ಬೆಂಗಳೂರು : ಸರ್ಕಾರಿ ಶಾಲಾ ಮಕ್ಕಳು ಹಾಗೂ ವಿಶೇಷ ಚೇತನ ಮಕ್ಕಳಿಗೂ ಅಗತ್ಯ ಮೂಲಸೌಕರ್ಯದ ಜೊತೆಗೆ ಡಿಜಿಟಲ್ ಶಿಕ್ಷಣ ನೀಡುವ ಉದ್ದೇಶದಿಂದ ಹೆಣ್ಣೂರಿನ "ಶ್ರದ್ಧಾಂಜಲಿ ಇಂಟಿಗ್ರೇಟೆಡ್ ಪ್ರಾಥಮಿಕ ಶಾಲೆ" ಹಾಗೂ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್ಗಳಿಗೆ ಪ್ರತ್ಯೇಕವಾಗಿ ಡಿಜಿಟಲ್ ಶಿಕ್ಷಣಕ್ಕೆ ಸಂಬಂಧಿಸಿದ ಉಪಕರಣ ಹಾಗೂ ಮೂಲಸೌಕರ್ಯಗಳನ್ನು ಗ್ಲೋಬಲ್ ಲಾಜಿಕ್, ಮೊಬೈವಿಲ್ ಹಾಗೂ ಇಟಾಚಿ ಕಂಪನಿಗಳ ಸಹಯೋಗದೊಂದಿಗೆ ಸಿಎಸ್‌ಆರ್ ಅಡಿ ಒದಗಿಸಿಕೊಡಲಾಗಿದೆ.
ಗ್ಲೋಬಲ್ ಲಾಜಿಕ್, ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟೀಸ್ (ಎಪಿಡಿ) ಸಹಯೋಗದೊಂದಿಗೆ ಶ್ರದ್ದಾಂಜಲಿ ಇಂಟಿಗ್ರೇಟೆಡ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ 129 ವಿಶೇಷ ಚೇತನ ಮಕ್ಕಳಿಗೆ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಕಲಿಕೆಗೆ ಅನುಕೂಲವಾಗುವಂತೆ ನೆರವು ನೀಡಲಾಯಿತು. ಇದರ ಜೊತೆಗೆ, ವೈಯಕ್ತಿಕ ಚಿಕಿತ್ಸೆ, ಸಹಾಯಕ ಸಾಧನಗಳು ಸೇರಿದಂತೆ ಈ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಈ ಸಂಸ್ಥೆಗಳು ವಹಿಸಿಕೊಂಡವು.
![digital-education-infrastructure-provided-to-government-school-children](https://etvbharatimages.akamaized.net/etvbharat/prod-images/31-01-2025/kn-bng-06-school-initiative-7211560_31012025144616_3101f_1738314976_674.jpg)
ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ: ಅದೇ ರೀತಿ 700ಕ್ಕೂ ಅಧಿಕ ಮಕ್ಕಳನ್ನ ಹೊಂದಿರುವ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್‌ನಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಲಾಯಿತು. ಶಾಲೆಯಲ್ಲಿ ಎಐ-ಚಾಲಿತ ಕಲಿಕೆಯ "ಡಿಜಿ ವಿದ್ಯಾ ಶಾಲಾ" ಹೆಸರಿನ ಕಾರ್ಯಕ್ರಮಕ್ಕೆ ಪ್ರಥಮ್ ಇನ್ಫೋಟೆಕ್ ಫೌಂಡೇಶನ್ ಮತ್ತು ಎಜುಕೇಷನಲ್ ಇನಿಶಿಯೇಟಿವ್ಸ್ (ಇಐ) ಗಳ ಸಹಯೋಗದೊಂದಿಗೆ ಚಾಲನೆ ನೀಡಲಾಯಿತು. ಈ ಯೋಜನೆಯು ಭಾಷೆ, ಇಂಗ್ಲಿಷ್ ಮತ್ತು ಗಣಿತದಂತಹ ವಿಷಯಗಳಲ್ಲಿ ಸಾಕ್ಷರತೆಯನ್ನು ಸುಧಾರಿಸುವುದಲ್ಲದೇ, ಮೂಲ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (ಎಫ್‌ಎಲ್‌ಎನ್) ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗೆ ಸಹಕಾರಿಯಾಗಲಿದೆ ಎಂದು ಯೋಜಿಸಲಾಗಿದೆ.
ಈ ಕುರಿತು ಮಾತನಾಡಿದ ಗ್ಲೋಬಲ್ ಲಾಜಿಕ್ನ ಎಂಜಿನಿಯರಿಂಗ್-ಎಪಿಎಸಿ (ಖಾಸಗಿ ಇಕ್ವಿಟಿ, ಹೈ-ಟೆಕ್ ಮತ್ತು ಐಎಸ್ವಿ) ಮುಖ್ಯಸ್ಥ ಮಧುಸೂಧನ್ ಮೂರ್ತಿ, "ಶಿಕ್ಷಣವು ಸಬಲೀಕರಣಕ್ಕೆ ಅಡಿಪಾಯವಾಗಿದ್ದು, ಈ ಶಾಲೆಗೆ ನಮ್ಮ ಬೆಂಬಲದ ಮೂಲಕ, ಪ್ರತಿ ಮಗುವಿಗೆ ಅವರ ಸವಾಲುಗಳನ್ನು ಲೆಕ್ಕಿಸದೇ ಗುಣಮಟ್ಟದ ಕಲಿಕೆ ಮತ್ತು ಸಮಗ್ರ ಅಭಿವೃದ್ಧಿಗೆ ಹಾಗೂ ಅವರ ಭವಿಷ್ಯ ನಿರ್ಮಿಸಲು ನೆರವಾಗಲಿದ್ದೇವೆ'' ಎಂದರು.
ಮೊಬೈವಿಲ್, ಇಂಕ್‌ನ ಸಿಇಒ ರವಿ ತುಮ್ಮಾರುಕುಡಿ ಮಾತನಾಡಿ, ತಂತ್ರಜ್ಞಾನಕ್ಕೆ ಶಿಕ್ಷಣವನ್ನು ಪರಿವರ್ತಿಸುವ ಅಧಿಕಾರವಿದೆ. ಪ್ರಾಜೆಕ್ಟ್ ಮೈಂಡ್‌ಸ್ಪಾರ್ಕ್‌ಗೆ ನಮ್ಮ ಬೆಂಬಲವು ಪ್ರತಿ ಮಗುವಿಗೆ ಅವರ ಹಿನ್ನೆಲೆಯನ್ನು ಲೆಕ್ಕಿಸದೇ, ಇಂದಿನ ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾಗಲು ಸರಿಯಾದ ಸಾಧನಗಳು ಮತ್ತು ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.
ಸಿಎಸ್ಆರ್ ಮುಖ್ಯಸ್ಥೆ ಮೋನಿಕಾ ವಾಲಿಯಾ ಮಾತನಾಡಿ, "ಶ್ರದ್ಧಾಂಜಲಿ ಇಂಟಿಗ್ರೇಟೆಡ್ ಪ್ರಾಥಮಿಕ ಶಾಲೆಯಲ್ಲಿನ ಅಂತರ್ಗತ ಶಿಕ್ಷಣ ಮಾದರಿ ಮತ್ತು ಪ್ರಾಜೆಕ್ಟ್ ಡಿಜಿ ವಿದ್ಯಾ ಶಾಲಾ ಅವರ ಟೆಕ್-ಚಾಲಿತ ಕಲಿಕೆಯ ವಿಧಾನವು ಸಮಾಜದಲ್ಲಿ ಅರ್ಥಪೂರ್ಣ ಪ್ರಭಾವ ಹೆಚ್ಚಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಎಪಿಡಿ ಮತ್ತು ಪಿಐಎಫ್‌ನೊಂದಿಗಿನ ನಮ್ಮ ಸಹಭಾಗಿತ್ವದ ಮೂಲಕ, ವ್ಯವಹಾರಗಳು ಶಿಕ್ಷಣ ಮತ್ತು ಸೇರ್ಪಡೆಗೆ ಹೇಗೆ ಗಣನೀಯ ರೀತಿಯಲ್ಲಿ ಕೊಡುಗೆ ನೀಡುತ್ತವೆ ಎಂಬುದಕ್ಕೆ ಉದಾಹರಣೆಯನ್ನು ನೀಡುವ ಗುರಿ ಹೊಂದಿದ್ದೇವೆ'' ಎಂದರು.
ಇದನ್ನೂ ಓದಿ : KPSC ನೇಮಕಾತಿ; ಪಿಡಬ್ಲ್ಯೂಡಿ ಹುದ್ದೆ ಭರ್ತಿಗೆ ಅಧಿಸೂಚನೆ - KPSC REVISED NOTIFICATION