ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ಡೆಂಗ್ಯೂ ಹೆಚ್ಚಳ; ಮೆಡಿಕಲ್ ಎಮರ್ಜೆನ್ಸಿ ಘೋಷಿಸುವಂತೆ ಜಗದೀಶ ಶೆಟ್ಟರ್ ಆಗ್ರಹ - MP Jagadish Shettar - MP JAGADISH SHETTAR

ಸಂಸದ ಜಗದೀಶ್​ ಶೆಟ್ಟರ್ ಅವರು ಡೆಂಗ್ಯೂ ಹೆಚ್ಚಳದ ಕುರಿತು ಮಾತನಾಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಎಮರ್ಜೆನ್ಸಿ ಘೋಷಿಸುವಂತೆ ಒತ್ತಾಯಿಸಿದ್ದಾರೆ.

MP Jagadish Shettar
ಸಂಸದ ಜಗದೀಶ್ ಶೆಟ್ಟರ್ (ETV Bharat)

By ETV Bharat Karnataka Team

Published : Jul 9, 2024, 5:03 PM IST

ಸಂಸದ ಜಗದೀಶ್ ಶೆಟ್ಟರ್ (ETV Bharat)

ಬೆಳಗಾವಿ :ರಾಜ್ಯದಲ್ಲಿ ಡೆಂಗ್ಯೂ ಕೇಸ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೆಡಿಕಲ್ ಎಮರ್ಜೆನ್ಸಿ ಘೋಷಿಸುವ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದಿದ್ದಾರೆ. ಈ ರೀತಿ ನಿರ್ಲಕ್ಷ್ಯ ವಹಿಸಿದರೆ ಮುಂದೆ ಯಾವುದೇ ಸಂದರ್ಭದಲ್ಲಿ ಅಂಥ ಸ್ಥಿತಿ ಬರಬಹುದು. ಆದ್ದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸುವಂತೆ ಸಂಸದ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲಾಸ್ಪತ್ರೆಗೆ ತಮ್ಮ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದ ಜಗದೀಶ್ ಶೆಟ್ಟರ್, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಬಳಿಕ ಡೆಂಗ್ಯೂ ಕೇಸ್, ಚಿಕಿತ್ಸೆ ಸೇರಿ ಮತ್ತಿತರ ವಿಚಾರಗಳ ಬಗ್ಗೆ ಅಲ್ಲಿನ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಡೆಂಗ್ಯೂ ಹೆಚ್ಚು ಪ್ರಕರಣಗಳು ಬರುತ್ತಿವೆ. ಆದರೆ, ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವ ಮಾಹಿತಿ ಇದೆ. ಹೀಗಾಗಿ ಬಿಮ್ಸ್ ಆಸ್ಪತ್ರೆಗೆ ಇಂದು ಭೇಟಿ ನೀಡಿದಾಗ 189 ಡೆಂಗ್ಯೂ ಬಾಧಿತರು ಅಡ್ಮಿಟ್ ಆಗಿದ್ದಾರೆ. ಡಿಹೆಚ್ಒ ಅವರು ಜಿಲ್ಲಾದ್ಯಂತ 177 ಕೇಸ್ ಬಂದಿವೆ ಅಂತಾ ಹೇಳಿದ್ದಾರೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಪ್ರಕರಣ ಹೆಚ್ಚಾಗಿವೆ ಎಂದರು.

ಇದೇ ವಾರದಲ್ಲಿ 48 ಪ್ರಕರಣಗಳು ಹೆಚ್ಚಾಗಿವೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡುವಂತೆ ಸೂಚನೆ ನೀಡಿದ್ದೇನೆ. ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ತಗೊಳ್ಳಬೇಕು. ಇನ್ನು ಗೋವಾ, ಮಹಾರಾಷ್ಟ್ರದ ರೋಗಿಗಳು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮಳೆ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮ‌ ಕೈಗೊಳ್ಳುವಂತೆ ನಿನ್ನೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ಡಿಸಿ, ಜಿಪಂ ಸಿಇಒ ಅವರಿಗೆ ಎಚ್ಚರಿಕೆ ನೀಡಿದ್ದು, ಇಂದಿನ ಪತ್ರಿಕೆಯಲ್ಲಿ ಬಂದಿದೆ. ಅಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ಹಾಗಾಗಿ, ಆಡಳಿತ ವ್ಯವಸ್ಥೆ ಕುಸಿದಾಗ ಈ ರೀತಿ ಆಗುತ್ತದೆ ಎಂದರು.

ಆಡಳಿತ ವ್ಯವಸ್ಥೆ ಸರಿಯಾಗಿರಲು ಆಯಾ ಡಿಸಿ, ಸಿಇಒ, ಇಲಾಖೆಗಳ ಮುಖ್ಯಸ್ಥರು ಕ್ರಿಯಾಶೀಲರಾಗಿರಬೇಕಾಗುತ್ತದೆ. ನಿನ್ನೆಯ ಸಿಎಂ ಸಭೆ ನೋಡಿದರೆ ಇನ್ನೂ ಅಧಿಕಾರಿಗಳು ಎಚ್ಚರಗೊಂಡಿಲ್ಲ ಎಂಬುದು ತಿಳಿಯುತ್ತದೆ‌. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಹಾಗಾಗಿ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡು ಹೆಚ್ಚಿನ‌ ಗಮನಹರಿಸುವಂತೆ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.

ಉಚಿತ ಡೆಂಗ್ಯೂ ಪರೀಕ್ಷೆ ಮತ್ತು ತಾಲೂಕುವಾರು ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದೆ. ಕೇಸ್​ಗಳು ಹೆಚ್ಚಾದರೆ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲೆಲ್ಲಾ ವೈದ್ಯರ ತಂಡ ಕಳಿಸಿ ಪರೀಕ್ಷೆ ಮಾಡಬೇಕು ಎಂದು ಆಗ್ರಹಿಸಿದರು. ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿ ಭಾಗದಲ್ಲಿ ಅಷ್ಟೊಂದು ಮುಂಜಾಗ್ರತೆ ವಹಿಸದ ವಿಚಾರಕ್ಕೆ ಅಲ್ಲಿನ ವರದಿ ನೋಡಿಕೊಂಡು, ಇಲ್ಲಿ ಏನಾದರೂ ಝಿಕಾ ವೈರಸ್ ಕಂಡು ಬಂದರೆ ಒಟ್ಟಾರೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.

ಒಂದು ಕಡೆ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಗಳು ಸ್ವಚ್ಛತೆ ಕೈಗೊಳ್ಳಬೇಕು. ನಾಗರಿಕರು ಕೂಡ ಸ್ವಚ್ಛತೆ, ಶಿಸ್ತಿನ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು‌. ಎಲ್ಲವನ್ನು ಸರ್ಕಾರದ ಮೇಲೆ ಹಾಕುವುದಲ್ಲ ಎಂದು ಸಾರ್ವಜನಿಕರಿಗೆ ಜಗದೀಶ ಶೆಟ್ಟರ್ ಕಿವಿಮಾತು ಹೇಳಿದರು.

ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ‌. ಮಹೇಶ್ ಕೋಣಿ, ಬಿಮ್ಸ್ ನಿರ್ದೇಶಕ ಡಾ‌. ಅಶೋಕಕುಮಾರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ್ ಇದ್ದರು.

ಇದನ್ನೂ ಓದಿ :ಮಕ್ಕಳಿಗೆ ಡೆಂಗ್ಯೂ ಬಾಧೆ​: ರಾಜ್ಯದಲ್ಲಿ ಪ್ರಕರಣಗಳು ಏರಿಕೆ; ಝಿಕಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ, ಉಚಿತ ಚಿಕಿತ್ಸೆ - Dengue Cases

ABOUT THE AUTHOR

...view details