ಬೆಂಗಳೂರು: ಸುಗಮ ಕಾರ್ಯಾಚರಣೆ ಹಾಗೂ ವಾಯುಯಾನ ಪ್ರದೇಶದಲ್ಲಿನ ತುರ್ತು ಪ್ರತಿಕ್ರಿಯೆಯ ದಕ್ಷತೆಯನ್ನು ಹೆಚ್ಚಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈಮಾನಿಕ ವೀಕ್ಷಣೆ ಪ್ರದರ್ಶನ (ಎವಿಡಿ- Aerial View Display System) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ವ್ಯವಸ್ಥೆಯು ವಿಮಾನಗಳ ಸಂಚಾರ, ವಾಯುಯಾನ ಪ್ರದೇಶದಲ್ಲಿ ವಾಹನಗಳ ಚಲನೆಯ ಸಮನ್ವಯ, ತುರ್ತು ಪರಿಸ್ಥಿತಿಯ ನಿರ್ವಹಣೆಗಳನ್ನು ಕೇಂದ್ರೀಕೃತ ಡ್ಯಾಶ್ ಬೋರ್ಡ್‌ನಲ್ಲಿ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡಲಿದೆ.
ವೈಮಾನಿಕ ವೀಕ್ಷಣೆ ಪ್ರದರ್ಶನ (ಎವಿಡಿ) ವ್ಯವಸ್ಥೆಯು ವಿಮಾನ ನಿಲ್ದಾಣದ ನಿರ್ವಾಹಕರು, ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳಿಗೆ ವಾಯುಯಾನ ಪ್ರದೇಶದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಏಕೀಕೃತ ನೋಟವನ್ನು ಒದಗಿಸುವ ಮೂಲಕ, ವಿಮಾನ ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹಕರಿಯಾಗಲಿದೆ.
ಈವರೆಗೆ ಬಳಕೆಯಲ್ಲಿದ್ದ ವಾಯು ಸಂಚಾರ ನಿಯಂತ್ರಣ ಕೇಂದ್ರವನ್ನು ಸಂಪರ್ಕಿಸಿ ವಿಮಾನಗಳನ್ನು ಗುರುತಿಸುತ್ತಿದ್ದ ಸಾಂಪ್ರದಾಯಿಕ ವ್ಯವಸ್ಥೆಯನ್ನ ಸರಳಗೊಳಿಸಿ, ವಿಮಾನಗಳನ್ನು ಅವುಗಳ ಸಂಖ್ಯೆಗಳ ಮೂಲಕ ಗುರುತಿಸುವ ಸೌಲಭ್ಯವನ್ನು ಈ ವ್ಯವಸ್ಥೆ ಒದಗಿಸಲಿದೆ. ಜೊತೆಗೆ, ವಿಮಾನ ಸಂಚಾರದ ಎಲ್ಲ ರೀತಿಯ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಮೂಲಕ ಬೆಂಗಳೂರು ವಿಮಾನ ನಿಲ್ದಾಣವನ್ನು ಇನ್ನಷ್ಟು ಸಶಕ್ತಗೊಳಿಸಲು ಸಹಕಾರಿಯಾಗಲಿದೆ.
ವೈಮಾನಿಕ ವೀಕ್ಷಣೆ ಪ್ರದರ್ಶನ (ಎವಿಡಿ) ವ್ಯವಸ್ಥೆಯ ವಿಶೇಷಗಳು:
ನೈಜ-ಸಮಯದ ಏಕೀಕೃತ ಡ್ಯಾಶ್‌ಬೋರ್ಡ್ : ವಿಮಾನ ಬಂದಿಳಿಯುವಿಕೆ ಮತ್ತು ಟೇಕ್ ಆಫ್, ಟ್ಯಾಕ್ಸಿ ಮತ್ತು ವಾಹನ ಸಂಚಾರ ಸೇರಿದಂತೆ ವಾಯುಯಾನ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ನೈಜ ಸಮಯದ ವಿವರಗಳನ್ನು ಒಂದೇ ವೇದಿಕೆಯಲ್ಲಿ ನೀಡಲಿದೆ.
ಸುಧಾರಿತ ವಿಮಾನ ಟ್ರ್ಯಾಕಿಂಗ್ ಸೌಲಭ್ಯ : ವಾಯುಯಾನ ಪ್ರದೇಶದ ದಕ್ಷತೆಯನ್ನು ಹೆಚ್ಚಿಸಲು ವಿಮಾನಗಳ ವೇಗ, ರನ್‌ವೇ ಬಳಕೆಯಲ್ಲಿರುವ ಸಮಯ ಮತ್ತು ಟ್ಯಾಕ್ಸಿಗಳ ಸಂಚಾರದ ನಿಖರ ಮೇಲ್ವಿಚಾರಣೆ ಮಾಡಬಹುದಾಗಿದೆ.
ರಸ್ತೆ ವಾಹನಗಳ ಮೇಲ್ವಿಚಾರಣೆ : ರನ್‌ವೇಯಲ್ಲಿ ತಡೆರಹಿತ ಸಮನ್ವಯ ಮತ್ತು ಸುರಕ್ಷತೆಯ ಹೆಚ್ಚಳಕ್ಕಾಗಿ ವಿಮಾನೇತರ ವಾಹನಗಳ ನೈಜ ಸಮಯದ ಟ್ರ್ಯಾಕಿಂಗ್ ಮಾಡಲಾಗುತ್ತದೆ.
ನಿರ್ಧಾರ ಕೈಗೊಳ್ಳುವಾಗ ಇತರ ಸಂಸ್ಥೆಗಳ ಸಹಯೋಗ : ವಾಯುಯಾನ ಪ್ರದೇಶದ ಕಾರ್ಯಾಚರಣೆಯಲ್ಲಿ ಇತರ ಸಂಸ್ಥೆ/ತಂಡಗಳ ಸಹಯೋಗವನ್ನು ಇನ್ನಷ್ಟು ಬಲಗೊಳಿಸಲು ಮತ್ತು ಕಾರ್ಯಾಚರಣೆಯ ಯೋಜನೆಯನ್ನು ಉತ್ತಮಗೊಳಿಸಲು ಅಗತ್ಯ ಸೌಲಭ್ಯವನ್ನು ನೀಡಲಿದೆ.
ತುರ್ತು ಎಚ್ಚರಿಕೆ : ತುರ್ತು ಸಂದರ್ಭಗಳಲ್ಲಿ ಇತರ ಸಂಸ್ಥೆ/ತಂಡಗಳ ಜೊತೆಗೆ ಉತ್ತಮ ಸಮನ್ವಯ ಸಾಧಿಸಲು, ಅಪಾಯ ಮತ್ತು ಅಡೆತಡೆಯನ್ನು ಕಡಿಮೆ ಮಾಡಲು ತ್ವರಿತ ಪ್ರತಿಕ್ರಿಯೆ ಪಡೆಯುವ ಸೌಲಭ್ಯವನ್ನು ಒದಗಿಸಲಿದೆ.
ಟ್ಯಾಕ್ಸಿ ಸಂಚಾರ ಸಮಯದ ಸೂಕ್ತ ನಿರ್ವಹಣೆ : ಟ್ಯಾಕ್ಸಿ ಸಂಚಾರ ಸಮಯದ ವಿಳಂಬವನ್ನು ಕಡಿಮೆ ಮಾಡಲು ಮತ್ತು ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ನಿಖರ ವಿಶ್ಲೇಷಣೆಯನ್ನು ಒದಗಿಸುತ್ತದೆ. ಇದು ಸರಿಯಾದ ಸಮಯದ ಕಾರ್ಯಕ್ಷಮತೆ ಮತ್ತು ಇಂಧನ ಉಳಿತಾಯಕ್ಕೆ ಕಾರಣವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ದ ಮುಖ್ಯ ಕಾರ್ಯಾಚರಣಾ ಅಧಿಕಾರಿ ಸತ್ಯಕಿ ರಘುನಾಥ್, “ಬೆಂಗಳೂರು ವಿಮಾನ ನಿಲ್ದಾಣವು ಸುರಕ್ಷತೆ, ದಕ್ಷತೆ ಮತ್ತು ಕಾರ್ಯಾಚರಣೆ ಉತ್ಕೃಷ್ಟತೆಯ ಅತ್ಯುನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿದೆ. ವೈಮಾನಿಕ ವೀಕ್ಷಣೆ ಪ್ರದರ್ಶನ ವ್ಯವಸ್ಥೆಯು ನೈಜ-ಸಮಯ, ಸ್ವಯಂಚಾಲಿತ ಮೇಲ್ವಿಚಾರಣೆ ಮತ್ತು ಸಂಪೂರ್ಣ ವಾಯುಯಾನ ಪ್ರದೇಶದ ತಡೆರಹಿತ ಸಮನ್ವಯವನ್ನು ಶಕ್ತಗೊಳಿಸುತ್ತದೆ. ವೈಮಾನಿಕ ವೀಕ್ಷಣೆ ಪ್ರದರ್ಶನ ವ್ಯವಸ್ಥೆಯು ಬೆಂಗಳೂರು ವಿಮಾನ ನಿಲ್ದಾಣದ ನಾವೀನ್ಯತೆ, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಸುಸ್ಥಿರತೆಯ ಬದ್ಧತೆಯನ್ನು ಎತ್ತಿಹಿಡಿಯಲಿದೆ. ನೈಜ ಸಮಯದ ಮಾಹಿತಿಯನ್ನು ಬಳಸಿಕೊಳ್ಳುವ ಮೂಲಕ ಮತ್ತು ವಾಯುಯಾನ ಪ್ರದೇಶಗಳ ಕಾರ್ಯಾಚರಣೆಗಳ ಏಕೀಕೃತ ನೋಟವನ್ನು ನೀಡುವ ಮೂಲಕ, ಈ ವ್ಯವಸ್ಥೆಯು ಚುರುಕಾದ, ಹೆಚ್ಚು ಪರಿಣಾಮಕಾರಿಯಾದ ವಿಮಾನ ನಿಲ್ದಾಣ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಇತರ ಸಂಸ್ಥೆ/ತಂಡಗಳ ಸಹಯೋಗವನ್ನು ಹೆಚ್ಚಿಸುತ್ತದೆ. ಪ್ರಮುಖವಾಗಿ ಪ್ರಯಾಣಿಕರಿಗೆ ತಡೆರಹಿತ ಪ್ರಯಾಣದ ಅನುಭವ ನೀಡುತ್ತದೆ” ಎಂದು ತಿಳಿಸಿದರು.
“ಅಲ್ಲದೇ, ದಕ್ಷಿಣ ಭಾರತದ ಪ್ರಮುಖ ಏರ್ಪೋರ್ಟ್ ಆಗಿರುವ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಈ ಅತ್ಯಾಧುನಿಕ ಆವಿಷ್ಕಾರ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಕಾರ್ಯಾಚರಣೆಯ ದಕ್ಷತೆಯಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಆಧುನಿಕ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ನಮ್ಮ ನಾಯಕತ್ವವನ್ನು ಕಾಪಾಡಿಕೊಳ್ಳಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಹೆಚ್ಚಿಸಲು ಈ ವ್ಯವಸ್ಥೆಯು ಇನ್ನಷ್ಟು ಬಲ ನೀಡಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಂಗಳೂರು ಏರೋ ಇಂಡಿಯಾ ಶೋ: NETRA-5 ಡ್ರೋನ್ ಸಾಮರ್ಥ್ಯ, ವಿಶೇಷತೆಗಳೇನು? - AERO INDIA 2025