ಬೆಂಗಳೂರು : ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಅವರ ಆಯ್ಕೆ ಅನೂರ್ಜಿತವೆಂದು ಘೋಷಣೆ ಮಾಡಿ ತಮ್ಮನ್ನು ಶಾಸಕರನ್ನಾಗಿ ಪ್ರಕಟಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ಕೆ. ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸುವಂತೆ ಹ್ಯಾರಿಸ್ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಕೆ. ಶಿವಕುಮಾರ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಹೈಕೋರ್ಟ್ ಈ ಆದೇಶದಿಂದಾಗಿ ಶಿವಕುಮಾರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಮುಂದುವರೆಯಲಿದೆ.
ಅಲ್ಲದೆ, ಚುನಾವಣಾ ತಕರಾರು ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಹ್ಯಾರಿಸ್ ಆಯ್ಕೆ ಅನೂರ್ಜಿತಗೊಳಿಸಬೇಕು ಮತ್ತು ತಮ್ಮನ್ನೇ ಶಾಸಕರು ಎಂದು ಘೋಷಣೆ ಮಾಡಬೇಕು ಕೋರಿದ್ದಾರೆ. ಆದರೆ, ಹ್ಯಾರಿಸ್ ಅವರ ಆಯ್ಕೆ ಅನೂರ್ಜಿತ ಎಂದು ಘೋಷಿಸುವವರೆಗೂ ಪ್ರಕರಣ ವಿಚಾರಣೆ ಮುಂದುವರೆಯಬೇಕು. ಆದ್ದರಿಂದ ಚುನಾವಣಾ ತಕರಾರು ಅರ್ಜಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.