ಕರ್ನಾಟಕ

karnataka

ETV Bharat / state

ರೆಸ್ಟೋರೆಂಟ್​ಗೆ 5 ಸ್ಟಾರ್ ರಿವ್ಯೂ ನೀಡುವ ಪಾರ್ಟ್ ಟೈಂ ಜಾಬ್ ಆಮಿಷ: ಲಕ್ಷಾಂತರ ವಂಚನೆ - Online Fraud Case - ONLINE FRAUD CASE

ಪ್ರತ್ಯೇಕ ಪ್ರಕರಣಗಳಲ್ಲಿ ಸುಳ್ಯ ಹಾಗೂ ಬಂಟ್ವಾಳದ ಇಬ್ಬರು ವ್ಯಕ್ತಿಗಳು ಆನ್​ಲೈನ್​ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jul 11, 2024, 7:31 PM IST

ಮಂಗಳೂರು(ದಕ್ಷಿಣ ಕನ್ನಡ): ರೆಸ್ಟೋರೆಂಟ್​ಗೆ 5 ಸ್ಟಾರ್ ರಿವ್ಯೂ ನೀಡುವ ಪಾರ್ಟ್ ಟೈಂ ಜಾಬ್ ಆಮಿಷವೊಡ್ಡಿ ಲಕ್ಷಾಂತರ ವಂಚನೆ ಮಾಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ನಿವಾಸಿಯೊಬ್ಬರಿಗೆ ಜೂನ್ 12 ರಂದು ವಾಟ್ಸ್ಯಾಪ್​ಗೆ, Google India Digital Services Private Limited ನಲ್ಲಿ ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ಸಂದೇಶ ಬಂದಿತ್ತು. ಇದರಲ್ಲಿ Google Map ನಲ್ಲಿ ಅವರು ಹೇಳುವ ರೆಸ್ಟೋರೆಂಟ್ ಕ್ಲಿಕ್ ಮಾಡಿ ಅದಕ್ಕೆ 5 ಸ್ಟಾರ್ ನೀಡಿ Review ಬರೆಯಬೇಕಾಗಿ ತಿಳಿಸಿದ್ದರು. ಅದಕ್ಕೆ ಈ ವ್ಯಕ್ತಿ ಒಪ್ಪಿದ್ದರು. ನಂತರ ಅವರುಗಳಿಂದ ಬಂದ ಸೂಚನೆಗಳ ಪ್ರಕಾರ 3 Telegram ಗ್ರೂಪ್​ಗೆ ಜಾಯಿನ್ ಆಗಿದ್ದರು.

ನಂತರದ ದಿನಗಳಲ್ಲಿ ಟಾಸ್ಕ್​ಗಾಗಿ ಹಣ ಹಾಕಲು ತಿಳಿಸಿದ್ದಕ್ಕೆ ಈ ವ್ಯಕ್ತಿ ಅವರ ಹಾಗೂ ಅವರ ಗೆಳೆಯನ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ 2,18,000 ರೂ. ಹಣ ವರ್ಗಾಯಿಸಿದ್ದರು. ಆದರೆ ಅಪರಿಚಿತ ವ್ಯಕ್ತಿಗಳು ಈ ಮೊತ್ತವನ್ನು ಹಿಂತಿರುಗಿಸದೇ ವಂಚನೆ ಮಾಡಿದ್ದಾರೆ ಎಂಬುದಾಗಿ ಮೋಸ ಹೋದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರೇಡಿಂಗ್ ನೆಪದಲ್ಲಿ 10 ಲಕ್ಷ ರೂ. ವಂಚನೆ:ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ, 15 ಡಿಸೆಂಬರ್ 2023 ರಲ್ಲಿ ಟೆಲಿಗ್ರಾಂ ಮೂಲಕ Aman Gonda ಎಂಬುದಾಗಿ ಪರಿಚಯಿಸಿಕೊಂಡ ವ್ಯಕ್ತಿಯೋರ್ವ ನಂತರದಲ್ಲಿ ಟ್ರೇಡಿಂಗ್ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡಲು ತಿಳಿಸಿದ್ದಾನೆ. ಇದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬುದಾಗಿ ತಿಳಿಸಿದ್ದಾನೆ. ಅದರಂತೆ ಮಹಿಳೆಯು ಏಜೆಂಟ್ Ken ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟಾಗಿ ಸರಿಸುಮಾರು ಒಟ್ಟು 10 ಲಕ್ಷ ರೂ. ಹಣವನ್ನು ತನ್ನ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿದ್ದಾರೆ. ನಂತರ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು, ಮಹಿಳೆ ನೀಡಿದ ದೂರಿನನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಬಹುಕೋಟಿ ತೆರಿಗೆ ವಂಚನೆ ಪ್ರಕರಣ: ಪ್ರಧಾನ ಆಯುಕ್ತರು ಹೇಳಿದ್ದೇನು? - Tax Fraud Case

ABOUT THE AUTHOR

...view details