ಮೈಸೂರು: ದಕ್ಷಿಣ ಕರ್ನಾಟಕದ ಹೆಸರಾಂತ ಸುತ್ತೂರು ಜಾತ್ರೆಗೆ ದಿನಗಣನೆ ಆರಂಭವಾಗಿದೆ. ವೈವಿಧ್ಯತೆಗಳಿಂದ ಕೂಡಿರುವ ಸುತ್ತೂರು ಜಾತ್ರೆ ಗ್ರಾಮೀಣ ಸೂಗಡಿನ ಅದ್ಧೂರಿ ಹಾಗೂ ಸಂಭ್ರಮದ ಜಾತ್ರೆಯಾಗಿದೆ. ಈ ಬಾರಿ ಜನವರಿ 26ರಂದ 31ರವರೆಗೆ ಜಾತ್ರೆ ಮಹೋತ್ಸವ ನಡೆಯಲಿದ್ದು, ಈ ವೈಭಯ ಜಾತ್ರೆಯ ಹಿನ್ನೆಲೆ ಏನು? ಇಲ್ಲಿದೆ ಸ್ಟೋರಿ..
ಮೈಸೂರಿನ ನಂಜನಗೂಡು ಕಪಿಲಾ ನದಿತೀರದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಳೆ ಮೈಸೂರು ಭಾಗದಲ್ಲಿ ಶ್ರೀ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರತಿಯೊಬ್ಬರ ಮನೆ ಮಾತು. ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕೇವಲ ಧಾರ್ಮಿಕ ಅಚರಣೆ ಅಷ್ಟೇ ಅಲ್ಲದೇ, ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕ್ಕತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತದಂತಹ ಎಲ್ಲ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ.
ಶ್ರೀ ಕ್ಷೇತ್ರ ಸುತ್ತೂರು ಇತಿಹಾಸ: ರಾಜ್ಯ ವಿಸ್ತರಣೆಗಾಗಿ ರಾಜರುಗಳ ನಡುವೆ ಹೋರಾಟ ನಡೆಯುತ್ತಿದ್ದ ಆ ಕಾಲದಲ್ಲಿ, ರಾಜರುಗಳು ದಂಡೆಯಾತ್ರೆ ಕೈಗೊಳ್ಳುತ್ತಿದ್ದರು. ಅದರಂತೆ ಆಗಿನ ಕಂಚಿಯ ರಾಜೇಂದ್ರ ಚೋಳನೂ ಹಾಗೂ ತಲಕಾಡಿನ ಗಂಗರಾಜ ರಾಚಮಲ್ಲ ಇಬ್ಬರೂ ಯುದ್ಧ ಸಾರಿದರು. ಹೀಗೆ ಯುದ್ಧದ ಸಮಯದಲ್ಲಿ ರಾಜೇಂದ್ರ ಚೋಳ ಏರಿ ಹೊರಟಿದ್ದ ಕುದುರೆ ಗೊತ್ತು ಗುರಿಯಿಲ್ಲದೇ ಓಡ ತೊಡಗಿತ್ತು. ಏನೇ ಮಾಡಿದರೂ ಕುದುರೆಯನ್ನು ತಡೆದು ನಿಲ್ಲಿಸುವುದಕ್ಕೆ ರಾಜನಿಗೆ ಸಾಧ್ಯವಾಗಲಿಲ್ಲ. ಹಾಗೆ ಓಡಿದ ಕುದುರೆ ಕಪಿಲಾ ನದಿ ತೀರದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳಿಗೆ ಪ್ರದಕ್ಷಿಣೆ ಹಾಕಿ ನಿಂತಿತು. ಅಚ್ಚರಿಯನ್ನು ನೋಡಿದ ರಾಜೇಂದ್ರ ಚೋಳ ಸ್ವಾಮೀಜಿಗೆ ಶರಣಾಗಿ ಮನಃ ಪರಿವರ್ತನೆ ಆಗಿ ಶ್ರೀ ಕ್ಷೇತ್ರದಲ್ಲೇ ನೆಲಸುತ್ತಾನೆ. ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳಿಂದ ಆರಂಭವಾದ ಸುತ್ತೂರು ವೀರಸಿಂಹಾಸನ ಮಠಕ್ಕೆ ಹತ್ತು ಶತಮಾನಗಳ ಇತಿಹಾಸವಿದೆ.
ಆದಿಗುರು ಶ್ರೀ ಶಿವರಾತ್ರಿಶ್ವರ ಭಗವತ್ಪಾದರಿಂದ (ಕ್ರಿ.ಶ. 950-1030) ಇಲ್ಲಿವರೆಗೆ ಈ ಮಠವು ಹಲವು ಜಗದ್ಗುರುಗಳನ್ನು ಕಂಡಿದೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಗುತ್ತಿದೆ. ಹಿರಿಯ ಜಗದ್ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಅಭಿವೃದ್ಧಿಯತ್ತ ಕೊಂಡೊಯ್ಯವಲ್ಲಿ 1986 ರಿಂದ, 24ನೇ ಪೀಠಾಧಿಕಾರಿಗಳಾಗಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಅಧಿಕಾರ ವಹಿಸಿಕೊಂಡ ಮೇಲೆ, ಶ್ರೀ ಮಠವು ಉಚಿತ ಶಿಕ್ಷಣ, ದಾಸೋಹ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಹತ್ತೂರಿಗೂ ಮಾದರಿ ಸುತ್ತೂರು ಜಾತ್ರೆ: ಸುತ್ತೂರು ಜಾತ್ರಾ ಮಹೋತ್ಸವವೂ ಪ್ರತಿ ವರ್ಷ, ಪುಷ್ಯ ಬಹುಳ ದ್ವಾದಶಿಯಂದು ಪ್ರಾರಂಭಗೊಂಡು ಮಾಘ ಶುದ್ಧ ಬಿದಿಗೆಯವರೆಗೆ ಆರು ದಿನಗಳ ಕಾಲ ನಡೆಯುತ್ತದೆ. ಈ ಜಾತ್ರೆ ಒಂದು ದಿನದಲ್ಲಿ ಮುಗಿದು ಹೋಗುವ ಜಾತ್ರೆಯಲ್ಲ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮಹೋತ್ಸವಗಳ ಸಂಗಮದೊಂದಿಗೆ, ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನವಾಗಿಯೂ ಗಮನ ಸೆಳೆಯುತ್ತದೆ. ಈ ಜಾತ್ರೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಪೂಜಾ ಕೈಂಕರ್ಯಗಳು, ಸೇವಾರ್ಥದಾರರು, ಭಕ್ತಾದಿಗಳು, ಸಂಘ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಾಯ ಸಹಕಾರಗಳಿಂದ ಅದ್ಧೂರಿಯಾಗಿ ನಡೆಯುತ್ತವೆ.
ಒಂದು ಜಾತ್ರೆ ಹಲವು ಕಾರ್ಯಕ್ರಮ: ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಪ್ರತಿ ದಿನ ವಿವಿಧ ವೇದಿಕೆಗಳಲ್ಲಿ ನಾನಾ ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರಿಂದ ಧರ್ಮ ಸಂದೇಶ, ಭರತನಾಟ್ಯ, ಸುಗಮ ಸಂಗೀತ, ನಾಟಕಗಳು, ಸ್ಯಾಕ್ಸೋಫೋನ್ ವಾದನ, ಯೋಗ ಪ್ರಾತ್ಯಕ್ಷಿಕೆ, ವಚನ ಗಾಯನ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರೆಯಲ್ಲಿ ವಸ್ತು ಪ್ರದರ್ಶನ, ಕೃಷಿಮೇಳ, ಕ್ಯಾನ್ಸರ್ ತಪಾಸಣಾ ಶಿಬಿರ, ಬೀದಿ ನಾಟಕಗಳು, ದೇಸಿ ಆಟಗಳು ಸಾಮೂಹಿಕ ವಿವಾಹ, ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಪ್ರತಿ ವರ್ಷ ಸಮಾರು 7 ರಿಂದ 10 ಲಕ್ಷ ಜನರು ಜಾತ್ರೆಗೆ ಆಗಮಿಸುತ್ತಾರೆ. ಪ್ರತಿನಿತ್ಯ ಭಕ್ತರಿಗೆ ಪ್ರಸಾದ ಮತ್ತು ದೂರದಿಂದ ಬರುವವರಿಗೆ ವಾಸ್ತವ್ಯಕ್ಕೆ ತಾತ್ಕಾಲಿಕ ಕುಟೀರಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
ಸುತ್ತೂರು ಜಾತ್ರೆಯ ಇತಿಹಾಸ ಹಾಗೂ ಅದು ನಡೆದುಕೊಂಡು ಬಂದ ಹಾದಿ ಜೆಎಸ್ಎಸ್ ಮಠದ ಪ್ರಗತಿಯ ಭಾಗವಾಗಿದ್ದು, ಇಲ್ಲಿ ಎಲ್ಲಾ ರೀತಿಯ ಜನಾಂಗದವರು ಭಾಗವಹಿಸುತ್ತಾರೆ. ಸುತ್ತೂರು ಜಾತ್ರೆ ಜ್ಞಾನದ ಕಣಜವಾಗಿದೆ. ಇದು ಶ್ರೀ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ಮಹೋತ್ಸವ ಎಂದೇ ಪ್ರಸಿದ್ಧಿ ಪಡೆದಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಹಾಗೂ ಜಾತ್ರೆಯ ಉಸ್ತುವಾರಿ ಎಸ್.ಪಿ ಮಂಜುನಾಥ್ ಮಾಹಿತಿ ನೀಡಿದರು.
ಇದನ್ನೂ ಓದಿ: 108 ತರಕಾರಿಗಳಿಂದ ಬನಶಂಕರಿ ದೇವಿಗೆ ಅಲಂಕಾರ: ಪಲ್ಲೇದ ಹಬ್ಬ ಕಣ್ತುಂಬಿಕೊಂಡ ಭಕ್ತರು