ಬೆಂಗಳೂರು: ಲೋಕಸಭಾ ಚುನಾವಣೆಗೆ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಅವರನ್ನು ರಾಜ್ಯ ಸಂಚಾಲಕರನ್ನಾಗಿ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಕಾರ್ಕಳ ಶಾಸಕರಾಗಿರುವ ವಿ ಸುನೀಲ್ ಕುಮಾರ್ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಜೊತೆಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿಯ ರಾಜ್ಯ ಸಂಚಾಲಕರನ್ನಾಗಿ ನಿಯುಕ್ತಿಗೊಳಿಸಲಾಗಿದ್ದು, ಸದಸ್ಯರ ತಂಡವನ್ನು ಸದ್ಯದಲ್ಲೇ ಅಂತಿಮಗೊಳಿಸಲಾಗುತ್ತದೆ.
ಚುನಾವಣೆ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಕಾರ್ಯ ಚಟುವಟಿಕೆಯನ್ನು ಚುನಾವಣಾ ನಿರ್ವಹಣಾ ಸಮಿತಿ ಮೂಲಕ ನಿರ್ವಹಿಸಲಿದ್ದು, ಸಂಚಾಲಕರ ಪಾತ್ರ ಮಹತ್ವದ್ದಾಗಿದೆ. ಕೇಂದ್ರ ಮತ್ತು ರಾಜ್ಯದ ನಡುವೆ ಕೊಂಡಿಯಾಗಿ, ಪ್ರಚಾರ ಕಾರ್ಯ, ರ್‍ಯಾಲಿಗಳ ನಿರ್ವಹಣೆ, ರಾಷ್ಟ್ರೀಯ ನಾಯಕರ ಪ್ರವಾಸ ನಿರ್ವಹಣೆ ಸೇರಿದಂತೆ ಚುನಾವಣಾ ನಿರ್ವಹಣೆ ಮಾಡುವ ಜವಾಬ್ದಾರಿ ಸುನೀಲ್ ಕುಮಾರ್ ಹೆಗಲೇರಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಚಾಲಕಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ಸುನೀಲ್ ಕುಮಾರ್ ಅವರಿಗೆ ಲೋಕಸಭಾ ಚುನಾವಣೆಯ ಸಂಚಾಲಕರನ್ನಾಗಿ ಮಾಡಿ ಹೊಣೆಗಾರಿಕೆ ನೀಡಲಾಗಿದೆ.
ಇದನ್ನೂ ಓದಿ :ಕೆಲ ಸಂಸದರಿಗೆ ಟಿಕೆಟ್ ಕೈ ತಪ್ಪಿದ ವಿಚಾರ: ಯಾರೂ ರೆಬೆಲ್ ಆಗುವುದಿಲ್ಲ, ಎಲ್ಲರೊಂದಿಗೆ ಮಾತನಾಡುವೆ - ಜೋಶಿ