ಹುಬ್ಬಳ್ಳಿ:ಲೋಕಸಭೆ ಚುನಾವಣೆ 2024 ಮುಗಿಯುತ್ತಿದಂತೆ ರಾಜ್ಯ ಬಿಜೆಪಿ ವಲಯದಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೆಳಗಾವಿ ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದ ಬಳಿಕ ಸಕ್ರಿಯರಾಗಿದ್ದಾರೆ. ಇಂದು ಅವರು ದೆಹಲಿಗೆ ತೆರಳಿದ್ದು, ಸಚಿವ ಸ್ಥಾನದ ಲೆಕ್ಕಾಚಾರಗಳ ಚರ್ಚೆ ಶುರುವಾಗಿದೆ.
ಬುಧವಾರ ರಾತ್ರಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳಿದ್ದ ಶೆಟ್ಟರ್, ಇಂದು ದೆಹಲಿಗೆ ಪ್ರಯಾಣಿಸಿದ್ದಾರೆ. ಕಾಂಗ್ರೆಸ್ನಿಂದ ಮರಳಿ ಬಿಜೆಪಿಗೆ ಬರುವ ಸಂದರ್ಭದಲ್ಲಿ ಶೆಟ್ಟರ್‌ಗೆ ಹೈಕಮಾಂಡ್ ಸ್ಥಾನಮಾನದ ಭರವಸೆ ನೀಡಿತ್ತು. ಅದಕ್ಕೆ ಪೂರಕವಾಗಿ ಲೋಕಸಭೆ ಟಿಕೆಟ್ ನೀಡಲಾಗಿತ್ತು. ಇದೀಗ ಚುನಾವಣೆಯಲ್ಲಿ ಶೆಟ್ಟರ್ ದೊಡ್ಡ ಅಂತರದ ಜಯ ದಾಖಲಿಸಿದ್ದಾರೆ. ಹಾಗಾಗಿ, ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕರಾದ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಇದರ ಮಧ್ಯೆ ಶೆಟ್ಟರ್ ದೆಹಲಿ ನಾಯಕರ ಜೊತೆ ನೇರ ಸಂಪರ್ಕದಲ್ಲಿದ್ದು, ಸಚಿವ ಸ್ಥಾನಕ್ಕೆ ಲಾಬಿ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಶೆಟ್ಟರ್ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ. ಜೊತೆಗೆ ಅವರ ರಾಜಕೀಯ ಅನುಭವ ಹಾಗೂ ಹಿರಿತನಕ್ಕೆ ಹೈಕಮಾಂಡ್ ಮಣೆ ಹಾಕುವ ಸಂಭವ ಹೆಚ್ಚಿದೆ. ಹೀಗಾಗಿ ದೆಹಲಿ ಮಟ್ಟದಲ್ಲಿ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರಾಗಿ ಪೂರ್ಣಾವಧಿ ಕೆಲಸ ಮಾಡಿದ್ದಾರೆ. ಆದರೆ, ಈ ಸಲ ಜೋಶಿ ನಿರೀಕ್ಷಿತ ಲೀಡ್ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಸತತ ಐದನೇ ಬಾರಿ ಆಯ್ಕೆಯಾಗಿರುವ ಅವರು ಒಂದು ಲಕ್ಷಕ್ಕಿಂತ ಕಡಿಮೆ ಅಂತರದಿಂದ ಗೆಲುವು ಪಡೆದಿದ್ದಾರೆ.
ಮತ್ತೊಂದೆಡೆ, ಹಾವೇರಿ-ಗದಗ ಸಂಸದರಾಗಿ ಆಯ್ಕೆಯಾದ ಬೊಮ್ಮಾಯಿ ಸಹ ಸಚಿವ ಸ್ಥಾನಕ್ಕಾಗಿ ಮುಂಚೂಣಿಯಲ್ಲಿದ್ದಾರೆ. ಆದರೆ, ಅವರೂ ಸಹ ಕಡಿಮೆ ಲೀಡ್ ಪಡೆದಿದ್ದಾರೆ. ಇದೇ ವೇಳೆ, ಜಗದೀಶ್ ಶೆಟ್ಟರ್ ಹೊಸ ಕ್ಷೇತ್ರ ಹಾಗೂ ಹೊಸ ಮುಖವಾದರೂ 1.7 ಲಕ್ಷ ಮತಗಳ ಅಂತರದಿಂದ ಜಯ ದಾಖಲಿಸಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ಪ್ರಸಕ್ತ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದಿಂದ ಶೆಟ್ಟರ್‌ಗೆ ಸಚಿವ ಸ್ಥಾನ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ:ಸಂಸತ್ಗೆ ಜಾರಕಿಹೊಳಿ ಕುಟುಂಬದ ಮೊದಲ ಕುಡಿ ಎಂಟ್ರಿ: ಚೊಚ್ಚಲ ಬಾರಿಗೆ ಪಾರ್ಲಿಮೆಂಟ್ಗೆ ಶೆಟ್ಟರ್