ಬೆಳಗಾವಿ : ಒಂದು ಭಾಷೆ ದ್ವೇಷಿಸಿ, ಇನ್ನೊಂದು ಭಾಷೆ ಬೆಳಗಲು ಸಾಧ್ಯವಿಲ್ಲ. ಹೀಗಾಗಿ ನಾವು ಮಾತೃಭಾಷೆ ಪ್ರೀತಿಸುವ ಜತೆಗೆ, ಅನ್ಯಭಾಷೆಗಳನ್ನೂ ಗೌರವಿಸಬೇಕು. ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ ಹೀಗೆ ಬೇರೆ ಬೇರೆ ಭಾಷೆ ಕಲಿತರೆ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ವಿಧಾನಸಭೆ ಅಧ್ಯಕ್ಷ ಯು. ಟಿ ಖಾದರ್ ಅವರು ಅಭಿಪ್ರಾಯ ಪಟ್ಟರು.
ಬೆಳಗಾವಿಯ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸರ್ಕಾರಿ ಮುಸ್ಲಿಂ ನೌಕರರ ಮಹಾ ಸಮ್ಮೇಳನ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳು, ಶೈಕ್ಷಣಿಕ ಮತ್ತು ಔದ್ಯೋಗಿಕ ಯೋಜನೆಗಳ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯಲ್ಲಿ ಯಾವ ಭಾಷೆ ಬೇಕಾದರೂ ಮಾತನಾಡಿ. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆಯವರೊಂದಿಗೆ ಪೈಪೋಟಿ ನಡೆಸಲು ಕನ್ನಡದೊಂದಿಗೆ ಬೇರೆ ಬೇರೆ ಭಾಷೆಗಳನ್ನೂ ಕಲಿಯಬೇಕು. ಅಂದಾಗ ಮಾತ್ರ ವಿಶ್ವಾಸದ ಸಮಾಜ ನಿರ್ಮಿಸಬಹುದು. ಸಾಧ್ಯವಾದಷ್ಟು ಹೆಚ್ಚೆಚ್ಚು ಭಾಷೆ ಕಲಿಯುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.
ಒಪಿಎಸ್ ಜಾರಿ ಖಚಿತ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿ, ಹಳೆ ಪಿಂಚಣಿ ಯೋಜನೆ ಜಾರಿ ಮತ್ತು 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾಗಿ ಭರವಸೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೋ, ಚುನಾವಣೆಯ ನಂತರವೋ ಎನ್ನುವುದಷ್ಟೇ ಸ್ಪಷ್ಟವಾಗಬೇಕಿದೆ. ಆದರೆ ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದು, ಖಂಡಿತವಾಗಲೂ ಒಪಿಎಸ್ ಜಾರಿ ಮಾಡುತ್ತೇವೆ ಎಂದರು.