ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ದ್ವಿಚಕ್ರ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನ ಎಲ್ಐಸಿ ಕಚೇರಿ ಮುಂಭಾಗ ಸೋಮವಾರ ನಡೆದಿದೆ.
ಸೋಮವಾರ ಬೆಳಗ್ಗೆ ಎಲ್ಐಸಿ ಕಚೇರಿಯಲ್ಲಿ ಕೆಲಸ ಮುಗಿಸಿ, ಉಪ್ಪಿನಂಗಡಿಗೆ ತೆರಳಲು ರಸ್ತೆ ದಾಟುತ್ತಿದ್ದ ಉಪ್ಪಿನಂಗಡಿ ಸಮೀಪದ ನಟ್ಟಿಬೈಲು ಎಂಬಲ್ಲಿನ ನಿವಾಸಿ ಕೆ.ಸದಾರಾಮ ಅವರ ಪತ್ನಿ ಸರಸ್ವತಿ (50) ಅವರಿಗೆ ಸ್ಕೂಟರ್ ಒಂದು ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಯ ಭಾಗಕ್ಕೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ತುಂಬೆಯಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾತ್ರಿ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು. ಪತಿ ಎಲ್ಐಸಿ ಏಜೆಂಟ್ ಆಗಿದ್ದು, ಕಚೇರಿಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಇವರು ಬಂದಿದ್ದರು ಎನ್ನಲಾಗಿದೆ. ಪಾಣೆ ಮಂಗಳೂರಿನ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಸ್ವತಿ ಅವರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕಾರು ಡಿಕ್ಕಿಯಾಗಿ ವೃದ್ಧೆ ಸಾವು: ಮಗನ ಅಂಗಡಿ ಹೊರಗೆ ಕುಳಿತುಕೊಂಡಿದ್ದ ವೃದ್ಧೆಯೊಬ್ಬರಿಗೆ ಕಾರೊಂದು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಪಾಲೆದಮರ ಎಂಬಲ್ಲಿ ಭಾನುವಾರ ನಡೆದಿದೆ. ವಾಮದಪದವು ನಿವಾಸಿ ಸುಮತಿ (91) ಅವರು ಮೃತಪಟ್ಟ ಮಹಿಳೆಯಾಗಿದ್ದಾರೆ.
ಸುಮತಿ ಅವರು ಮಗ ಮಂಜುನಾಥ್ ಅವರ ದಿನಸಿ ಅಂಗಡಿಯ ಹೊರಗಡೆ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಫೆ.23ರ ಸುಮಾರು 6.45 ರ ಸಮಯದಲ್ಲಿ ಬಂಟ್ವಾಳ ಮಣಿಹಳ್ಳ ಕಡೆಯಿಂದ ವಾಮದಪದವು ಕಡೆಗೆ ಕಾರು ಚಲಾಯಿಸಿಕೊಂಡು ಬಂದ ಮಹಿಳೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೇ ಕಾರು ಅಂಗಡಿಯೊಳಗೆ ನುಗ್ಗಿದೆ. ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುಮಾರು 11.45ರ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಇವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಅಪಘಾತ ನಡೆದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪುಲ್ ವೈರಲ್ ಆಗಿದೆ. ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಹಾಕುಂಭದಿಂದ ವಾಪಸ್ ಬರುವಾಗ ಭೀಕರ ಅಪಘಾತ: ಗೋಕಾಕ್ನ 6 ಜನ ಸ್ಥಳದಲ್ಲೇ ಸಾವು