ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ಧಾರ್ಮಿಕ ಭಾವನೆಯನ್ನು ಕೆರಳಿಸುವಂತೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಲಾಗಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಶಿವಮೊಗ್ಗದಲ್ಲಿ ಎಫ್‌ಐಆರ್ ದಾಖಲಾಗಿದೆ. ಎನ್‌ಎಸ್‌ಯುಐ ಕಾರ್ಯಕರ್ತರು ಇಲ್ಲಿನ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ವಿವರ:ರಾಜ್ಯ ಸರ್ಕಾರ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಹೊರಡಿಸಿದ್ದು, ಪಟ್ಟಿಯಲ್ಲಿ ಮಾರ್ಚ್ 1 ಶುಕ್ರವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 5.15 ರವರೆಗೆ ನಿಗದಿ ಮಾಡಿದೆ. ಆ ದಿನ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆ ಆರಂಭವಾಗುತ್ತಿದ್ದು, ಬೆಳಗ್ಗಿನ ಸಮಯದಲ್ಲಿ ಆ ಪರೀಕ್ಷೆ ಇರುವ ಕಾರಣ, ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಒಂದು ದಿನದ ಸಮಯ ಬದಲಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ ಎಂಬವರು ಪರೀಕ್ಷಾ ವೇಳಾಪಟ್ಟಿಯಲ್ಲಿ 1.03.2024ರ ಶುಕ್ರವಾರವನ್ನು ತಕ್ಷಣ ಎದ್ದು ಕಾಣುವಂತೆ ಮಾಡಿ "KARNATAKA STATE 10 STANDARD EXAM TIME TABLE RELEASED. ALL THE EXAM IN THE MORNING SESSION BUT FOR FRIDAY. WHY ?. OH.. TIME FOR NAMAZ?" ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.