ವಿಜಯನಗರ/ಬಳ್ಳಾರಿ: ಜಿಲ್ಲೆಯಲ್ಲಿ ಬ್ಯಾಂಕ್ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಈ ದರೋಡೆ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Digital Heist in Vijayanagara: ವಿಜಯನಗರದಲ್ಲಿರುವ ಸಹಕಾರಿ ಬ್ಯಾಂಕಿನಿಂದ ಸೈಬರ್ ಅಪರಾಧಿಗಳು 2.34 ಕೋಟಿ ರೂ.ಗಳನ್ನು ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಜಯನಗರ ಮತ್ತು ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ (ಬಿಡಿಸಿಸಿ) ಬ್ಯಾಂಕಿನ ಹಲವಾರು ಶಾಖೆಗಳು ಗ್ರಾಹಕರಿಗೆ ತಮ್ಮ ಖಾತೆಗೆ ಹಣ ಜಮಾ ಆಗುತ್ತಿಲ್ಲ ಎಂದು ವರದಿ ಮಾಡಿದ ನಂತರ ಈ ದರೋಡೆ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲು: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ) ಇಂದ ಬ್ಯಾಂಕಿನ 25 ಗ್ರಾಹಕರಿಗೆ ಆರ್‌ಟಿಜಿಎಸ್/ನೆಫ್ಟ್ ಮೂಲಕ ಪಾವತಿಯಾಗಬೇಕಿದ್ದ 2,34,05,405 ರೂ. ವಂಚನೆ ಆಗಿರುವ ಕುರಿತು ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಜಯಪ್ರಕಾಶ್ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?: ದೂರಿನ ಪ್ರಕಾರ, ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ. ಕಳೆದ ಜ.10 ರಂದು ಆರ್‌ಟಿಜಿಎಸ್/ನೆಫ್ಟ್ ಮಾಡಲಾಗಿತ್ತು. ಜ.11 ಮತ್ತು 12 ರಂದು ಎರಡು ದಿನ ರಜೆ ಇದ್ದಿದ್ದರಿಂದ 13ರಂದು ಸಂಬಂಧಪಟ್ಟ ಖಾತೆಗಳಿಗೆ ಹಣ ಜಮೆ ಆಗಬೇಕಾಗಿತ್ತು. ಆದರೆ ಸಂಬಂಧಪಟ್ಟ ಖಾತೆದಾರರಿಗೆ ಹಣ ಜಮೆ ಆಗದಿರುವ ಕುರಿತು ಶಾಖೆಗಳಿಂದ ಕರೆಗಳು ಬಂದಿದ್ದು, ಈ ಕುರಿತು ವಿವರಗಳನ್ನು ಪರಿಶೀಲಿಸಿದಾಗ ಹಣ ದರೋಡೆ ಆಗಿರುವುದು ತಿಳಿದು ಬಂದಿದೆ.
ಬ್ಯಾಂಕಿನ ಸಿಬಿಎಸ್ ದ್ವಾರ ಎಕ್ಸ್ಎಮ್‌ಎಲ್ ಫೈಲ್ ಮೂಲಕ ಐಡಿಬಿಐಗೆ ಹಣ ಯಾರ ಖಾತೆಗಳಿಗೆ ಜಮೆ ಆಗಬೇಕು ಎಂದು ಲಿಸ್ಟ್ ಕಳುಹಿಸಲಾಗಿರುತ್ತದೆ. ಆದರೆ, ಐಡಿಬಿಐ ಬ್ಯಾಂಕಿನಿಂದ ಮುಂದೆ ಪಾವತಿಯಾಗಬೇಕಿದ್ದ ಖಾತೆಗಳ ವಿವರಗಳು ಬದಲಾವಣೆಯಾಗಿ ಅನ್ಯ ಖಾತೆಗಳ ಜಮಾ ಆಗುವ ಮೂಲಕ ಬ್ಯಾಂಕಿನ ಗ್ರಾಹಕರಿಗೆ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಆರ್‌ಟಿಜಿಎಸ್/ನೆಫ್ಟ್ ಸೇವೆಯನ್ನು ಜ.13ರಂದು ಗಣಕಯಂತ್ರ ಉಪವಿಭಾಗದ ಉಪಪ್ರಧಾನ ವ್ಯವಸ್ಥಾಪಕರ ಆದೇಶದ ಮೇರೆಗೆ ಸ್ಥಗಿತಗೊಳಿಸಲಾಗಿತ್ತು. ಆರ್‌ಟಿಜಿಎಸ್/ನೆಫ್ಟ್ ಖಾತೆ ಹ್ಯಾಕ್ ಆಗಿರಬಹುದು ಎಂಬ ಶಂಕೆಯನ್ನು ಬ್ಯಾಂಕ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆರ್‌ಟಿಜಿಎಸ್/ನೆಫ್ಟ್ನ ಎಕ್ಸ್ಎಮ್‌ಎಲ್ ಫೈಲ್‌ನಲ್ಲಿ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಮಾತ್ರ ಬದಲಾವಣೆಯಾಗಿದೆ. ಆದರೆ ಗ್ರಾಹಕರ ಹೆಸರು ಬದಲಾಗದೇ ಅನ್ಯರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ಈ ಕುರಿತು ತನಿಖೆ ಮಾಡಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬ್ಯಾಂಕಿಗೆ ಆದ ಹಾನಿಗೆ ನ್ಯಾಯ ಒದಗಿಸಬೇಕೆಂದು ಬಿಡಿಸಿಸಿ ಬ್ಯಾಂಕ್ ಸಿಇಒ ಜಯಪ್ರಕಾಶ್ ಅವರು ಜ.18ರಂದು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಸಿಇಎನ್ ಪೊಲೀಸ್ ಠಾಣೆ ಬಳ್ಳಾರಿಗೆ ವರ್ಗಾವಣೆ ಮಾಡಲಾಗಿದೆ.
ಪೊಲೀಸರು ಹೇಳಿದ್ದೇನು?: ಈ ಘಟನೆ ಕುರಿತು ಎಸ್ಪಿ ಹರಿಬಾಬು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ನಲ್ಲಿ 2.34 ಕೋಟಿ ಹಣ ಹ್ಯಾಕ್ ಆಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ‘ನಮ್ಮ ಬ್ಯಾಂಕ್ನ ಎಕ್ಸ್ಎಮ್‌ಎಲ್ ಫೈಲ್ ಹ್ಯಾಕ್ ಮಾಡಿ ಹಣ ಲೂಟಿ ಮಾಡಲಾಗಿದೆ’ ಎಂದು ಬ್ಯಾಂಕಿನ ಸಿಇಒ ಜಯಪ್ರಕಾಶ್ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹರಿಬಾಬು ಮಾಹಿತಿ ನೀಡಿದರು.
ದೂರು ಬಂದ ತಕ್ಷಣ ನಮ್ಮ ಟೀಂ ಆಕ್ಟಿವ್ ಆಗಿ ತನಿಖೆ ಕೈಗೊಳ್ಳಲಾಗಿದೆ. ಫಲಾನುಭವಿಗಳ ಹೆಸರುಗಳು ಬದಲಾಗದೇ ಇದ್ದರೂ ಸಹ ವಿವಿಧ ಖಾತೆಗಳಿಗೆ ಹಣ ಜಮಾ ಆಗಿದೆ. ಆದರೆ, ಈ ಖಾತೆಗಳೆಲ್ಲವೂ ಉತ್ತರ ಭಾರತದ ವಿವಿಧ ರಾಜ್ಯಗಳ 25 ಜನರಾಗಿದೆ. ಸದ್ಯ ನಾವು ಅವರೆಲ್ಲ ಅಕೌಂಟ್ಗಳನ್ನು ಫ್ರೀಜ್ ಮಾಡಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: OBD2B ರೂಲ್ಸ್, ಹೊಸ ಅಪ್ಡೇಟ್ಸ್ನೊಂದಿಗೆ ಲಾಂಚ್ ಆದ ಫ್ಯಾಮಿಲಿ ಸ್ಕೂಟಿ: ಈ ಹೊಂಡಾ ಆಕ್ಟಿವಾ ಬೆಲೆ ಎಷ್ಟು ಗೊತ್ತಾ?