ಮೈಸೂರು: ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಮೈಸೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಮಿತ್ ಶಾ ವಾಸ್ತವ್ಯ ಹೂಡುವ ಹೋಟೆಲ್, ಸಂಚರಿಸುವ ಮಾರ್ಗ ಸೇರಿದಂತೆ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಭದ್ರತೆ ಕಲ್ಪಿಸಲಾಗಿದೆ.
ಶನಿವಾರ ರಾತ್ರಿಯೇ ಗೃಹ ಸಚಿವರು ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಎಂ.ಜಿ.ರಸ್ತೆಯಲ್ಲಿನ ರ್ಯಾಡಿಶನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳುವ ಹಿನ್ನಲೆಯಲ್ಲಿ ಬೆಟ್ಟಕ್ಕೆ ಬೆಳಗ್ಗೆ 10 ಗಂಟೆಯಿಂದ 11.30 ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕೇಂದ್ರ ಸಚಿವರ ನಿರ್ಗಮನದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಮಾಹಿತಿ ನೀಡಿದ್ದಾರೆ.