ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನದ ನಾಲ್ಕನೇಯ ದಿನವಾದ ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.
ಮೂರನೇಯ ದಿನದಂದು ಅಂದರೆ ನಿನ್ನೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದರು. ಈ ವೇಳೆ ಅವರು ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಮೋದಿ ನೇತೃತ್ವದ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಯನ್ನೇನೋ ತಂದಿದೆ. ಇದರ ಉದ್ದೇಶವೂ ಸರಿಯಿದೆ, ಆದರೆ ಗುರಿ ಮುಟ್ಟಲು ಸರ್ಕಾರ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. 2014ರಲ್ಲಿ 15.3ರಷ್ಟು ಇದ್ದ ಜಿಡಿಪಿಯಲ್ಲಿ ಉತ್ಪಾದನೆಯ ಪಾಲು ಇದೀಗ ಶೇ 12.6ಕ್ಕೆ ಇಳಿಕೆ ಕಂಡಿದೆ. ಕಳೆದ 60 ವರ್ಷಗಳಲ್ಲಿ ಇದು ಕಡಿಮೆಯಾಗುತ್ತಲೇ ಸಾಗಿದೆ. ಇದೇ ವೇಳೆ ಜಾತಿ ಗಣತಿ ದತ್ತಾಂಶಕ್ಕೆ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸುವುದರಿಂದ ಪ್ರಯೋಜನವಾಗಲಿದೆ ಎಂದು ಸಲಹೆ ನೀಡಿದರು.
ರಾಹುಲ್ ಕ್ಷಮೆಯಾಚನೆಗೆ ಒತ್ತಾಯಿಸಿದ ಸಂಸದೀಯ ವ್ಯವಹಾರಗಳ ಸಚಿವ: ರಾಹುಲ್ ಗಾಂಧಿ ಭಾಷಣದ ಬೆನ್ನಲ್ಲೇ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ತಮ್ಮ ಆರೋಪಗಳನ್ನು ಸಾಬೀತುಪಡಿಸಲು, ಅದಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸ್ವೀಕರು ನಾಲ್ಕು ಮನವಿ ಮಾಡಿದರು. ಆದರೆ, ರಾಹುಲ್ ಗಾಂಧಿ ಅವರು ಯಾವುದೇ ಅಗತ್ಯ ಪುರಾವೆಗಳನ್ನು ನೀಡದ ಅವರು ಭಾಷಣ ಮಾಡಿ ತೆರಳಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಪಕ್ಷ ನಾಯಕನ ಸ್ಥಾನ ಎಂಬುದು ಜವಾಬ್ದಾರಿಯುತ ಸ್ಥಾನವಾಗಿದ್ದು, ಅವರು ಯೋಚಿಸದೇ ತಮ್ಮ ಹೇಳಿಕೆಯನ್ನು ನೀಡಬಾರದು. ರಾಹುಲ್ ಗಾಂಧಿ ಅವರ ಹೇಳಿಕೆಗಳು ಹಗುರವಾಗಿದ್ದವು. ಅವರು ತಮ್ಮ ಹೇಳಿಕೆಗಳನ್ನು ದೃಢೀಕರಿಸಬೇಕು, ಇಲ್ಲದಿದ್ದರೆ ಅಧ್ಯಕ್ಷರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೂರನೇ ದಿನದ ಬಜೆಟ್ ಅಧಿವೇಶನದಲ್ಲಿ ಮಹಾ ಕುಂಭ ಮೇಳ ಕಾಲ್ತುಳಿತ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದವು. ಈ ಬೆನ್ನಲ್ಲೇ ಗದ್ದಲ ಏರ್ಪಟ್ಟವು. ಅನೇಕ ಸಂಸದರು ಸದನದಿಂದ ಹೊರ ನಡೆದರು.
ಜನವರಿ 31ರಿಂದ ಸಂಸತ್ನ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲ ದಿನದಂದು ಜಂಟಿ ಸದನ ಉದ್ದೇಶಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದರು. ಫೆ. 1ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಾಗಿತ್ತು. ಸೋಮವಾರದಿಂದ 3 ಬಜೆಟ್ ಮೇಲಿನ ವಂದನಾ ನಿರ್ಣಯ ಸಾಗಿದೆ. ಮೊದಲ ಹಂತದ ಬಜೆಟ್ ಅಧಿವೇಶನ ಫೆ. 13ಕ್ಕೆ ಮುಕ್ತಾಯಗೊಳ್ಳಲಿದ್ದು, ಮಾರ್ಚ್ 10 ರಿಂದ ಬಜೆಟ್ ಅಧಿವೇಶನದ 2ನೇ ಹಂತದ ಕಲಾಪಗಳು ಆರಂಭಗೊಳ್ಳಲಿವೆ. ಏಪ್ರಿಲ್ 4ಕ್ಕೆ ಅಧಿವೇಶನ ಮುಕ್ತಯವಾಗಲಿದೆ.
ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಯೋಜನೆ ಉತ್ತಮವಾಗಿದ್ದರೂ, ವಿಫಲ: ರಾಹುಲ್ ಗಾಂಧಿ
ಇದನ್ನೂ ಓದಿ: ಮಹಾ ಕುಂಭಮೇಳ ಕಾಲ್ತುಳಿತದಲ್ಲಿ ಸಾವಿರಾರು ಭಕ್ತರ ಸಾವು ಎಂದ ಖರ್ಗೆ; ಬಿಜೆಪಿ ತೀವ್ರ ಆಕ್ಷೇಪ