ಘಟನೆ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ (ETV Bharat) ದಾವಣಗೆರೆ: ಗಣೇಶನ ನಿಮಜ್ಜನ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿ, ''ಗಣೇಶನ ಮೆರವಣಿಗೆಯು ನಗರದ ಅರಳಿಮರ ಸರ್ಕಲ್ ದಾಟಿ ಚಾಮರಾಜಪೇಟೆ ಸರ್ಕಲ್ ಬಳಿ ಹೋಗುವಾಗ ಕಲ್ಲು ತೂರಾಟ ನಡೆದಿದೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಗಣಪತಿ ನಿಮಜ್ಜನಕ್ಕೆ ಮೆರವಣಿಗೆಯು ಮುಂದೆ ತೆರಳಿದೆ'' ಎಂದು ತಿಳಿಸಿದರು.
''ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗುವುದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತಾಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು. ನಿನ್ನೆ ನಡೆದ ಪ್ರಚೋದನಾತ್ಮಕ ಭಾಷಣವೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದವರ ಮೇಲೆಯೂ ಕ್ರಮ ಜರುಗಿಸಲಾಗುವುದು. ಪ್ರಚೋದನಾತ್ಮಕ ಭಾಷಣಗಳ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಮಾಹಿತಿ ನೀಡಿದರು.
ಅಂಗಡಿ ಮುಗ್ಗಟ್ಟು ಬಂದ್:ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದರಿಂದ ಬೇತೂರ್ ವೃತ್ತ, ಅರಳಿಮರ ವೃತ್ತ, ಎನ್ಆರ್ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೋಲಿಸರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದ್ದಾರೆ. ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಇದನ್ನೂ ಓದಿ:ಸತತ 32 ಗಂಟೆ ನಿಮಜ್ಜನ ಮೆರವಣಿಗೆ: ಹೊಸ ದಾಖಲೆ ಬರೆದ ಬೆಳಗಾವಿ ಗಣೇಶೋತ್ಸವ - Ganeshotsava Procession