ಪ್ರಯಾಗ್ರಾಜ್ (ಉತ್ತರಪ್ರದೇಶ) : ಹಿಂದೂ ಧರ್ಮದ ಆಚರಣೆಯಲ್ಲಿ ಅಪಾರ ನಂಬಿಕೆ ಹೊಂದಿರುವ ಆ್ಯಪಲ್ ಕಂಪನಿಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಮಹಾಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗ್ರಾಜ್ ತಲುಪಿದ್ದಾರೆ. ಇದೇ ವೇಳೆ ಅವರು, ತಮ್ಮ ಹೆಸರನ್ನೂ ಬದಲಿಸಿಕೊಂಡಿದ್ದಾರೆ.
ನಿರಂಜನಿ ಅಖಾಡದ ಮಹಾ ಮಂಡಲೇಶ್ವರ ಸ್ವಾಮಿ ಕೈಲಾಸಾನಂದ ಗಿರಿ ಮಹಾರಾಜ್ ಅವರು ಲಾರೆನ್ ಪೊವೆಲ್ ಜಾಬ್ಸ್ ಅವರಿಗೆ ಕಮಲಾ ಎಂದು ಹೊಸ ನಾಮಕರಣ ಮಾಡಿದ್ದಾರೆ. ಆಕೆಯನ್ನು ತಮ್ಮ ಪುತ್ರಿಯಂತೆ ಭಾವಿಸಿದ್ದು, ಸನಾತನ ಧರ್ಮದ ಪೂಜಾ ಕೈಂಕರ್ಯಗಳಲ್ಲಿ ಆಕೆ ಭಾಗವಹಿಸುವ ಸಲುವಾಗಿ ಹೊಸ ಹೆಸರು ಇಟ್ಟಿದ್ದಾಗಿ ಕೈಲಾಸಾನಂದ ಗಿರಿ ಮಹಾರಾಜ್ ತಿಳಿಸಿದ್ದಾರೆ.
ಲಾರೆನ್ ಪೊವೆಲ್ ಜಾಬ್ಸ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಇಲ್ಲಿಗೆ ಬಂದಾಗ ಅವರು, ಧ್ಯಾನಕ್ಕಾಗಿ ತಮ್ಮ ಆಶ್ರಮಕ್ಕೆ ಬಂದು ತಂಗುತ್ತಿದ್ದರು ಎಂದು ಮಹಾರಾಜ್ ಹೇಳಿದ್ದಾರೆ.
ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರಾ?: "ಮಹಾಕುಂಭ ಮೇಳದ ಸಂದರ್ಭದಲ್ಲಿ ನಿರಂಜನಿ ಅಖಾಡ ಆಯೋಜಿಸಿರುವ ಶೋಭಾಯಾತ್ರೆಯಲ್ಲಿ ಲಾರೆನ್ ಪೊವೆಲ್ ಜಾಬ್ಸ್ (ಕಮಲಾ) ಅವರು ಭಾಗವಹಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೈಲಾಸಾನಂದ ಗಿರಿ ಮಹಾರಾಜರು, "ನಮ್ಮ ಪೇಶ್ವಾಯಿಯಲ್ಲಿ ಕಮಲಾ ಅವರನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ಅದರಲ್ಲಿ ಭಾಗವಹಿಸುವುದು ಅವರಿಗೆ ಬಿಟ್ಟ ವಿಚಾರ. ಪೊವೆಲ್ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಸಂತರನ್ನು ಭೇಟಿಯಾಗಲು ಬಂದಿದ್ದಾರೆ. ವಿದೇಶಿಯರಾದ ಅವರಿಗೆ ನಮ್ಮ ಸಂಪ್ರದಾಯಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಅವರು ಒಬ್ಬ ಗುರುವಿನ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಾರೆ ಎಂದರು.
ಕಮಲಾ (ಲಾರೆನ್ ಪೊವೆಲ್ ಜಾಬ್ಸ್) ಜನವರಿ 29 ರವರೆಗೆ ಸ್ವಾಮಿ ಕೈಲಾಸಾನಂದ ಗಿರಿ ಮಹಾರಾಜ್ ಅವರ ಆಶ್ರಮದಲ್ಲಿ ಉಳಿದುಕೊಂಡು ಮಹಾಕುಂಭ ಮೇಳಕ್ಕೆ ಸಂಬಂಧಿಸಿದ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಮಹಾ ಕುಂಭಮೇಳಕ್ಕೆ ಮಹಾದೇವನಿಗೆ ಆಹ್ವಾನ: ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ಲಾರೆನ್ ಪೊವೆಲ್ ಜಾಬ್ಸ್ ಅವರು ಮೊದಲು ಕಾಶಿಗೆ ಭೇಟಿ ನೀಡಿದರು. ಮಹಾಕುಂಭ ಮೇಳವು ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆಯಲಿದೆ ಎಂದು ಮಹಾದೇವನಿಗೆ ಪೂಜೆ ಸಲ್ಲಿಸಿದ್ದೇನೆ. ವಿಶ್ವಾಂಭರನಿಗೂ ಕುಂಭಮೇಳಕ್ಕೆ ಆಹ್ವಾನಿಸಿದ್ದೇನೆ ಎಂದು ಲಾರೆನ್ ಅವರು ಇದೇ ವೇಳೆ ತಿಳಿಸಿದರು.
ಮಹಾ ಕುಂಭಮೇಳ ಇಂದಿನಿಂದ (ಜನವರಿ 13) ಆರಂಭವಾಗಿದ್ದು, ಫೆ.26ರವರೆಗೆ ನಡೆಯಲಿದೆ.
ಇದನ್ನೂ ಓದಿ: ಮಹಾಕುಂಭ ಮೇಳ: ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ ಸ್ಟೀವ್ ಜಾಬ್ಸ್ ಪತ್ನಿ