ಪ್ರಯಾಗರಾಜ್, ಉತ್ತರಪ್ರದೇಶ: ಮಧ್ಯಪ್ರದೇಶದ ಇಂದೋರ್‌ನಿಂದ ಮಹಾಕುಂಭಮೇಳಕ್ಕೆ ಬಂದು ಜಪಮಾಲೆಗಳನ್ನು ಮಾರಾಟ ಮಾಡುತ್ತಾ ತನ್ನ ನಗುವಿನಿಂದಲೇ ಪ್ರಸಿದ್ಧರಾದ ಬಂಜಾರನ್ ಮೊನಾಲಿಸಾ ಅವರಿಗೆ ಇದೀಗ ಚಲನಚಿತ್ರಗಳಲ್ಲಿ ನಟಿಸುವ ಆಫರ್ ಸಿಕ್ಕಿದೆ.
'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ನಿರ್ದೇಶಕ ಸನೋಜ್ ಮಿಶ್ರಾ ಅವರು ತಮ್ಮ ಮುಂದಿನ ಚಿತ್ರ 'ದಿ ಡೈರಿ ಆಫ್ ಮಣಿಪುರ'ದಲ್ಲಿ ಮೊನಾಲಿಸಾ ಅವರಿಗೆ ಪ್ರಮುಖ ಪಾತ್ರವೊಂದನ್ನ ನೀಡಿದ್ದಾರೆ. ಮೊನಾಲಿಸಾ ಅವರನ್ನು ಭೇಟಿಯಾದ ನಂತರ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಿದ್ದಾರೆ.
ಈಗಾಗಲೇ ಈ ಬಗ್ಗೆ ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾ ಅವರ ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಸದ್ಯ ಮೊನಾಲಿಸಾ ಮಹಾಕುಂಭ ನಗರದಲ್ಲಿಲ್ಲ. ಆದ್ದರಿಂದ ಸನೋಜ್ ಈಗ ಇಂದೋರ್‌ನಲ್ಲಿರುವ ಮೊನಾಲಿಸಾ ಅವರ ಹಳ್ಳಿಗೆ ಹೋಗಲಿದ್ದಾರೆ.
ಆಕರ್ಷಕ ನಗು ಮತ್ತು ಸೌಂದರ್ಯದಿಂದಾಗಿ ರಾತ್ರೋರಾತ್ರಿ ವೈರಲ್ ಆಗಿರುವ ಮೊನಾಲಿಸಾ: ಮಧ್ಯಪ್ರದೇಶದ ಬಂಜರನ್ ಸಮುದಾಯದ ಮೊನಾಲಿಸಾ ಅವರು ಮಹಾಕುಂಭನಗರದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡುವ ಕೆಲವು ವಿಡಿಯೊಗಳು ವೈರಲ್ ಆಗಿದ್ದವು.
ಈಕೆಯ ಮುಗ್ಧ ಸೌಂದರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅವರನ್ನು ಭೇಟಿಯಾಗಲು ನೂರಾರು ಜನರು ಅಖಾರಾಗಳಿಗೆ ಬರಲಾರಂಭಿಸಿದರು. ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದರು. ಈಗ ಅವರ ಜನಪ್ರಿಯತೆ ಎಷ್ಟು ಹೆಚ್ಚಿದೆ ಎಂದರೆ ಅವರು ಮಹಾಕುಂಭನಗರದಲ್ಲಿ ಗುಟ್ಟಾಗಿ ವಾಸ ಮಾಡುವಂತಾಗಿದೆ.
ಟ್ವೀಟ್ ಮೂಲಕ ಮೊನಾಲಿಸಾಗೆ ಚಲನಚಿತ್ರ ಆಫರ್ : ನಿರ್ಮಾಪಕ - ನಿರ್ದೇಶಕ ಸನೋಜ್ ಮಿಶ್ರಾ ಅವರು ಅತ್ಯಂತ ಸೂಕ್ಷ್ಮ ವಿಷಯಗಳ ಮೇಲೆ ಡಜನ್‌ಗಿಂತಲೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಜನವರಿ 19, 2025 ರಂದು ಮೊನಾಲಿಸಾಗೆ ತಮ್ಮ ಮುಂದಿನ ಚಲನಚಿತ್ರದಲ್ಲಿ ಪಾತ್ರವನ್ನು ನೀಡುವ ಕುರಿತು ತಮ್ಮ ಮೊದಲ ಟ್ವೀಟ್ ಮಾಡಿದ್ದರು.
ಇದರ ನಂತರ, ಮೊನಾಲಿಸಾ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಸಂದರ್ಶನವೊಂದರಲ್ಲಿ ಮೊನಾಲಿಸಾ ಅವರಿಗೆ ಅವಕಾಶ ಸಿಕ್ಕರೆ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಇಷ್ಟಪಡುತ್ತೀರಾ ಎಂದು ಕೇಳಿದಾಗ?, ಸಿನಿಮಾದಲ್ಲಿ ಕೆಲಸ ಮಾಡುವುದು ನನ್ನ ಬಾಲ್ಯದ ಕನಸಾಗಿತ್ತು. ಅವಕಾಶ ಸಿಕ್ಕರೆ ಖಂಡಿತಾ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ನಿವೃತ್ತ ಸೇನಾ ಯೋಧನ ಮಗಳ ಪಾತ್ರದಲ್ಲಿ ಮೊನಾಲಿಸಾ : ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಮಾತನಾಡಿ, ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ಮೊನಾಲಿಸಾ ಅವರಿಗೆ ಸಾಮಾನ್ಯ ಜೀವನದ ಪಾತ್ರ ನೀಡಲಾಗಿದೆ. ಇಲ್ಲಿ ಅವರು ಸಾಮಾನ್ಯ ಕೆಳವರ್ಗದ ಕುಟುಂಬಕ್ಕೆ ಸೇರಿರುತ್ತಾರೆ. ಅಲ್ಲಿ ಅವರು ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ಹೂಮಾಲೆಗಳನ್ನ ಮಾರಾಟ ಮಾಡುತ್ತಿರುತ್ತಾರೆ. ಈ ಸಿನಿಮಾದಲ್ಲಿ ನಿವೃತ್ತ ಸೇನಾ ಯೋಧನ ಮಗಳಾಗಿ ಮೊನಾಲಿಸಾ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿ ಅವಳು ಸೇನೆ ಸೇರಲು ಬಯಸುತ್ತಾಳೆ. ತನ್ನ ಈ ಕನಸನ್ನ ನನಸು ಮಾಡಿಕೊಳ್ಳಲು ಆಕೆ ಎಂತಹ ಸಂಕಷ್ಟಗಳನ್ನ ಎದುರಿಸಬೇಕಾಗುತ್ತದೆ. ಹೇಗೆ ತನ್ನ ಕನಸನ್ನ ನನಸಾಗಿಸಿಕೊಳ್ಳುತ್ತಾಳೆ ಎಂಬುದರ ಕುರಿತು ನಿರ್ದೇಶಕರು ಈ ಚಿತ್ರದಲ್ಲಿ ಕಟ್ಟಿಕೊಡಲಿದ್ದಾರೆ.
ಇದನ್ನೂ ಓದಿ : 'ಟಾಕ್ಸಿಕ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ಗೆ ಜೋಡಿಯಾದ ನಯನತಾರಾ: ದೃಢಪಡಿಸಿದ ನಟ ಅಕ್ಷಯ್ - YASH TOXIC