ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಶೇ.69.23ರಷ್ಟು ಮತದಾನವಾಗಿದೆ. ಇಂದಿನ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಂ ಸೇರಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಶೇ.68.81ರಷ್ಟು ಮತದಾನವಾಗಿತ್ತು.
ರಾಜಧಾನಿ ಬೆಂಗಳೂರಿನ ಲೋಕಸಭಾ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಚುನಾವಣಾ ಆಯೋಗ ಎಷ್ಟೇ ಜಾಗೃತಿ ಮೂಡಿಸಿದರೂ ನಗರದಲ್ಲಿ ಮತದಾರರು ಮಾತ್ರ ಮತದಾನಕ್ಕೆ ಮುಂದಾಗುತ್ತಿಲ್ಲ. ಉಳಿದ ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.69.23ರಷ್ಟು ಮತದಾನ ಕ್ಷೇತ್ರವಾರು ಮತದಾನದ ವಿವರ:ಉಡುಪಿ-ಚಿಕ್ಕಮಗಳೂರು ಶೇ.76.06, ಹಾಸನ ಶೇ. 77.51, ದಕ್ಷಿಣ ಕನ್ನಡ ಶೇ.77.43, ಚಿತ್ರದುರ್ಗ ಶೇ.73.11, ತುಮಕೂರು ಶೇ.77.70, ಮಂಡ್ಯ ಶೇ.81.48, ಮೈಸೂರು ಶೇ. 70.45, ಚಾಮರಾಜನಗರ ಶೇ.76.59, ಬೆಂಗಳೂರು ಗ್ರಾಮಾಂತರ ಶೇ.67.29, ಬೆಂಗಳೂರು ಉತ್ತರ ಶೇ.54.42, ಬೆಂಗಳೂರು ಕೇಂದ್ರ ಶೇ. 52.81, ಬೆಂಗಳೂರು ದಕ್ಷಿಣ ಶೇ.53.15, ಚಿಕ್ಕಬಳ್ಳಾಪುರ ಶೇ.76.82 ಹಾಗೂ ಕೋಲಾರ ಕ್ಷೇತ್ರದಲ್ಲಿ ಶೇ.78.07 ರಷ್ಟು ಮತದಾನವಾಗಿದೆ.
ಶಾಂತಿಯುತ ಮತದಾನ:ಮತಯಂತ್ರ ದೋಷ, ವಿವಿ ಪ್ಯಾಟ್ ಸಮಸ್ಯೆ ಸೇರಿದಂತೆ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಸಮಸ್ಯೆಗಳಾಗಿಲ್ಲ. ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿತ್ತು. ಆರಂಭದಲ್ಲಿ ಮತಯಂತ್ರ ಕೈಕೊಟ್ಟಿತು. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸೇರಿದಂತೆ ಸಣ್ಣ ಪುಟ್ಟ ಘಟನೆಗಳು ನಡೆದವು. ಇದನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ವರದಿಯಾಗಿಲ್ಲ.
ರಾಜಕಾರಣಿಗಳು, ಚಲನಚಿತ್ರ ನಟ, ನಟಿಯರು, ಖ್ಯಾತ ಕ್ರಿಕೆಟ್ ಪಟುಗಳು, ಕಿರುತೆರೆ ಕಲಾವಿದರು ಸೇರಿದಂತೆ ವಿವಿಧ ಗಣ್ಯರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ಮೂಲಕ ಗಮನ ಸೆಳೆದರು.
ಭದ್ರತೆ:ಹೈವೋಲ್ಟೇಜ್ ಕ್ಷೇತ್ರಗಳಾದ ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ ಸೇರಿದಂತೆ 14 ಕ್ಷೇತ್ರಗಳಿಗೂ ಸೂಕ್ತ ಭದ್ರತೆ ಕೈಗೊಳ್ಳಲಾಗಿತ್ತು. 70 ಕಂಪನಿ ಅರೆಸೇನಾ ಪಡೆ, ಡಿಎಆರ್ ಪ್ಲಟೂನ್, ಸಿಎಆರ್ ಮತ್ತು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 85ಕ್ಕೂ ಹೆಚ್ಚು ಮಂದಿಯಿಂದ ಏಕಕಾಲಕ್ಕೆ ಮತದಾನ - Lok Sabha Election