮಗಳಲ್ಲಿ ಜಾರಿಗೆ ತರಬೇಕು.

ಸಂಸ್ಥೆಯಲ್ಲಿ ವಿದ್ಯುತ್‌ ಚಾಲಿತ ಬಸ್ಸುಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನು ಕೈಬಿಟ್ಟು, ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿ ನಿರ್ವಹಣೆ ಮಾಡಬೇಕು. ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿ ನೇಮಕಾತಿಯನ್ನು ಕೈಬಿಡಬೇಕು.

ಇದನ್ನೂ ಓದಿ :ಶಕ್ತಿ ಯೋಜನೆಯಡಿ ರಸ್ತೆ ಸಾರಿಗೆ ನಿಗಮಗಳಿಗೆ ₹6,543 ಕೋಟಿ ಬಿಡುಗಡೆ - SHAKTI SCHEME GRANT

ABOUT THE AUTHOR

...view details