ನವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ. ಎಲ್ಲಾ ವಿಫಲ ಮಾತುಕತೆಗಳ ಹೊರತಾಗಿ ಸದ್ಯ ಅರವಿಂದ್ ಕೇಜ್ರಿವಾಲ್ ಅವರ ಏಕಾಂಗಿ ಸ್ಪರ್ಧೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ. ಈ ಚುನಾವಣೆ ಕೇಜ್ರಿವಾಲ್ ನಾಯಕತ್ವ ಮತ್ತು ರಾಜಕೀಯ ಪ್ರಸ್ತುತಿಯಲ್ಲಿ ನಿರ್ಣಾಯಕವಾಗಿದ್ದು, ಅಗ್ನಿ ಪರೀಕ್ಷೆಯೇ ಆಗಿದೆ.
ಇತ್ತೀಚಿನ ಬಂಧನದ ಬಳಿಕ ಸುಪ್ರೀಂಕೋರ್ಟ್ನಿಂದ ಜಾಮೀನು ಪಡೆದು ಹೊರ ಬಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಅತಿಶಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. ಈ ನಡೆಯು ಕೇವಲ ಎಎಪಿಗೆ ಮಾತ್ರವಲ್ಲದೇ, ಮುಂದಿನ ಚುನಾವಣೆಯಲ್ಲಿ ದೆಹಲಿ ಮತದಾರರಿಗೂ ಕೂಡ ಗೊಂದಲ ಮೂಡಿಸಿದೆ.
ಮತ್ತೊಂದೆಡೆ ಕಾಂಗ್ರೆಸ್ ಕೂಡ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಲ್ಪ ಹಿಡಿತವನ್ನು ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಮತ ಪ್ರಮಾಣವೂ ಶೇ 10ಕ್ಕಿಂತ ಕಡಿಮೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಕೂಟವನ್ನು ಸೇರಿದ ಬಳಿಕ ದೆಹಲಿಯ ಏಳು ಸಂಸದೀಯ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನದಲ್ಲಿ ಗೆಲುವು ಕಾಣುವಲ್ಲಿ ವಿಫಲವಾಗಿದೆ.
ದೆಹಲಿಯಲ್ಲಿ ಮೂರು ಪಕ್ಷಗಳ ತ್ರಿಕೋನಸ್ಪರ್ಧೆ ಮತಗಳ ಹಂಚಿಕೆಗೆ ಕಾರಣವಾಗಲಿದೆ. ಅದರಲ್ಲೂ ಮುಸ್ಲಿಂ ಮತ್ತು ದಲಿತ ಸಮುದಾಯಗಳ ಮತವು ಎಎಪಿಗೆ ಸವಾಲಾಗಬಹುದು. ಈ ಮತಹಂಚಿಕೆಯು ಕಾಂಗ್ರೆಸ್ಗೆ ಲಾಭವಾಗುವ ಸಾಧ್ಯತೆ ಇದೆ. ಎಎಪಿ ದುರ್ಬಲ ಹೊಂದಿದಂತೆ ಅದು ಬಿಜೆಪಿಗೆ ಲಾಭವನ್ನು ತರುತ್ತದೆ.
ಪಕ್ಷಗಳು ಮೈತ್ರಿ ಹೊರತಾಗಿಯೂ ಏಕಾಂಗಿ ಸ್ಪರ್ಧೆಯು ಎಎಪಿಗೆ ಹಾನಿ ಮಾಡುವ ಜೊತೆಗೆ ಕಾಂಗ್ರೆಸ್ಗೆ ಲಾಭವೂ ಆಗಬಹುದು. ಕೇಜ್ರಿವಾಲ್ ಅವರಿಗೆ ಮತಗಳ ಪಾಲು ಕಡಿಮೆಯಾಗಬಹುದು. ದೆಹಲಿಯನ್ನು ಎಎಪಿಯ ಭದ್ರಕೋಟೆಯಾಗಿಸುವಲ್ಲಿ ಅವರ ರಾಜಕೀಯ ಬ್ರಾಂಡ್ ಮತ್ತಷ್ಟು ಕಡಿಮೆಯಾಗುತ್ತದೆಯಾ ಎಂಬುದನ್ನು ಚುನಾವಣೆ ನಿರ್ಧರಿಸಲಿದೆ.
ದೆಹಲಿ ಚುನಾವಣೆಯಲ್ಲಿ ಬದಲಾವಣೆ: ದೆಹಲಿ ಚುನಾವಣಾ ಟ್ರೆಂಡ್ ಗಮನಿಸಿದಾಗ ವಿಧಾನಸಭೆಯಿಂದ ಲೋಕಸಭೆವರೆಗೆ ಸಾಕಷ್ಟು ವ್ಯತ್ಯಾಸ ಕಾಣಬಹುದಾಗಿದ್ದು, ಮತದಾರರಲ್ಲಿ ದ್ವಂದ್ವ ನಿಲುವು ಕಾಣಬಹುದಾಗಿದೆ. 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 53ರಷ್ಟು ಮತ ಹಂಚಿಕೆ ಪಡೆದರೆ, ಬಿಜೆಪಿ ಶೇ 38 ಮತ್ತು ಕಾಂಗ್ರೆಸ್ ಕೇವಲ ಶೇ 4ರಷ್ಟು ಮತ ಹಂಚಿಕೆ ಪಡೆದಿತ್ತು.
ಅದೇ 2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 54ರಷ್ಟು, ಬಿಜೆಪಿ ಶೇ 32 ಮತ್ತು ಕಾಂಗ್ರೆಸ್ ಶೇ. 9ರಷ್ಟು ಮತ ಗಳಿಸಿತ್ತು. ಇದಕ್ಕಿಂತ ಮುಂದಿನ ಚುನಾವಣೆ ಅಂದರೆ ಎಎಪಿ ಮೊದಲ ಚುನಾವಣೆಯಲ್ಲಿ 2013ರಲ್ಲಿ ಕಾಂಗ್ರೆಸ್ ಶೇ 24ರಷ್ಟು, ಬಿಜೆಪಿ ಶೇ. 33ರಷ್ಟು ಹಾಗೂ ಎಎಪಿ ಶೇ. 29ರಷ್ಟು ಮತ ಗಳಿಸಿತ್ತು. ಈ ವೇಳೆ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿತ್ತು.
ಈ ಮತಹಂಚಿಕೆ ಬದಲಾವಣೆಯನ್ನು ಗಮನಿಸಿದಾಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 54ರಷ್ಟು ಮತಹಂಚಿಕೆ ಪಡೆದರೆ, ಎಎಪಿ ಶೇ 24 ಹಾಗೂ ಕಾಂಗ್ರೆಸ್ ಶೇ. 18ರಷ್ಟು ಮತ ಗಳಿಸಿತು. 2019ರ ಚುನಾವಣೆಯಲ್ಲೂ ಇದೇ ಟ್ರೆಂಡ್ ಕಾಣಬಹುದಾಗಿದೆ. ಇಲ್ಲಿ ಬಿಜೆಪಿ ಶೇ 56, ಎಎಪಿ ಶೇ 22 ಮತ್ತು ಕಾಂಗ್ರೆಸ್ ಶೇ 18ರಷ್ಟು ಮತಗಳಿಸಿತ್ತು. ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 46, ಎಎಪಿ ಶೇ 32 ಹಾಗೂ ಕಾಂಗ್ರೆಸ್ ಶೇ 15ರಷ್ಟು ಮತ ಹಂಚಿಕೆಯಾಗಿತ್ತು.
ದೆಹಲಿಯ ಮತದಾನದ ನಡವಳಿಕೆಯು ವಿಶಿಷ್ಟ ಬೆಂಬಲದ ಆಧಾರವಾಗಿದೆ. ಬಿಜೆಪಿ ಸಿದ್ಧಾಂತಬೆಂಬಲಿಸುವ ಮತದಾರರು ನಿರಂತರವಾಗಿ ಶೇ. 32ರಷ್ಟಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಎಎಪಿಗೆ ಶೇ 18ರಷ್ಟು ಬೆಂಬವಿದೆ. ರಾಷ್ಟ್ರೀಯ ಚುನಾವಣೆಗಿಂತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುವ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ ಶೇ. 18ರಷ್ಟು ಮತಗಳನ್ನು ಲೋಕಸಭೆಯಲ್ಲಿ ಗಳಿಸಿದರೂ, ರಾಜ್ಯ ಚುನಾವಣೆಯಲ್ಲಿ ಈ ಬೆಂಬಲ ಎಎಪಿಗೆ ಬದಲಾಗುತ್ತಿದೆ.
ಈ ಬದಲಾವಣೆಗಳಲ್ಲಿ ಶೇ 10-15ರಲ್ಲಿ ಮತಗಳು ವಿಧಾನಸಭೆಯಲ್ಲಿ ಎಎಪಿಗೆ ಮತ್ತು ಲೋಕಸಭೆಯಲ್ಲಿ ಬಿಜೆಪಿಗೆ ಬೆಂಬಲಿಸುವ ಫ್ಲೋಟಿಂಗ್ ಮತಗಳಾಗಿವೆ. ಈ ಮತಗಳ ತೂಗುಯ್ಯಾಲೆಯು ರಾಜ್ಯ ಮಟ್ಟದಲ್ಲಿ ಎಎಪಿ ಪ್ರಾಲಭ್ಯ ಮತ್ತು ಲೋಕಸಭೆಯಲ್ಲಿ ಬಿಜೆಪಿಯ ಮುನ್ನಡೆಗೆ ಪ್ರಮುಖವಾಗಿದೆ. ದೆಹಲಿಯ ಈ ವಿಶಿಷ್ಟ ಮತದಾರರ ನಡುವಳಿಕೆಯು ರಾಜಕೀಯ ನೆಲೆಯಲ್ಲಿ ಸಂಕೀರ್ಣತೆಗೂ ಕಾರಣವಾಗಿದೆ. ಕಾರಣ ಸ್ಥಳೀಯ ಆಡಳಿತ ಮತ್ತು ರಾಷ್ಟ್ರೀಯ ಚುನಾವಣೆಯಲ್ಲಿ ಈ ಮತಗಳ ಹಂಚಿಕೆ ಬದಲಾಗುತ್ತದೆ.
ಮುಸ್ಲಿಂ ಮತದಾರರು: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ನಡೆಸುವುದಿಲ್ಲ ಎಂಬ ನಿರ್ಧಾರವೂ ಮುಸ್ಲಿಂ ಮತಗಳ ಹಿನ್ನಡೆಯಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಗಳ ಮತದ ಬಲ ಹೆಚ್ಚಿದ್ದು, ಪ್ರಮುಖ ಕ್ಷೇತ್ರದಲ್ಲಿ ಇವು ನಿರ್ಣಾಯಕವೂ ಆಗಿದೆ.
2015ರಲ್ಲಿ ಸಿಎಸ್ಡಿಎಸ್ ಲೋಕ್ನೀತಿ ಅಧ್ಯಯನ ಪ್ರಕಾರ, ಎಎಪಿ ಮುಸ್ಲಿಂ ಮತಗಳ ಬೆಂಬಲವನ್ನು ಹೊಂದಿದ್ದು, ಶೇ 77ರಷ್ಟು ಮತವನ್ನು ಗಳಿಸಿತ್ತು. ಅಲ್ಲದೇ ಮುಸ್ಲಿಂ ಪ್ರಾಬಲ್ಯದ 10 ಕ್ಷೇತ್ರದಲ್ಲಿ 9ಸ್ಥಾನ ಗೆದ್ದಿತ್ತು. ಆದಾಗ್ಯೂ ಈ ಮತಗಳ 2020ರಲ್ಲಿ ಕುಸಿಯಲಾರಂಭಿಸಿತು. ಎಎಪಿಯ ಮುಸ್ಲಿಂ ಮತ ಹಂಚಿಕೆ ಶೇ 69ರಷ್ಟು ಕುಸಿದಿದೆ.
ಈ ಇಳಿಕೆಯು 2022ರ ದೆಹಲಿ ಮುನ್ಸಿಪಲ್ ಚುನಾವಣೆ (ಎಂಎಸ್ಡಿ)ಯಲ್ಲಿ ಸ್ಪಷ್ಟವಾಗಿ ಕಂಡಿತು. ಇಲ್ಲಿ ಕಾಂಗ್ರೆಸ್ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಾದ ಮುಸ್ತಫಾಬಾದ್ ಮತ್ತು ಶಹೀನ್ ಬಾಗ್ನಲ್ಲಿ ಮತ ಗಳಿಕೆ ಕಂಡಿತು.
ಮೈತ್ರಿ ಹೊರತಾದ ಏಕಾಂಗಿ ಸ್ಪರ್ಧೆಯಲ್ಲಿ ಮುಸ್ಲಿಂ ಮತಗಳು ಎಎಪಿ ಮತ್ತು ಕಾಂಗ್ರೆಸ್ ನಡುವೆ ಹರಿದು ಹಂಚಲಿದೆ. ಈ ಮತ ವಿಭಜನೆಯು ಬಿಜೆಪಿಯ ಸ್ಥಾನ ಭದ್ರಪಡಿಸಲು ಮತ್ತು ಮತ ಗಳಿಸಲು ಸಹಕಾರಿಯಾಗಲಿದೆ.
ದಲಿತರ ಬೆಂಬಲ: ಐತಿಹಾಸಿಕವಾಗಿ ದಲಿತರು ಕಾಂಗ್ರೆಸ್‌ನ ಪ್ರಮುಖ ಮತದಾರರಾಗಿದ್ದಾರೆ. ಆದರೆ, ಕಾಲಾನಂತರದಲ್ಲಿ ಅನೇಕರು ಎಎಪಿಯ ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೊಳಗೊಂಡ ಆಡಳಿತದ ಭರವಸೆ ಹಿನ್ನೆಲೆ ಆಪ್ನತ್ತ ವಾಲಿದರು. ಆದಾಗ್ಯೂ, ಇತ್ತೀಚಿನ ಘಟನೆಗಳು ಅವರ ಸಂಬಂಧವನ್ನು ಕಡಿಮೆ ಮಾಡಿದೆ. ಅದರಲ್ಲಿ ಪ್ರಮುಖವಾಗಿರುವ ಘಟನೆ ಎಂದರೆ, ಪ್ರಮುಖ ದಲಿತ ನಾಯಕ ಹಾಗೂ ದೆಹಲಿ ಮಾಜಿ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ.
2022ರಲ್ಲಿ ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕಾರ್ಯಕ್ರಮದ ಬಳಿಕ ಗೌತಮ್ ಅವರು ತಮ್ಮ ಕ್ಯಾಬಿನೆಟ್ ಹುದ್ದೆಗೆ ರಾಜೀನಾಮೆ ನೀಡಿತು. ಈ ಕಾರ್ಯಕ್ರಮವು ಅನೇಕ ವಿವಾದ ಮತ್ತು ಎಎಪಿ ದಲಿತ ಬೆಂಬಲಿಗರ ಆಕಾಂಕ್ಷೆಗಳು ಮತ್ತು ಸೂಕ್ಷ್ಮತೆಗಳನ್ನು ಪರಿಹರಿಸುವಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂದು ಎತ್ತಿ ತೋರಿಸಿತು.
ಗೌತಮ್ ರಾಜೀನಾಮೆ ಬೆನ್ನಲ್ಲೇ ಮತ್ತೊಬ್ಬ ಪ್ರಮುಖ ದಲಿತ ನಾಯಕ, ಸಮಾಜ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ರಾಜ್ಕುಮಾರ್ ಆನಂದ್ ಕೂಡ ಏಪ್ರಿಲ್ 2024ರಲ್ಲಿ ಪಕ್ಷ ತೊರೆದರು. ಪಕ್ಷದ ನೀತಿಗಳು ದಲಿತ ವಿರೋಧಿಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಇವರು ರಾಜೀನಾಮೆ ನೀಡಿದರು. ಆನ್ಂದ್ ಅವರ ನಿರ್ಗಮನ ಪಕ್ಷದಲ್ಲಿ ದಲಿತ ನಾಯಕರ ಹೆಚ್ಚುತ್ತಿರುವ ಅಸಮಾಧಾನವನ್ನು ತೋರಿಸಿತು.
ರಾಜೇಂದ್ರ ಪಾಲ್ ಗೌತಮ್‌ರಂತಹ ಪ್ರಮುಖ ದಲಿತ ನಾಯಕರು ಆಪ್‌ನಿಂದ ಕಾಂಗ್ರೆಸ್ ಸೇರಿದ್ದನ್ನು ಗಮನಿಸಿದರೆ ಈ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಎನ್ನುವಂತೆ ಕಂಡುಬಂತು. ಇತ್ತೀಚೆಗೆ, ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಇತ್ತೀಚೆಗೆ ಎಎಪಿಯ ಆಡಳಿತವನ್ನು ಟೀಕಿಸಿದರು ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಕಾಂಗ್ರೆಸ್‌ನ ಬದ್ಧತೆಯನ್ನು ಒತ್ತಿ ಹೇಳಿದರು.. ಈ ಹೇಳಿಕೆಗಳು ದಲಿತ ಮತದಾರರ ಮೇಲೆ ಪ್ರಭಾವ ಬೀರಲಿವೆ. ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಕೊರತೆ ದಲಿತ ಬೆಂಬಲಿಗರನ್ನು ಪಡೆಯುವಲ್ಲಿ ಎಎಪಿಗೆ ಹಿನ್ನಡೆಯಾಗಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಏನಿದು ಒಂದು ದೇಶ, ಒಂದು ಚುನಾವಣೆ? ಇಲ್ಲಿದೆ ವಿಧೇಯಕದ ಒಳಹೊರಗು