ಬೆಳಗಾವಿ: ಬನದ ಹುಣ್ಣಿಮೆ ನಿಮಿತ್ತ ಸೋಮವಾರ ವೈಭವದ ಜಾತ್ರೆಗೆ ಸವದತ್ತಿ ಏಳುಕೊಳ್ಳದ ತಾಯಿ ವಾಸಸ್ಥಾನ ಯಲ್ಲಮ್ಮನಗುಡ್ಡ ಸಾಕ್ಷಿಯಾಯಿತು. 10 ಲಕ್ಷಕ್ಕೂ ಅಧಿಕ ಭಕ್ತರು ಭಕ್ತಿಯ ಹೊಳೆ ಹರಿಸಿದರು. ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಯಲ್ಲಮ್ಮದೇವಿ ದರ್ಶನ ಪಡೆದು ಪುನೀತರಾದರು.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಭಾನುವಾರದಿಂದಲೇ ಯಲ್ಲಮ್ಮನ ಗುಡ್ಡದತ್ತ ಪ್ರಯಾಣ ಬೆಳೆಸಿದ್ದರು. ಸೋಮವಾರ ಬೆಳಗ್ಗೆ ಯಲ್ಲಮ್ಮನಗುಡ್ಡದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಕಣ್ಣು ಹಾಯಿಸಿದಲ್ಲೆಲ್ಲಾ ಜನವೋ ಜನ ಕಂಡು ಬಂದರು. ಬೆಳಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ ದೇವಿಗೆ ವಿವಿಧ ಕಾಣಿಕೆ ಸಮರ್ಪಿಸಿ ಭಕ್ತಿ ಪರಾಕಾಷ್ಠೆ ಮೆರೆದರು.
ತಲೆ ಮೇಲೆ ಕೊಡ ಹೊತ್ತು ಜೋಗತಿಯರು ಹೆಜ್ಜೆ ಹಾಕಿದರೆ, ಭಂಡಾರ ಹಾರಿಸಿ ಭಕ್ತರು ಕುಣಿದಾಡಿದರು. ಇನ್ನು ಕಲಾವಿದರು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಜಾತ್ರೆಯ ಮೆರಗು ಹೆಚ್ಚಿಸಿದರು.
ಇನ್ನು ಮಲಪ್ರಭಾ ನದಿ ದಡದಲ್ಲಿರುವ ಜೋಗುಳಬಾವಿ ಸತ್ಯೆಮ್ಮ ದೇವಿ ಸನ್ನಿಧಿಯಲ್ಲಿ ಹಾಗೂ ಯಲ್ಲಮ್ಮ ದೇವಸ್ಥಾನ ಬಳಿಯ ಎಣ್ಣೆ ಹೊಂಡದಲ್ಲಿ ಭಕ್ತರು ಪವಿತ್ರಸ್ನಾನ ಮಾಡಿದರು. ದೇವಸ್ಥಾನದ ಮೂಲ ಅರ್ಚಕರ ಮನೆಗಳಲ್ಲೇ ತಂಗಿದ ಭಕ್ತರು, ಶ್ರದ್ಧಾ - ಭಕ್ತಿಯಿಂದ ದೇವಿಯನ್ನು ಸ್ಮರಿಸಿದರು. ಬಂದಿದ್ದ ಮಹಿಳಾ ಭಕ್ತರು ರಸ್ತೆಬದಿಯೇ ಒಲೆ ಹೂಡಿ, ಕಡಬು, ಹೋಳಿಗೆ, ಖರ್ಚಿಕಾಯಿ, ಗಾರ್ಗಿ, ಬದನೆಕಾಯಿ, ಮಡಿಕೆ ಕಾಳು, ಅನ್ನ- ಸಾರು, ವಡೆ ಸೇರಿ ಮತ್ತಿತರ ಖಾದ್ಯಗಳನ್ನು ತಯಾರಿಸಿದರು. ಬಳಿಕ ಜೋಗತಿಯರ ನೇತೃತ್ವದಲ್ಲಿ ಪರಡಿ ತುಂಬಿ ನೈವೇದ್ಯ ಅರ್ಪಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರೆಲ್ಲ ಒಟ್ಟಾಗಿ ಕುಳಿತು, ಮೃಷ್ಟಾನ್ನ ಭೋಜನ ಸವಿದು ಸಂಭ್ರಮಿಸಿದರು.
ಜಾತ್ರೆಯಲ್ಲಿ ತೆಂಗಿನಕಾಯಿ, ಕುಂಕುಮ-ಭಂಡಾರ, ಸೀರೆ, ಖಣ, ಕರ್ಪೂರ, ಬಾಳೆಹಣ್ಣಿನ ವ್ಯಾಪಾರ ಭರ್ಜರಿಯಾಗಿತ್ತು. ಜಾತ್ರೆಗೆ ಬಂದವರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಆಟಿಕೆಗಳನ್ನು ಕೊಡಿಸಿ ಖುಷಿ ಪಟ್ಟರು. ದೇವಿ ದರ್ಶನ ಪಡೆದು ಊರಿಗೆ ಮರಳುವ ವೇಳೆ ಮಿಠಾಯಿಗಳನ್ನು ಖರೀದಿಸುವುದು ಸಾಮಾನ್ಯವಾಗಿತ್ತು.
ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಜೋಗುಳಬಾವಿ ಮತ್ತು ಸವದತ್ತಿಯ ನೂಲಿನ ಗಿರಣಿ ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಪಾದಚಾರಿ ಮಾರ್ಗದ ಮೇಲೆ ಹಾಗೂ ರಸ್ತೆಬದಿ ಜನರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದರಿಂದ ಸಂಚಾರ ವ್ಯತ್ಯಯ ಉಂಟಾಗಿದ್ದರಿಂದ ಭಕ್ತರು ಪರದಾಡಿದರು.
ಬನದ ಹುಣ್ಣಿಮೆಯಿಂದ ಹಿಡಿದು ಮಹಾಶಿವರಾತ್ರಿ ಅಮಾವಾಸ್ಯೆಯವರೆಗೆ ಯಲ್ಲಮ್ಮನಗುಡ್ಡಕ್ಕೆ ಲಕ್ಷಾಂತರ ಭಕ್ತರು ದೇವಿ ದರ್ಶನಕ್ಕೆ ಅಗಮಿಸುತ್ತಾರೆ. ಬಂದಂತ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಅನುಕೂಲ ಕಲ್ಪಿಸುತ್ತಿದ್ದೇವೆ. ಭಕ್ತರೂ ಸಹಕಾರ ನೀಡುವ ಮೂಲಕ ಜಾತ್ರೆ ಯಶಸ್ವಿಗೊಳಿಸುವಂತೆ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ಕೋರಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕಾಶಿಯಲ್ಲಿ ನಡೆದ ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ; ಇದರ ಐತಿಹಾಸಿಕ ಹಿನ್ನೆಲೆ ಹೀಗಿದೆ! - ANDHAKASURA SAMHARA DAY