ಮಲಪ್ಪುರಂ(ಕೇರಳ): ಇಲ್ಲಿ ನಡೆದ ಪುತಿಯಂಗಡಿ 'ನೆರ್ಚಾ' ಎಂಬ ಧಾರ್ಮಿಕ ಕಾರ್ಯಕ್ರಮದ ವೇಳೆ ಆನೆಯೊಂದು ದಾಳಿ ಮಾಡಿದ್ದರಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ತಿರೂರಿನ ಬಿ.ಪಿ.ಅಂಗಡಿಯ ಜಾರಮ್ ಮೈದಾನದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಐದು ಆನೆಗಳು ಭಾಗಿಯಾಗಿದ್ದವು. ಈ ಪೈಕಿ ಪಾಕತ್ ಶ್ರೀಕುಟ್ಟನ್ ಎಂಬ ಹೆಸರಿನ ಆನೆ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ, ಸೊಂಡಿಲಿನಿಂದ ಎಳೆದು ಬಿಸಾಡಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕೊಟ್ಟಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ಗಾಬರಿಗೊಂಡ ಜನರು ಓಡಲು ಪ್ರಾರಂಭಿಸಿದ್ದಾರೆ. ಇದರಿಂದ ಕಾಲ್ತುಳಿತವಾಗಿ 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ತಿರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾವುತರು ಹರಸಾಹಸಪಟ್ಟು ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಇದನ್ನೂ ಓದಿ: ಆನೆ ಉರುಳಿಸಿದ ತಾಳೆಮರದ ಗರಿ ಬಡಿದು ಬೈಕ್ನಲ್ಲಿ ಸಾಗುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು
ದೇವಸ್ಥಾನದಲ್ಲಿ ಆನೆ ತುಳಿದು ಮಾವುತ ಸಾವು: ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರ ಕರಿಸಿದ್ದೇಶ್ವಸರ ದೇವಸ್ಥಾನದ ಧೃವ ಎಂಬ ಆನೆ ದಾಳಿಯಿಂದ ಮಾವುತ ಮೃತಪಟ್ಟಿದ್ದರು. ಅಲಖನೂರ ಗ್ರಾಮದ ಧರೆಪ್ಪ ಭೇವನೂರ (28) ಮೃತರು. ಮೇವು ಹಾಕಲು ಬಂದ ಮಾವುತನನ್ನು ಆನೆ ತುಳಿದಿತ್ತು. ಮದವೇರಿದ ಸಂದರ್ಭದಲ್ಲಿ ಮೇವು ಹಾಕಲು ಬಂದ ಮಾವುತನ ಮೇಲೆ ದಾಳಿ ಮಾಡಿತ್ತು.
ಇದನ್ನೂ ಓದಿ: ರೈಲ್ವೆ ಬ್ಯಾರಿಕೇಡ್ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಕಾಡಾನೆ; ಜೆಸಿಬಿ ಸಹಾಯದಿಂದ ರಕ್ಷಣೆ- ವಿಡಿಯೋ