ಕರ್ನಾಟಕ

karnataka

ETV Bharat / state

ಕಿತ್ತೂರು ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷಗಳು ಪೂರ್ಣ: ಉತ್ಸವ ಆಚರಣೆಗೆ ಏರ್ ಶೋ ಆಯೋಜನೆಗೆ ಚಿಂತನೆ - Kittur Chennamma vijayotsava - KITTUR CHENNAMMA VIJAYOTSAVA

ಕಿತ್ತೂರು ಚೆನ್ನಮ್ಮನ ವಿಜಯೋತ್ಸವಕ್ಕೆ 200 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಉತ್ಸವ ಆಚರಿಸಲು 5 ಕೋಟಿ ಅನುದಾನವಿದ್ದು ಸಕಲ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಚೆನ್ನಮ್ಮ ಕಿತ್ತೂರು ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆ
ಚೆನ್ನಮ್ಮ ಕಿತ್ತೂರು ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆ (ETV Bharat)

By ETV Bharat Karnataka Team

Published : Sep 7, 2024, 10:11 AM IST

ಕಿತ್ತೂರು ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆ (ETV Bharat)

ಬೆಳಗಾವಿ: "ಬ್ರಿಟಿಷರ ವಿರುದ್ಧ ಹೋರಾಡಿ ಮಣಿದ ವೀರರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವಕ್ಕೆ 200 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿಯಾಗಿ ಕಿತ್ತೂರು ಉತ್ಸವ ಆಚರಿಸಲು 5 ಕೋಟಿ ಅನುದಾನ ಲಭ್ಯವಿದೆ. ಹಾಗಾಗಿ, ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಚೆನ್ನಮ್ಮ ಕಿತ್ತೂರು ಉತ್ಸವದ ಪೂರ್ವಭಾವಿ ಸಿದ್ಧತಾ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಜಾರಕಿಹೊಳಿ ಮಾತನಾಡಿದರು. ರಾಷ್ಟ್ರ ಮಟ್ಟದಲ್ಲಿ ಇದ್ದವರನ್ನು ಈ ಬಾರಿ ಕಿತ್ತೂರು ಉತ್ಸವ ಉದ್ಘಾಟಿಸಲು ಮತ್ತು ವೇದಿಕೆ ಮೇಲೆ ಇರಲು ಚರ್ಚಿಸಿ ತೀರ್ಮಾನಿಸುತ್ತೇವೆ. ಮುಖ್ಯಮಂತ್ರಿಗಳನ್ನು ವಿಶೇಷವಾಗಿ ಆಹ್ವಾನಿಸಿದ್ದು, ರಾಜಕಾರಣಿಗಳಿಗಿಂತ ಬುದ್ಧಿಜೀವಿಗಳನ್ನು ವಿಶೇಷವಾಗಿ ಆಹ್ವಾನಿಸುತ್ತೇವೆ ಎಂದಿದ್ದಾರೆ.

200ನೇ ವಿಜಯೋತ್ಸವ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವ ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಏರ್ ಶೋ ಆಯೋಜಿಸುವ ಕುರಿತು ಜಿಲ್ಲಾಧಿಕಾರಿಗಳು ಸಂಬಂಧಿಸಿದವರನ್ನು ಸಂಪರ್ಕಿಸಿದ್ದಾರೆ. ಏರ್ ಶೋ ಆಯೋಜಿಸುವುದರಿಂದ ಒಂದು ಒಳ್ಳೆಯ ಸಂದೇಶ ಹೋಗುತ್ತದೆ. ಅದೇ ರೀತಿ ವಿಜೃಂಭಣೆಯಿಂದ ಉತ್ಸವ ಆಚರಿಸಲು ಎಲ್ಲರೂ ಪ್ರಯತ್ನಿಸುತ್ತಿದ್ದೇವೆ. ಚೆನ್ನಮ್ಮನ ಹುಟ್ಟೂರು ಕಾಕತಿಯಲ್ಲಿ ಕಾರ್ಯಕ್ರಮಕ್ಕೆ ಈ ಬಾರಿ 10 ಲಕ್ಷ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಕಿತ್ತೂರು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಉತ್ಸವದ ಅಂಗವಾಗಿ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಈ ಬಾರಿ ಹೆಚ್ಚಿನ ನಗದು ಬಹುಮಾನ ನೀಡಬೇಕು. ಮೂರು ದಿನಗಳ ಕಾಲ ಜರುಗಲಿರುವ ಚೆನ್ನಮ್ಮನ ಉತ್ಸವದ ಕಾರ್ಯಕ್ರಮದ ಪ್ರಯುಕ್ತ ಮಾಧ್ಯಮಗೋಷ್ಟಿ ಸೇರಿದಂತೆ ಇತರೆ ಗೋಷ್ಠಿಗಳನ್ನೂ ಆಯೋಜಿಸಬೇಕು ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರುಗಳಿಗೆ ಪ್ರಾಶಸ್ತ್ಯ ನೀಡಬೇಕು. ಕಲಾವಿದರ ಆಯ್ಕೆಗೆ ಸಮಿತಿ ರಚಿಸಿ ಸಮಿತಿಯಿಂದ ಆಯ್ಕೆಯಾದ ಕಲಾವಿದರಿಗೆ ಮಾತ್ರ ಅವಕಾಶ ನೀಡಬೇಕು. ಕಾರ್ಯಕ್ರಮದ ಪ್ರಯುಕ್ತ ನಿರ್ಮಿಸಲಾಗುವ ವೇದಿಕೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಬೇಕು. ಅದೇ ರೀತಿ ಆಮಂತ್ರಣ ಪತ್ರಿಕೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡವರ ವಂಶಜರ ಹೆಸರುಗಳನ್ನು ನಮೂದಿಸುವಂತೆ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.

ಅದೇ ರೀತಿ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ ಸನ್ಮಾನಿಸಬೇಕು. ಉತ್ಸವದ ದಿನಗಳಂದು ಆಗಮಿಸುವ ಸಾರ್ವಜನಿಕರಿಗೆ ಅಚ್ಚುಕಟ್ಟಾದ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಬೇಕು. ಚೆನ್ನಮ್ಮನ ವಿಜಯೋತ್ಸವದ 200 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೆ ಸಮಿತಿಯನ್ನು ರಚಿಸಬೇಕು. ವೇದಿಕೆ ಸಿದ್ಧತೆ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಅಗತ್ಯ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು. ಜನಪದ ವಿಶ್ವವಿದ್ಯಾಲಯದಿಂದ ಲಾಂಛನ ತಯಾರಿಸುವ ವ್ಯವಸ್ಥೆ ಆಗಬೇಕು. ರಾಣಿ ಚೆನ್ನಮ್ಮನ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದಲ್ಲಿ ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸುವಂತೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್ ಮಾತನಾಡಿ, ಕಿತ್ತೂರು ಉತ್ಸವದ ಅಂಗವಾಗಿ ಈ ಬಾರಿ ಏರ್ ಶೋ ನಡೆಸಲು ಚಿಂತಿಸಾಗುತ್ತಿದೆ. 200 ವರ್ಷಗಳ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿಯ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರನ್ನು ಸ್ವಾಗತಿಸಲು ಪ್ರತ್ಯೇಕ ಶಿಷ್ಟಾಚಾರ ಸಮಿತಿಯನ್ನು ರಚಿಸಲಾಗುವುದು. ವಾಯವ್ಯ ಕರ್ನಾಟಕ ಸಾರಿಗೆ ಬದಲಾಗಿ ಕಿತ್ತೂರು ಕರ್ನಾಟಕ ಸಾರಿಗೆ ಎಂದು ನಾಮಕರಣ ಮಾಡಲು ಸಹ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಉತ್ಸವ ಈ ಬಾರಿ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ‌ ಎಲ್ಲ ಸಿದ್ಧತೆಗಳು ಪ್ರಾರಂಭವಾಗಿವೆ. ಕೋಟೆ ಸ್ವಚ್ಛತೆ, ಸಾಂಸ್ಕೃತಿಕ‌ ಕಾರ್ಯಕ್ರಮ, ಕ್ರೀಡಾಚಟುವಟಿಕೆ, ವಿವಿಧ ಗೋಷ್ಠಿಗಳು ಸೇರಿ ಎಲ್ಲವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗುವುದು. ಒಟ್ಟಾರೆ ಉತ್ಸವದ ಯಶಸ್ಸಿಗೆ ನಾವೆಲ್ಲಾ ಶಕ್ತಿಮೀರಿ ಪ್ರಯತ್ನಿಸೋಣ ಎಂದು ಹೇಳಿದರು.

200ನೇ ವರ್ಷದ ಸವಿನೆನಪಿಗೋಸ್ಕರ ಶಾಶ್ವತ ಯೋಜನೆ ಕೈಗೊಳ್ಳುವುದು, ಬೆಳಗಾವಿಯ ಸಾಂಬ್ರಾ‌ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರಿಡುವುದು, ಬೆಳಗಾವಿಯ ಚನ್ನಮ್ಮ ವೃತ್ತದ ಅಭಿವೃದ್ಧಿ, ಚನ್ನಮ್ಮನ ಹುಟ್ಟೂರು ಕಾಕತಿಯಲ್ಲಿರುವ ಕೋಟೆ ಜೀರ್ಣೋದ್ಧಾರ, ಸಂಗೊಳ್ಳಿ ರಾಯಣ್ಣನ ಜೊತೆ ಗಲ್ಲಿಗೇರಿದ ಹೋರಾಟಗಾರರನ್ನು ಸ್ಮರಿಸುವುದು ಸೇರಿ ಮತ್ತಿತರ ಸಲಹೆಗಳು ಸಾರ್ವಜನಿಕರಿಂದ ಕೇಳಿ ಬಂದವು.

ಸಭೆಯಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಐಎಎಸ್ ಪ್ರೊಬೆಷನರಿ ಅಧಿಕಾರಿ ದಿನೇಶಕುಮಾರ ಮೀನಾ, ಬೈಲಹೊಂಗಲ ಎಸಿ ಪ್ರತಿಭಾವತಿ ಫಕೀರಪುರ, ಬೆಳಗಾವಿ ಎಸಿ ಶ್ರವಣ ನಾಯಿಕ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ:ಸೆ. 14-15 ರಂದು ಮಂಡ್ಯದಲ್ಲಿ ಗಗನಚುಕ್ಕಿ ಜಲಪಾತೋತ್ಸವ; 2 ದಿನವೂ ಉಚಿತ ಊಟದ ವ್ಯವಸ್ಥೆ - Gaganachukki Waterfall Festival

ABOUT THE AUTHOR

...view details