ಬೆಂಗಳೂರು: ಹಾಸನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಎದುರು ವಿಚಾರಣೆಗೆ ಹಾಜರಾಗಲು ಸಂಸದ ಪ್ರಜ್ವಲ್ ರೇವಣ್ಣ ಏಳು ದಿನಗಳ ಸಮಯಾವಕಾಶ ಕೋರಿದ್ದು, ಇಂದಿಗೆ ಕೊನೆಗೊಳ್ಳುತ್ತಿದೆ. ಆದರೆ, ಇದುವರೆಗೂ ಅವರು ವಿಚಾರಣೆಗೆ ಹಾಜರಾಗುವ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದ್ದು, ಆರೋಪಿಯ ಪತ್ತೆಗೆ ಲುಕ್‌ಔಟ್ ಹಾಗೂ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
ಇದಕ್ಕೂ ಮುನ್ನ ವಿಚಾರಣೆಗೆ ಹಾಜರಾಗಲು ಏ.30ರಂದು ಪ್ರಜ್ವಲ್ಗೆ ಎಸ್ಐಟಿ ನೋಟಿಸ್ ಕಳುಹಿಸಿತ್ತು. ಮೇ 1ರಂದು ತಮ್ಮ ವಕೀಲ ಅರುಣ್ ಜಿ ಎಂಬವರ ಮೂಲಕ ಏಳು ದಿನಗಳ ಕಾಲಾವಕಾಶ ಕೇಳಿದ್ದರು. ಈ ಸಂದರ್ಭದಲ್ಲಿ, ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ ನನ್ನ ವಕೀಲರ ಮೂಲಕ ಎಸ್ಐಟಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಏಳು ದಿನ ಕಾಲಾವಕಾಶ ನೀಡಲು ಎಸ್ಐಟಿ ಅಧಿಕಾರಿಗಳು ನಿರಾಕರಿಸಿದ್ದರು. ಸದ್ಯ ಪ್ರಜ್ವಲ್ ತಾವೇ ಹೇಳಿದಂತೆ ಇಂದಿಗೆ ಏಳು ದಿನಗಳ ಕಾಲಾವಕಾಶ ಮುಕ್ತಾಯವಾಗುತ್ತಿದೆ. ವಿಚಾರಣೆಗೆ ಹಾಜರಾಗದೇ ಇದ್ದರೆ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ಇದನ್ನೂ ಓದಿ:ಪ್ರಜ್ವಲ್ ಪ್ರಕರಣದಲ್ಲಿ ಮುಜುಗರ ಆಗುವುದಾದರೆ ಮೈತ್ರಿ ಬಗ್ಗೆ ಅವರೇ ತೀರ್ಮಾನ ಮಾಡಲಿ : ಹೆಚ್ ಡಿ ಕುಮಾರಸ್ವಾಮಿ - Former CM HD Kumaraswamy