ಬೆಂಗಳೂರು: ಎಚ್‌ಎಂಪಿವಿ ವೈರಾಣುವಿನ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅಗತ್ಯವಿಲ್ಲ. ಜಾಗರೂಕರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಈಗಾಗಲೇ ಆರೋಗ್ಯ ಇಲಾಖೆಯವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
'ಇದು ಆತಂಕಾರಿಯಾದ ವೈರಸ್ ಅಲ್ಲ': ಗಾಂಧಿಭವನದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್‌ಎಂಪಿವಿ ಬಗ್ಗೆ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ಆತಂಕಾರಿಯಾದ ವೈರಸ್ ಅಲ್ಲ. ಅದು ಚೀನಾದಿಂದ ಬಂದಿಲ್ಲ. 2001ರಿಂದಲೇ ಈ ವೈರಾಣು ಪತ್ತೆಯಾಗಿದೆ. ಎಚ್‌ಎಂಪಿ ವೈರಸ್ ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಾಗಿ ತಗಲುತ್ತದೆ. ಆದರೆ ಅದು ಅಪಾಯಕಾರಿಯಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ತಿಳಿಸಿದರು.
ಇದನ್ನೂ ಓದಿ: ಎಚ್ಎಂಪಿವಿ ಸೋಂಕು: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
'ಔತಣಕೂಟದ ಬಗ್ಗೆ ಗೊತ್ತಿಲ್ಲ': ಇದೇ ವೇಳೆ, ಗೃಹ ಸಚಿವ ಜಿ.ಪರಮೇಶ್ವರ ಏರ್ಪಡಿಸಿದ್ದ ಔತಣಕೂಟ ರದ್ದಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಗೊತ್ತಿಲ್ಲ. ಔತಣಕೂಟ ಕರೆದಿರುವುದಾಗಲಿ ಅಥವಾ ರದ್ದಾಗಿರುವುದಾಗಲಿ ನನಗೆ ತಿಳಿದಿಲ್ಲ. ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: HMP ವೈರಸ್ನಿಂದ ಮಕ್ಕಳ ಮೇಲೆ ಹೆಚ್ಚು ಪರಿಣಾಮ, ಈ ಲಕ್ಷಣಗಳು ಕಂಡುಬಂದರೆ ಜಾಗರೂಕರಾಗಿರಿ: ವೈದ್ಯರ ಸಲಹೆ