ಬೆಂಗಳೂರು: ''ವಿಜಯೇಂದ್ರನನ್ನು ಬದಲಾವಣೆ ಮಾಡಬಹುದು ಎಂಬ ಭ್ರಮೆಯಲ್ಲಿ ಇರುವವರಿಗೆ ಒಳ್ಳೆಯ ಸುದ್ದಿ ಸಿಗಲು ಸಾಧ್ಯವಿಲ್ಲ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ''ನಾನು ಮಾಡುತ್ತಿರುವ ಪ್ರಯತ್ನದ ಬಗ್ಗೆ ಪಕ್ಷದ ವರಿಷ್ಠರಿಗೆ ಸಮಾಧಾನ ಇದೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಯಡಿಯೂರಪ್ಪ ಅವರ ಮಗನಾಗಿರುವುದೇ ಅಪರಾಧ ಎಂಬ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದು, ಬರುವಂಥ ದಿನಗಳಲ್ಲಿ ಉತ್ತರ ಕೊಡುತ್ತೇನೆ'' ಎಂದು ತಿಳಿಸಿದರು.
''ಯತ್ನಾಳ ಅವರನ್ನು ಉಚ್ಚಾಟನೆ ಮಾಡುವಂತೆ ದೆಹಲಿಗೆ ತೆರಳಿ ದೂರು ಕೊಡುತ್ತಿಲ್ಲ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ದಿನನಿತ್ಯ ಹಾದಿಯಲ್ಲಿ ಬೀದಿಯಲ್ಲಿ ಮಾತನಾಡುತ್ತಿದ್ದು, ಪತ್ರಿಕೆಗಳಲ್ಲೂ ಬರುತ್ತಿದೆ. ಅವರದೇ ಆದ ರೀತಿಯಲ್ಲಿ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ'' ಎಂದ ಅವರು, ಇದೇ ರೀತಿ ಮುಂದುವರೆದರೆ ಹೇಗೆ ಎಂದು ಕೇಳಿದಾಗ, ''ಬಹಳ ದಿನ ಮುಂದುವರೆಯುತ್ತದೆ ಎಂದು ನನಗೇನೂ ಅನಿಸುತ್ತಿಲ್ಲ'' ಎಂದು ಉತ್ತರಿಸಿದರು.