ಬೆಂಗಳೂರು: ನಾವೆಲ್ಲರೂ ನಮ್ಮ ಇಲಾಖೆಯ ಕಾರ್ಯವೈಖರಿಯ ರಿಪೋರ್ಟ್ ಕಾರ್ಡ್ ಅನ್ನು ಹೈಕಮಾಂಡ್ಗೆ ನೀಡಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಹೈಕಮಾಂಡ್ ನಮ್ಮ ಬಳಿ ರಿಪೋರ್ಟ್ ಕೇಳಿತ್ತು, ಕೊಟ್ಟಿದ್ದೇವೆ. ಇಲಾಖೆಯ ಕೆಲಸ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೇಳಿದ್ದರು. ಸಚಿವರೆಲ್ಲರೂ ಅವರವರ ಕಾರ್ಯವೈಖರಿ ಬಗ್ಗೆ ವರದಿ ನೀಡಿದ್ದಾರೆ ಎಂದರು.
ಸಚಿವ ಸಂಪುಟ ಪುನರ್ರಚನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಬಳಿಯೇ ನೀವು ಕೇಳಬೇಕು. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಬಿಜೆಪಿಯವರು ಎಲ್ಲರ ರಾಜೀನಾಮೆ ಕೇಳುತ್ತಾರೆ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಆರೋಪ ನಿಜ ಆದರೆ ನೋಡೋಣ. ಮೊದಲು ತನಿಖೆ ಆಗಬೇಕು. ಬಿಜೆಪಿಯವರು ಎಲ್ಲರ ರಾಜೀನಾಮೆ ಕೇಳುತ್ತಾರೆ. ಆಗ ಮಂತ್ರಿ ಮಂಡಲವೇ ಖಾಲಿ ಆಗುತ್ತೆ. ಎಲ್ಲವೂ ಸಿಬಿಐ ತನಿಖೆಗೆ ಕೇಳ್ತಾರೆ, ಅವರು ಹೇಳಿದ ಹಾಗೆ ಮಾಡುವುದಕ್ಕೆ ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
ಸಚಿನ್ ಪಾಂಚಾಳ್ ಗುತ್ತಿಗೆದಾರ ಅಲ್ಲ ಎಂಬ ವಿಚಾರವಾಗಿ ಮಾತನಾಡಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಕಾಮಗಾರಿ ಟೆಂಡರ್ ಆಗಿದೆ. ಬಾಕಿ ಬಿಲ್ ಏನಿದೆ ಎಂಬ ಮಾಹಿತಿಯೂ ಇಲ್ಲ. ವಿಚಾರಣೆ ಬಳಿಕ ಎಲ್ಲವೂ ಹೊರಗಡೆ ಬರಲಿ ಎಂದು ಹೇಳಿದರು.
ಈಶ್ವರಪ್ಪ ಪ್ರಕರಣಕ್ಕೂ, ಇದಕ್ಕೂ ವ್ಯತ್ಯಾಸ ಇದೆ: ಈಶ್ವರಪ್ಪ ಪ್ರಕರಣವನ್ನು ಸ್ವತಃ ಗುತ್ತಿಗೆದಾರ ಸಂತೋಷ್ ಅವರೇ ಹೇಳಿದ್ದರು. ಕೆಲಸ ಮಾಡಿದ್ದೇನೆ, ಬಿಲ್ ಕೊಡಿ ಅಂತ ನೂರಾರು ಸಲ ಭೇಟಿ ಮಾಡಿದ್ದರು. ಅವರ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂಡರು. ಆ ಪ್ರಕರಣಕ್ಕೂ, ಇದಕ್ಕೂ ವ್ಯತ್ಯಾಸ ಇದೆ. ಲಿಂಕ್ ಮಾಡುವುದಕ್ಕೆ ಆಗಲ್ಲ. ತನಿಖೆ ಆಗುತ್ತಿದೆ, ಆಗಲಿ. ಸಿಎಂ ಇದ್ದಾರೆ, ಸರ್ಕಾರ ಇದೆ ಎಂದು ತಿಳಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿ. ಟಿ. ರವಿ ಪ್ರಕರಣವನ್ನು ಸಿಐಡಿಗೆ ವಹಿಸುವ ವಿಚಾರವಾಗಿ ಮಾತನಾಡಿ, ಸಿಐಡಿ ತನಿಖೆಗೆ ಕೇಳಿದ್ದು ನನಗೆ ಗೊತ್ತಿಲ್ಲ. ಕಾನೂನು ಇದೆ, ವಿಧಾನಸಭೆ ಪೊಲೀಸ್, ಅವರದ್ದೇ ಆದ ಪ್ರತ್ಯೇಕ ಕಾನೂನು ಇದೆ. ಹೇಗೆ ತನಿಖೆ ಮಾಡಬೇಕೆಂಬುದು ಅವರಿಗೆ ಬಿಟ್ಟಿದ್ದು, ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.
ರಾಜ್ಯಪಾಲರಿಗೆ ಸಿ. ಟಿ. ರವಿ ದೂರು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ತನಿಖೆ ನಡೆಯುತ್ತಿದೆ, ಸತ್ಯಾಂಶ ಗೊತ್ತಾಗುತ್ತದೆ. ವರದಿ ಬಳಿಕ ಸರ್ಕಾರ, ಗೃಹ ಸಚಿವರು ಕ್ರಮ ತೆಗೆದುಕೊಳ್ಳುತ್ತಾರೆ. ಸಿ. ಟಿ. ರವಿ ಅವರನ್ನು ಸುತ್ತಾಡಿಸಿದ ವಿಚಾರವೂ ತನಿಖೆಗೆ ಬಳಿಕ ಗೊತ್ತಾಗಲಿದೆ ಎಂದರು.
ಇದನ್ನೂ ಓದಿ: ಮಹಿಳೆಯರಿಗೆ ₹2 ಸಾವಿರ ಕೊಡುವ ಬದಲು ಬಾಣಂತಿಯರ ಸಾವು ನಿಲ್ಲಿಸಿ: ಆರ್.ಅಶೋಕ್