Virendra Sehwag NetWorth: ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಎಂದರೆ ಥಟ್ ಅಂತ ನೆನಪಿಗೆ ಬರುವ ಏಕೈಕ ಹೆಸರು ವೀರೇಂದ್ರ ಸೆಹ್ವಾಗ್. ವಿಶ್ವ ಕ್ರಿಕೆಟ್ ಕಂಡ ಬೆಸ್ಟ್ ಓಪನರ್ಗಳಲ್ಲಿ ವೀರೂ ಕೂಡ ಒಬ್ಬರು. ನಿರ್ಭೀತವಾಗಿ ಬ್ಯಾಟ್ ಬೀಸುತ್ತಿದ್ದ ಸೆಹ್ವಾಗ್ ಎದುರಾಳಿ ಬೌಲರ್ಗಳಿಗೆ ನಡುಕ ಹುಟ್ಟಿಸುತ್ತಿದ್ದರು.
ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಸೆಹ್ವಾಗ ದಾಂಪತ್ಯದ ಕುರಿತು ಆಘಾತಕಾರಿ ವಿಷಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೀರೇಂದ್ರ ಸೆಹ್ವಾಗ್ ಮತ್ತು ಆರತಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಇಬ್ಬರು ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ಎಂಬಂತೆ ಈ ಇಬ್ಬರೂ ಇನ್ಸ್ಟಾದಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ.
ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ 2004ರಲ್ಲಿ ಮದುವೆ ಆಗಿದ್ದರು. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿವಾಸದಲ್ಲಿ ಈ ಇಬ್ಬರೂ ಸಪ್ತಪದಿ ತುಳಿದಿದ್ದರು. ಆರ್ಯವೀರ್ ಮತ್ತು ವೇದಾಂತ್ ಎಂಬ ಇಬ್ಬರು ಗಂಡು ಮಕ್ಕಳಿಗೆ ವೀರೂ ದಂಪತಿ ಜನ್ಮನೀಡಿದ್ದಾರೆ. ಮಕ್ಕಳು ಕೂಡ ಅಪ್ಪನ ಹಾದಿ ಅನುಸರಿಸುತ್ತಿದ್ದು ಕ್ರಿಕೆಟ್ನಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಈಗಿನಿಂದಲೇ ಅಭ್ಯಾಸ ಶುರು ಮಾಡಿದ್ದಾರೆ.
20 ವರ್ಷಗಳ ಕಾಲ ಕೂಡಿ ಬಾಳಿದ್ದ ಸೆಹ್ವಾಗ್ - ಆರತಿ ಸಂಬಂಧದಲ್ಲಿ ಬಿರುಕು ಮೂಡಿದ್ದು ಕೆಲ ದಿನಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ವೀರೂ ಇನ್ಸ್ಟಾ ಖಾತೆಯಲ್ಲೂ ಪತ್ನಿ ಆರತಿ ಫೋಟೋಗಳು ಮಾಯವಾಗಿದ್ದು ವಿಚ್ಛೇದನ ಗಾಸಿಪ್ಗೆ ಪುಷ್ಠಿ ನೀಡಿದೆ. ಇದರ ನಡುವೆಯೆ ಸೆಹ್ವಾಗ್ ಹೊಂದಿರುವ ಆಸ್ತಿ ವಿಚಾರವೂ ಬಯಲಿಗೆ ಬಂದಿದೆ.
ರೋಹಿತ್ ಶರ್ಮಾಗಿಂತ ಸೆಹ್ವಾಗ್ ಅತ್ಯಂತ ಶ್ರೀಮಂತ: ವರದಿಗಳ ಪ್ರಕಾರ, 2015ರಲ್ಲಿ ಕ್ರಿಕೆಟ್ನಿಂದ ನಿವೃತ್ತಿ ಪಡೆದಿದ್ದರೂ ಆಸ್ತಿ ವಿಚಾರದಲ್ಲಿ ವೀರೇಂದ್ರ ಸೆಹ್ವಾಗ್ ಅವರು ರೋಹಿತ್ ಶರ್ಮಾಗಿಂತ ಮುಂದಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್ ಬಳಿಕ ಕಾಮೆಂಟರಿ ಮತ್ತು ಇತರ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸೆಹ್ವಾಗ್ ವಾರ್ಷಿಕ ಉತ್ತಮ ಸಂಪಾದನೆ ಹೊಂದಿದ್ದಾರೆ.
2024ರಲ್ಲಿ ವೀರೂ 30 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರೆ. ವಾರ್ಷಿಕ ಗಳಿಕೆಯಲ್ಲಿ ರೋಹಿತ್ ಶರ್ಮಾ ಮುಂದಿದ್ದು ಕಳೆದ ವರ್ಷ ₹35 ಕೋಟಿಗೂ ಅಧಿಕ ಹಣ ಸಂಪಾದಿಸಿದ್ದರು. ಆದರೆ ಒಟ್ಟು ಸಂಪತ್ತಿನ ವಿಚಾರದಲ್ಲಿ ರೋಹಿತ್ ಗಿಂತಲೂ ಮುಂದಿದ್ದಾರೆ.
ರೋಹಿತ್ ಅವರ ಒಟ್ಟು ಸಂಪತ್ತು 214 ಕೋಟಿ ರೂ ಆಗಿದ್ದು, ವೀರೇಂದ್ರ ಸೇಹ್ವಾಗ್ ಅವರು 370 ಕೋಟಿ ರೂ ಆಸ್ತಿಗೆ ಒಡೆಯನಾಗಿದ್ದಾರೆ. ಸೆಹ್ವಾಗ್ ಕ್ರಿಕೆಟ್ನಿಂದ ದೂರ ಉಳಿದು 9 ವರ್ಷಗಳ ಕಳೆದರೂ ಉದ್ಯಮ ಮತ್ತು ಕಾಮೆಂಟರಿ ಇವರ ಮೂಲ ಆದಾಯವಾಗಿದೆ.
ಇದನ್ನೂ ಓದಿ: ಪ್ರೀತಿಸಿ ವಿವಾಹವಾಗಿದ್ದ ಭಾರತದ ಸ್ಪೋಟಕ ಬ್ಯಾಟರ್ ದಾಂಪತ್ಯದಲ್ಲಿ ಬಿರುಕು: ಇನ್ಸ್ಟಾದಲ್ಲಿ ಪರಸ್ಪರ ಅನ್ಫಾಲೋ!