ಹುಬ್ಬಳ್ಳಿ:ಉತ್ತರ ಕರ್ನಾಟಕ ಭಾಗದ ಜನರ ಆರಾಧ್ಯ ದೈವ ಸಿದ್ಧಾರೂಢ ಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಹರ್ಷೋದ್ಘಾರದ ನಡುವೆ ಸಂಭ್ರಮದಿಂದ ಶನಿವಾರ ನಡೆಯಿತು.
ಸಿದ್ಧಾರೂಢರ ರಥ ದೇವಸ್ಥಾನದ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದಂತೆಯೇ ಭಕ್ತಾರು ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವವನ್ನು ಕಣ್ತುಂಬಿಕೊಂಡಿತು.
ಓಂ ನಮಃ ಶಿವಾಯ, ಹರ ಹರ ಮಹಾದೇವ: ಡೊಳ್ಳು, ಬ್ಯಾಂಜೋ ಸೇರಿದಂತೆ ವಿವಿಧ ವಾದ್ಯ-ಮೇಳಗಳೊಂದಿಗೆ ಸಾಗಿದ ಯುವ ಸಮೂಹ ನೃತ್ಯ ಮಾಡುವ ಮೂಲಕ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತು. ತೇರು ಮುಂದೆ ಸಾಗುತ್ತಿದ್ದಂತೆ ಓಂ ನಮಃ ಶಿವಾಯ, ಹರ ಹರ ಮಹಾದೇವ ಎಂಬ ಉದ್ಘಾರ ಭಕ್ತಿಲೋಕ ಧರೆಗಿಳಿಸಿದಂತೆ ಭಾಸವಾಯಿತು. ಇನ್ನು ಜಾತ್ರೆಗೆ ಲಕ್ಷಾಂತರ ಭಕ್ತರ ದಂಡು ಸಾಕ್ಷಿಯಾಯಿತು. ಶನಿವಾರ ಸಂಜೆ 5.30 ಗಂಟೆಗೆ ಸಲ್ಲುವ ಶುಭಮುಹೂರ್ತದಲ್ಲಿ ಹುಬ್ಬಳ್ಳಿಯಲ್ಲಿ ಸಿದ್ಧಾರೂಢ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳನ್ನು ಅಲಂಕೃತ ತೇರಿನಲ್ಲಿಟ್ಟು ಎಳೆಯಲಾಯಿತು.
ಜಾತಿ, ಧರ್ಮದ ಸಂಕೋಲೆಗಳನ್ನು ಮೀರಿ ಸರ್ವ ಜನಾಂಗದವರು ರಥೋತ್ಸವದಲ್ಲಿ ಭಾಗಿಯಾಗಿದರು. ಟೆಂಪೋ, ಟ್ರ್ಯಾಕ್ಟರ್, ದ್ವಿಚಕ್ರ, ಕಾರುಗಳಲ್ಲಿ ಮಾತ್ರವಲ್ಲದೆ, ಪಾದಯಾತ್ರೆ ಮೂಲಕವೂ ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಬಂದಿದ್ದರು. ಶಕ್ತಿ ಯೋಜನೆಯಿಂದ ಭಕ್ತರ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿತ್ತು.