ಹುಬ್ಬಳ್ಳಿ: ''ನನ್ನ ಮಗಳು ನೇಹಾಳ ಹತ್ಯೆ ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ'' ಎಂದು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇನ್ಸ್ಟಾಗ್ರಾಂನಲ್ಲಿ ನನ್ನ ಮಗಳ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ನನ್ನ ಮಗಳ ಬಗ್ಗೆ ಸಮಾಜದಲ್ಲಿ ತಪ್ಪು ತಿಳುವಳಿಕೆ ಬರುವಂತೆ ಮಾಡಿದ್ದಾರೆ. ಆರೋಪಿ ಜೈಲಿನಲ್ಲಿದ್ದರು ಖಾತೆಯನ್ನು ಯಾರು ಸೃಷ್ಟಿ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ಈ ಕುರಿತು ವಕೀಲರೊಂದಿಗೆ ಮಾತನಾಡಿದ್ದೇನೆ. ಸೈಬರ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಿದ್ದೇನೆ'' ಎಂದು ಹೇಳಿದರು.
ಫಯಾಜ್ ಒಬ್ಬನೇ ಅಲ್ಲ, ಇದರ ಹಿಂದೆ ನಾಲ್ವರಿದ್ದಾರೆ:''ನೇಹಾ ಹತ್ಯೆಯಲ್ಲಿ ಫಯಾಜ್ ಒಬ್ಬನೇ ಇಲ್ಲ, ಈತನ ಹಿಂದೆ ನಾಲ್ಕು ಜನರಿದ್ದಾರೆ. ಅವರ ಹೆಸರನ್ನು ಪೊಲೀಸರಿಗೆ ಕೊಟ್ಟಿದ್ದೇನೆ. ಪೊಲೀಸರು ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ನಮಗೆ ನ್ಯಾಯ ಸಿಗದಿದ್ರೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ'' ಎಂದು ತಿಳಿಸಿದರು.
ಘಟನೆ ನಡೆದ ಮೊದಲ ದಿನ ನನ್ನ ಜೊತೆಗೆ ಇದ್ದವರು, ಇಂದು ನನ್ನ ಬೆನ್ನಿಗೆ ನಿಂತಿಲ್ಲ, ಘಟನೆ ವೈಯಕ್ತಿಕ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಜಿ. ಪರಮೇಶ್ವರ ಅವರು ಇಂದು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಸ್ವಪಕ್ಷದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.