ಬೆಂಗಳೂರು: ಬಿಜೆಪಿಯಿಂದ ನನ್ನನ್ನು ಯಾಕೆ ಉಚ್ಛಾಟನೆ ಮಾಡುತ್ತಾರೆ. ನನ್ನನ್ನು ಉಚ್ಛಾಟಿಸಲಾಗುತ್ತದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಬಿಜೆಪಿ ಹಿರಿಯ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಯಾರ ಜೊತೆಯೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಜೊತೆಗೂ ಸಹ ನನಗೆ ಅಡ್ಜಸ್ಟ್ಮೆಂಟ್ ಇಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡುವ ಅಗತ್ಯ ನನಗಿಲ್ಲ ಎಂದ ಯತ್ನಾಳ್, ನಮಗೆ ಹೊಸ ವರ್ಷ ಯುಗಾದಿ. ವಿಜಯೇಂದ್ರ ಅವರಿಗೆ ಯಾವುದು ಹೊಸ ವರ್ಷ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರು. ಹಾಗಾಗಿ ಅವರು ಪದೇ ಪದೆ ಅಪಾಯಿಂಟ್ಮೆಂಟ್ ಪಡೆದು ದಹೆಲಿ ನಾಯಕರನ್ನು ಭೇಟಿ ಮಾಡುತ್ತಾರೆ. ನಾನು ಯಾರ ಅಪಾಯಂಟ್‌ಮೆಂಟ್ ಕೇಳಿಲ್ಲ, ಯಾರ ಮೇಲೂ ದೂರು ಕೊಡಲ್ಲ ಎಂದರು.
ನಮ್ಮ ಹೋರಾಟ ಏನಿದ್ದರೂ ಜನರ ಆಂದೋಲನ, ದೆಹಲಿ ಆಂದೋಲನವಲ್ಲ. ನನ್ನಂತ ಪಕ್ಷ ನಿಷ್ಠ ಯಾರೂ ಇಲ್ಲ. ನಾನು ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾಗಿಲ್ಲ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ : ಎಂಎಲ್ಸಿ ಹೆಚ್. ವಿಶ್ವನಾಥ್