ಕರ್ನಾಟಕ

karnataka

ETV Bharat / state

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ - Shiruru hill collapse - SHIRURU HILL COLLAPSE

ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾದವರ ರಕ್ಷಣೆಗಾಗಿ ಸೇನಾಪಡೆಗಳನ್ನು ನಿಯೋಜಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ವಕೀಲರಾದ ಸಿ.ಜಿ.ಮಲೈಯಿಲ್ ಮತ್ತು ಕೆ.ಎಸ್.ಸುಭಾಷ್ ಚಂದ್ರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

Karnataka High Court
ಕರ್ನಾಟಕ ಹೈಕೋರ್ಟ್​ (ETV Bharat)

By ETV Bharat Karnataka Team

Published : Aug 5, 2024, 1:27 PM IST

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ 11 ಮಂದಿ ಕಣ್ಮರೆಯಾಗಿದ್ದು, ಅವರಲ್ಲಿ 8 ಜನರ ಮೃತದೇಹಗಳು ಪತ್ತೆಯಾಗಿವೆ. ಇನ್ನುಳಿದ ಮೂವರ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ.

ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿರುವ ಜನರ ರಕ್ಷಣೆ ಹಾಗೂ ಪತ್ತೆ, ಹೆದ್ದಾರಿಯಲ್ಲಿ ಬಿದ್ದಿರುವ ಕಲ್ಲು-ಮಣ್ಣು ತೆರವುಗೊಳಿಸಲು 24 ಗಂಟೆಗಳ ಕಾಲವೂ ನಿರಂತರವಾಗಿ ಸಾಧ್ಯವಿರುವ ಎಲ್ಲಾ ಕ್ರಮ ಜರುಗಿಸಬೇಕು. ಸೇನಾಪಡೆಗಳನ್ನು ನಿಯೋಜಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ನಗರದ ವಕೀಲರಾದ ಸಿ.ಜಿ.ಮಲೈಯಿಲ್ ಮತ್ತು ಕೆ.ಎಸ್.ಸುಭಾಷ್ ಚಂದ್ರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠಕ್ಕೆ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಮಾಹಿತಿ ನೀಡಿದರು.

ವಾದ ಮುಂದುವರೆಸಿದ ಅಡ್ವೋಕೇಟ್ ಜನರಲ್, ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿ ಎಲ್ಲಾ ರೀತಿಯ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೂವರು ಕಣ್ಮರೆಯಾಗಿದ್ದು 19 ದಿನಗಳು ಕಳೆದಿವೆ. ಜತೆಗೆ ಅತೀ ಹೆಚ್ಚು ಮಳೆಯ ಕಾರಣದಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಈ ಹಿನ್ನೆಲೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಬಳಿಕ ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ, ಯಾವ ಯಾವ ವಿಭಾಗದಿಂದ ಎಷ್ಟು ಜನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು ಎಂಬ ಅಂಕಿ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಹಾಯಕ ಸಾಲಿಸಿಟರ್ ಜನರಲ್ ಶಾಂತಿ ಭೂಷಣ್, ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಿದೆ. ಅತಿ ಹೆಚ್ಚು ನೀರು ಹರಿಯುತ್ತಿದ್ದ ಕಾರಣದಿಂದ ರಾಜ್ಯ ಸರ್ಕಾರ ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂದು ತಿಳಿಸಿದರು.

ವಾದ ಆಲಿಸಿದ ನ್ಯಾಯಪೀಠ, ಅತಿ ಹೆಚ್ಚು ಮಳೆಯ ನಡುವೆಯೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಕಾರದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಭಾರತೀಯ ಸೇನೆ, ನೌಕಾಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂಬ ಅಂಶಗಳನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿದಾರರ ಮನವಿಯ ಮೇರೆಗೆ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.

ಇದನ್ನೂ ಓದಿ:ಹೆದ್ದಾರಿ ಬಂದ್​ನಿಂದ ಬಸವಳಿದ ಲಾರಿ ಚಾಲಕರು; ಸಂಚಾರಕ್ಕೆ ಕಾದಿರುವವರಿಗೆ ಜಿಲ್ಲಾಡಳಿತದಿಂದ ಸದ್ಯದಲ್ಲೇ ಗ್ರೀನ್ ಸಿಗ್ನಲ್ - Shiruru hill collapse

ABOUT THE AUTHOR

...view details