ಕರ್ನಾಟಕ

karnataka

ETV Bharat / state

ರಾಜ್ಯದ ಅರ್ಥ ವ್ಯವಸ್ಥೆ ಹಾಳು ಮಾಡುತ್ತಿರುವ ಸಿದ್ದನಾಮಿಕ್ಸ್: ಹೆಚ್​.ಡಿ. ಕುಮಾರಸ್ವಾಮಿ ಕಿಡಿ

ಗ್ಯಾರಂಟಿಗಳ ಮೂಲಕ ನೀಡುತ್ತಿರುವ ರಾಜ್ಯ ಸರ್ಕಾರ ಅದೇ ಹಣವನ್ನು ಬೇರೆ ರೀತಿಯಲ್ಲಿ ಹತ್ತು ಕೈಗಳಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

Former Cm H D Kumarswamy
ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ

By ETV Bharat Karnataka Team

Published : Feb 16, 2024, 9:58 AM IST

ಬೆಂಗಳೂರು: "ಒಂದು ಕೈಯ್ಯಲ್ಲಿ ಗ್ಯಾರಂಟಿಗಳನ್ನು ಕೊಟ್ಟು ಜನರನ್ನು ಬಡತನದಿಂದ ಮಧ್ಯಮ ವರ್ಗಕ್ಕೆ ತಂದಿದ್ದೇವೆ ಎನ್ನುವ ರಾಜ್ಯ ಸರ್ಕಾರ. ಹಾಗೆ ಕೊಟ್ಟು ಹತ್ತು ಕೈಗಳಲ್ಲಿ ಹೀಗೆ ಆ ಹಣವನ್ನು ಕಿತ್ತುಕೊಳುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.

ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಸಿದ್ದನಾಮಿಕ್ಸ್' ಎನ್ನುವ ಮೂಲಕ ಮುಖ್ಯಮಂತ್ರಿಗಳಿಗೆ ಕುಟುಕಿದರು. "ಐದು ಗ್ಯಾರಂಟಿಗಳ ಮೂಲಕ ಜನರ ಆರ್ಥಿಕ ಶಕ್ತಿ, ಕೊಳ್ಳುವ ಶಕ್ತಿ ಹೆಚ್ಚಿದೆ ಎನ್ನುವ ಸರಕಾರ, ಮುದ್ರಾಂಕ ಶುಲ್ಕವನ್ನು ಐದು ಪಟ್ಟು ಹೆಚ್ಚಿಸಿದೆ. ಮಾರ್ಗದರ್ಶಿ ಮೌಲ್ಯ (ಗೈಡ್ಲೆನ್ಸ್ ವ್ಯಾಲ್ಯೂ) ಆಸ್ತಿ ದರಕ್ಕಿಂತ ಹೆಚ್ಚಾಗಿದೆ. ಅಬ್ಕಾರಿ ಸುಂಕ ಏರುತ್ತಲೇ ಇದೆ. ಒಂದು ಕೈಯ್ಯಲ್ಲಿ ಗ್ಯಾರಂಟಿ ಅಂತ ಕೊಟ್ಟು ಹತ್ತು ಕೈಗಳಲ್ಲಿ ತೆರಿಗೆ ಹೇರುವ ನೀತಿ ಆರ್ಥಿಕತೆಗೆ ಅದ್ಯಾವ ಸೀಮೆಯ ಉತ್ತೇಜನ ನೀಡುತ್ತದೆ?" ಎಂದು ಅವರು ಪ್ರಶ್ನೆ ಮಾಡಿದರು.

"ನಾನು ಹಿಂದೆ ಮನಮೋಹನ್ ಸಿಂಗ್ ಅವರ 'ಮನಮೋಹನಾಮಿಕ್ಸ್' ಬಗ್ಗೆ ಕೇಳಿದ್ದೇನೆ. ಈಗ ಮೋದಿ ಅವರ 'ಮೋದಿನಾಮಿಕ್ಸ್' ಬಗ್ಗೆ ತಿಳಿದಿದ್ದೇನೆ. ಜಪಾನ್ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ 'ಅಬೆನಾಮಿಕ್ಸ್' ಬಗ್ಗೆಯೂ ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟಂಗೆ ಕೊಟ್ಟು ತೆರಿಗೆ ವಿಧಿಸಿ, ಕೇಂದ್ರದಿಂದ ಅನುದಾನ ಅನ್ಯಾಯ ಮಾಡಿದೆ ಅಂತಿರುವ ಸಿದ್ದನಾಮಿಕ್ಸ್​ನ್ನು ನೋಡುತ್ತಿದ್ದೇನೆ" ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

"ಕೇಂದ್ರ ಸರ್ಕಾರದ ಜೊತೆ ಕಾಲು ಕೆರೆದು ಹೋದರೆ ಎಲ್ಲಿಂದ ಸಹಾಯ ಬರುತ್ತೆ. ಈಗ ನನ್ನ ತೆರಿಗೆ ನನ್ನ ಹಕ್ಕು ಎನ್ನುತ್ತಿದೆ ಸರಕಾರ. ಹಿಂದೆ ನನ್ನ ನೀರು ನನ್ನ ಹಕ್ಕು ಎಂದರು. ತಮಿಳುನಾಡಿಗೆ ಈಗಲೂ ಕಾವೇರಿ ನೀರು ಹರಿದು ಹೋಗುತ್ತಿದೆ. ಮೇಕೆದಾಟು ಎಲ್ಲಿದೆಯೋ ಅಲ್ಲೇ ಇದೆ. ಚಿನ್ನದ ಮೊಟ್ಟೆ ಇಡುವ ಕೋಳಿಯ ಕತ್ತು ಕತ್ತರಿಸುತ್ತಿದೆ ಕೇಂದ್ರ ಸರಕಾರ ಎಂದು ಸಿದ್ದರಾಮಯ್ಯ ಅವರು ಆರೋಪ ಮಾಡುತ್ತಿದ್ದಾರೆ. ಆದರೆ, ಮುದ್ರಾಂಕ ಶುಲ್ಕ, ಗೈಡ್ಲೆನ್ಸ್ ವ್ಯಾಲ್ಯೂ, ಅಬಕಾರಿ ಸುಂಕ ಸೇರಿ ರಾಜ್ಯದಲ್ಲಿ ತೆರಿಗೆಗಳನ್ನೆಲ್ಲಾ ಹೆಚ್ಚಿಸಲಾಗಿದೆ" ಎಂದು ದೂರಿದರು.

ರಾಜ್ಯ ಕಷ್ಟದಲ್ಲಿದ್ದರೂ ಸಂಪುಟ ದರ್ಜೆ ಭಾಗ್ಯ: "ರಾಜ್ಯದಲ್ಲಿ ತೀವ್ರ ಬರ ಇದೆ. ಗ್ಯಾರಂಟಿಗಳಿಗೆ ಹಣ ಇಲ್ಲ ಎನ್ನುತ್ತಾರೆ. ಆದರೂ 74 ಶಾಸಕರು ಸೇರಿ 90 ಜನರಿಗೆ ಸಂಪುಟ ದರ್ಜೆ ಭಾಗ್ಯ ನೀಡಿ ಜನರ ತೆರಿಗೆ ಪೋಲು ಮಾಡಲಾಗುತ್ತಿದೆ. ಈ ಪೈಕಿ ಮುಖ್ಯಮಂತ್ರಿ ಕಚೇರಿಯಲ್ಲೇ 9 ಜನಕ್ಕೆ ಸಂಪುಟ ಭಾಗ್ಯ ನೀಡಲಾಗಿದೆ. ಕರ್ನಾಟಕ ಹಣಕಾಸು ಸಂಸ್ಥೆಗೂ (KSFC) ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡಿದ್ದಾರೆ. ಇದಕ್ಕಿಂತ ಸೋಜಿಗಾ ಉಂಟಾ?" ಎಂದು ಪ್ರಶ್ನಿಸಿದರು.

"ಸದನದಲ್ಲಿ ಸಿಎಜಿ ವರದಿ ಮಂಡನೆ ಆಗಿದೆ. 47 ವರ್ಷವಾದರೂ ತನ್ನದೇ ಅಧೀನದಲ್ಲಿರುವ ನಿಗಮ ಮಂಡಳಿ, ಸಂಘ ಸಂಸ್ಥೆಗಳಿಗೆ ಕೊಟ್ಟಿರುವ ಸಾಲ ಸೇರಿ ಬಡ್ಡಿಯೊಂದಿಗೆ 15,856 ಕೋಟಿ ರೂ. ವಸೂಲಿ ಆಗಬೇಕಿದೆ. ಆದರೆ, ಅದೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಅವುಗಳನ್ನು ಮತ್ತಷ್ಟು ನಷ್ಟದ ಕೂಪಕ್ಕೆ ತಳ್ಳಲಾಗುತ್ತಿದೆ" ಎಂದು ಹೇಳಿದರು.

"ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದಾರೆ. ಸಂಗಮದಿಂದ ಮೇಕೆದಾಟು ಪಾದಾಯಾತ್ರೆ ಮಾಡಿದ್ದನ್ನೂ ನೋಡಿದ್ದೇವೆ. ಆ ಮೇಕೆದಾಟು ಕಳೆದ 8 ತಿಂಗಳಲ್ಲಿ ಎಲ್ಲಿ ಶುರುವಾಯಿತೋ ಈಗಲೂ ಅಲ್ಲಿಯೇ ನಿಂತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಏನಾಯಿತು, ಎಲ್ಲಿಗೆ ಬಂತು? ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಲೇಬೇಡಿ ಎನ್ನುವಂಥ ಪರಿಸ್ಥಿತಿ ಇದೆ" ಎಂದರು.

ಇದನ್ನೂ ಓದಿ:ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಕ್ರಮ ಕಟ್ಟಡಗಳಿಗೆ ಬಿ ಖಾತಾ ನೀಡಲು ಸಂಪುಟ ಸಭೆ ತೀರ್ಮಾನ

ABOUT THE AUTHOR

...view details